AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೇಮ್ ಚೇಂಜರ್’ಗೆ ಹೈಕೋರ್ಟ್​ನಿಂದ ಹೊಡೆತ, ಯೂ ಟರ್ನ್ ಹೊಡೆದ ತೆಲಂಗಾಣ ಸರ್ಕಾರ

Game Changer: ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆದ ಮೊದಲ ದಿನ 51 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಕಲೆಕ್ಷನ್ ಮಾಡಿದೆ. ಆದರೆ ಎರಡನೇ ದಿನಕ್ಕೆ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಹೈಕೋರ್ಟ್ ಹೊಡೆತ ನೀಡಿದೆ. ಅದರ ಬೆನ್ನಲ್ಲೆ ತೆಲಂಗಾಣ ಸರ್ಕಾರ ಸಹ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಶಾಕ್ ನೀಡಿದೆ.

‘ಗೇಮ್ ಚೇಂಜರ್’ಗೆ ಹೈಕೋರ್ಟ್​ನಿಂದ ಹೊಡೆತ, ಯೂ ಟರ್ನ್ ಹೊಡೆದ ತೆಲಂಗಾಣ ಸರ್ಕಾರ
Game Changer
ಮಂಜುನಾಥ ಸಿ.
|

Updated on: Jan 12, 2025 | 10:06 AM

Share

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿ ಎರಡು ದಿನಗಳಾಗಿವೆ. ಆದರೆ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ತೆಲಂಗಾಣ ಸರ್ಕಾರ ಸಿನಿಮಾಕ್ಕೆ ಶಾಕ್ ನೀಡಿದೆ. ‘ಗೇಮ್ ಚೇಂಜರ್’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮತ್ತು ಸ್ಪೆಷಲ್ ಶೋಗಳಿಗೆ ನೀಡಿದ್ದ ಅನುಮತಿಯನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಇದರಿಂದಾಗಿ ‘ಗೇಮ್ ಚೇಂಜರ್’ ಸಿನಿಮಾ ತೆಲಂಗಾಣದಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಅನ್ನು ಕಾಣುವುದಿಲ್ಲ ಎಂಬುದು ಸ್ಪಷ್ಟ. ತೆಲಂಗಾಣ ಸರ್ಕಾರ ಮಾತ್ರವೇ ಅಲ್ಲದೆ ಹೈಕೋರ್ಟ್​ನಲ್ಲಿಯೂ ಸಹ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಹಿನ್ನಡೆ ಎದುರಾಗಿದೆ.

‘ಪುಷ್ಪ 2’ ಬಿಡುಗಡೆ ಸಮಯದಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಘಟನೆ ಬಳಿಕ ಸಿಎಂ ರೇವಂತ್ ರೆಡ್ಡಿ ಇನ್ನು ಮುಂದೆ ತೆಲಂಗಾಣದಲ್ಲಿ ಯಾವುದೇ ವಿಶೇಷ ಶೋಗೆ ಅನುಮತಿ ನೀಡುವುದಿಲ್ಲ, ಟಿಕೆಟ್ ದರ ಹೆಚ್ಚಳವೂ ಇರುವುದಿಲ್ಲ ಎಂದಿದ್ದರು. ಆದರೆ ‘ಗೇಮ್ ಚೇಂಜರ್’ ಸಿನಿಮಾಕ್ಕೆ ವಿಶೇಷ ಶೋಗೆ ಅನುಮತಿ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗಿತ್ತು. ಇದನ್ನು ವಿರೋಧಿಸಿ ಕೆಲವರು ತೆಲಂಗಾಣ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:2ನೇ ದಿನ ‘ಗೇಮ್ ಚೇಂಜರ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಯಾವ ಆಧಾರದ ಮೇಲೆ ನೀವು ಟಿಕೆಟ್ ದರ ಹೆಚ್ಚಳ ಮಾಡಿದಿರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸಿನಿಮಾದ ವಿಶೇಷ ಶೋಗೆ ನೀಡಿರುವ ಅನುಮತಿಯನ್ನು ಜನರ ಆರೋಗ್ಯ ಭದ್ರತೆಗೆ ಅಪಾಯ ಇರುವ ನಿರ್ಣಯ ಎಂದು ಟೀಕಿಸಿದ್ದು, ‘ಹೈದರಾಬಾದ್​, ನಿದ್ದೆ ಮಾಡದ ನಗರ ನ್ಯೂಯಾರ್ಕ್ ಅಲ್ಲ, ಜನ ಯಾವಾಗಲಾದರೂ ಮಲಗಬೇಕು ತಾನೆ ಅದಕ್ಕೆ ಅವಕಾಶ ನೀಡದಿದ್ದರೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ. ಸಿನಿಮಾಕ್ಕೆ ನೀಡಲಾಗಿರುವ ವಿಶೇಷ ಶೋಗೆ ಅನುಮತಿಯ ನಿರ್ಣಯವನ್ನು ಮರು ಪರಿಶೀಲನೆ ಮಾಡುವಂತೆ ಹೈಕೋರ್ಟ್, ರಾಜ್ಯ ಗೃಹ ಕಾರ್ಯದರ್ಶಿಗೆ ಸೂಚಿಸಿದೆ.

ಹೈಕೋರ್ಟ್​, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ತೆಲಂಗಾಣ ಸರ್ಕಾರ, ‘ಗೇಮ್ ಚೇಂಜರ್’ ಸಿನಿಮಾಕ್ಕೆ ನೀಡಿದ್ದ ಬೆಲೆ ಏರಿಕೆ ಅವಕಾಶ ಮತ್ತು ವಿಶೇಷ ಶೋ ಅವಕಾಶವನ್ನು ಹಿಂಪಡೆದಿದೆ. ‘ಗೇಮ್ ಚೇಂಜರ್’ ಸಿನಿಮಾದ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ಪ್ರತಿ ಟಿಕೆಟ್​ಗೆ 100 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ 50 ರೂಪಾಯಿ ಏರಿಕೆ ಮಾಡಿಕೊಳ್ಳುವಂತೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಇಂದಿನಿಂದ ಬೆಲೆ ಮತ್ತೆ ಮಾಮೂಲಿನಂತೆ ಆಗಿದೆ. ವಿಶೇಷ ಶೋಗಳು ಸಹ ರದ್ದಾಗಿವೆ. ಆದರೆ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳ ಮತ್ತು ವಿಶೇಷ ಶೋಗೆ ಅನುಮತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ