
ಸೂಪರ್ ಸ್ಟಾರ್ ಉಪೇಂದ್ರ (Upendra) ನಟನಾಗಿ ಈಗ ಬಲು ಜನಪ್ರಿಯ. ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಅವರಿಗೆ ಬೇಡಿಕೆ ಇದೆ. ಆದರೆ ನಿರ್ದೇಶಕನಾಗಿ ಉಪೇಂದ್ರ ಕೆಲವು ಕಲ್ಟ್ ಸಿನಿಮಾಗಳನ್ನು ನೀಡಿದ್ದಾರೆ. ಉಪೇಂದ್ರ ಅವರನ್ನು ಹೊರಾಗಿ ವಿಶ್ವದ ಇನ್ಯಾವುದೇ ನಿರ್ದೇಶಕನಿಂದ ಮಾಡಲಾಗದ ಭಿನ್ನವಾದ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಅವುಗಳಲ್ಲಿ ‘ಉಪೇಂದ್ರ’ ಸಹ ಒಂದು. ಉಪೇಂದ್ರ ನಿರ್ದೇಶನದ ಹಳೆಯ ಸಿನಿಮಾಗಳು ಕರ್ನಾಟಕದಲ್ಲಿ ಆಗಾಗ್ಗೆ ಮರು ಬಿಡುಗಡೆ ಆಗುತ್ತಲೇ ಇರುತ್ತವೆ. ಅದರಲ್ಲೂ ‘ಓಂ’ ಸಿನಿಮಾ ಅಂತೂ ಅತಿ ಹೆಚ್ಚು ಬಾರಿ ಮರುಬಿಡುಗಡೆ ಆದ ಸಿನಿಮಾ ಎನಿಸಿಕೊಂಡಿದೆ. ಕೆಲ ತಿಂಗಳ ಹಿಂದೆ ‘ಎ’ ಸಿನಿಮಾ ಅದ್ಧೂರಿಯಾಗಿ ಮರು ಬಿಡುಗಡೆ ಆಗಿತ್ತು. ಇದೀಗ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಆದರೆ ಕನ್ನಡದಲ್ಲಿ ಅಲ್ಲ.
ಉಪೇಂದ್ರ ನಿರ್ದೇಶನ ಮಾಡಿರುವ ‘ಉಪೇಂದ್ರ’ ಸಿನಿಮಾ ಅದ್ಧೂರಿಯಾಗಿ ಮರು ಬಿಡುಗಡೆ ಆಗುತ್ತಿದೆ. ಆದರೆ ಕನ್ನಡದಲ್ಲಿ ಅಲ್ಲ ಬದಲಿಗೆ ತೆಲುಗಿನಲ್ಲಿ. ಹೌದು, ‘ಪುಷ್ಪ’, ‘ಪುಷ್ಪ 2’ ಇನ್ನೂ ಕೆಲವು ಭಾರಿ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಅವರು ‘ಉಪೇಂದ್ರ’ ಸಿನಿಮಾವನ್ನು ಅದ್ಧೂರಿಯಾಗಿ ಮರು ಬಿಡುಗಡೆ ಮಾಡುತ್ತಿದ್ದಾರೆ. ಅದೂ ತೆಲುಗಿನಲ್ಲಿ.
ಉಪೇಂದ್ರ ಅವರ ಸಿನಿಮಾಗಳು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಕಲ್ಟ್ ಕ್ಲಾಸಿಕ್ಗಳಾಗಿವೆ. ಕನ್ನಡದಲ್ಲಿ ಇರುವಂತೆಯೇ ತೆಲುಗು ಚಿತ್ರರಂಗದಲ್ಲಿಯೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಲವು ಸ್ಟಾರ್ ನಟರುಗಳೇ ಉಪೇಂದ್ರ ಅವರ ಅಭಿಮಾನಿಗಳಾಗಿದ್ದಾರೆ. ಉಪೇಂದ್ರ ತೆಲುಗಿನಲ್ಲಿಯೂ ಸಹ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದಿನ ಉಪೇಂದ್ರ ಅವರ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿದ್ದು ಸಹ ಇದೆ. ಈಗ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ:ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿದೆ ನೋಡಿ..
ನಾಳೆ ಅಂದರೆ ಅಕ್ಟೋಬರ್ 11 ರಂದೇ ‘ಉಪೇಂದ್ರ’ ಸಿನಿಮಾ ಹೈದರಾಬಾದ್, ವಿಶಾಖಪಟ್ಟಣಂ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣದ ಹಲವು ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ನವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್ನ ಮುಖ್ಯ ಥಿಯೇಟರ್ ಸಂಧ್ಯಾ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
‘ಉಪೇಂದ್ರ’ ಸಿನಿಮಾ 1999 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾನಲ್ಲಿ ರವೀನಾ ಟಂಡನ್, ದಾಮಿನಿ ಮತ್ತು ಪ್ರೇಮಾ ನಾಯಕಿಯರಾಗಿ ನಟಿಸಿದ್ದರು. ಉಪೇಂದ್ರ ಅವರು ನಾನು ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಮನೊರಂಜನೆ ಜೊತೆಗೆ ಬದುಕಿನ ಫಿಲಾಸಫಿ ಇದ್ದ ಚಿತ್ರಕತೆಯನ್ನು ಸಿನಿಮಾ ಹೊಂದಿತ್ತು. ಸಿನಿಮಾನಲ್ಲಿ ಮಾರುಮುತ್ತು ವಿಲನ್. ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಎಲ್ಲ ಹಾಡುಗಳು ಬ್ಲಾಕ್ ಬಸ್ಟರ್ ಆಗಿವೆ. ಸಿನಿಮಾದ ‘ಏನಿಲ್ಲ, ಏನಿಲ್ಲ’ ಹಾಡು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಟ್ರೆಂಡ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ