
ತಮಿಳು ಬಿಗ್ ಬಾಸ್ ಸೀಸನ್ 3ರ ಖ್ಯಾತಿಯ ವನಿತಾ ವಿಜಯಕುಮಾರ್ ತಮ್ಮ ನೇರ ನುಡಿಗಳಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ನಿಂದಾಗಿ ಅವರ ಅಭಿಮಾನಿ ಬಳಗ ಹಿರಿದಾಗಿತ್ತು. ಇತ್ತೀಚೆಗೆ ಅವರು ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಏರ್ಪಡಿಸಿದ ‘ಬಿಗ್ ಬಾಸ್ ಜೋಡಿಗಳ್’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಈಗ ಅವರು ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, ಹಿರಿಯ ನಟಿಯ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಗ್ ಬಾಸ್ 4 ಖ್ಯಾತಿಯ ಸುರೇಶ್ ಚಕ್ರವರ್ತಿಗೆ ವನಿತಾ ಜತೆಯಾಗಿದ್ದರು. ಇವರ ಡಾನ್ಸ್ ಪರ್ಫಾರ್ಮೆನ್ಸ್ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಆದರೆ, ಈಗ ಅವರು ಏಕಾಏಕಿ ಬಿಗ್ ಬಾಸ್ ಜೋಡಿಗಳ್ ತೊರೆಯುತ್ತಿರುವುದಾಗಿ ವಿಜಯ್ ಟಿವಿಗೆ ಪತ್ರ ಬರೆದಿದ್ದಾರೆ.
ವನಿತಾ ಅವರು ಚಾನೆಲ್ಗೆ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್ 3, ಕೂಕು ವಿತ್ ಕೋಮಲಿ ಸೇರಿ ಹಲವು ಶೋಗಳಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ವನಿತಾ ಬರೆದುಕೊಂಡಿದ್ದಾರೆ. ಅಲ್ಲದೆ, ಹಿರಿಯ ನಟಿಯಿಂದ ನನಗೆ ಬೆದರಿಕೆ ಇದೆ. ಅವರು ಶೋ ಹಾಗೂ ಚಾನೆಲ್ ಎರಡು ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದಾರೆ ಎಂಬುದಾಗಿ ವನಿತಾ ಹೇಳಿಕೊಂಡಿದ್ದಾರೆ.
ಆ ಹಿರಿಯ ನಟಿ ಯಾರು ಎಂದು ವನಿತಾ ಎಲ್ಲಿಯೂ ಹೆಸರು ಉಲ್ಲೇಖ ಮಾಡಿಲ್ಲ. ಈ ಶೋ ನಡೆಸಿಕೊಡುವ ನಿರೂಪಕಿ ಮೇಲೆ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ, ವನಿತಾ ಅವರ ಈ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ
Published On - 7:41 pm, Mon, 5 July 21