
ಕನ್ನಡದಲ್ಲಿ ಸುದೀಪ್ (Sudeep) ನಟನೆಯ ‘ರನ್ನ’, ‘ಮಾಣಿಕ್ಯ’ ಹಾಗೂ ‘ಮ್ಯಾಕ್ಸ್’ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಕನ್ನಡಿಗರಿಗೂ ಹತ್ತಿರವಾದವರು ನಟಿ ವರಲಕ್ಷ್ಮಿ ಶರತ್‌ಕುಮಾರ್. ಅವರು ಈಗ ಟಾಲಿವುಡ್‌ನಲ್ಲಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಬಲವಾದ ಪಾತ್ರಗಳ ಮೂಲಕ ಅಲ್ಲಿನ ಪ್ರೇಕ್ಷಕರ ಮನಗೆದ್ದಿದ್ದ ವರಲಕ್ಷ್ಮಿ ವಿರುದ್ಧ ಈಗ ನಿರ್ದೇಶಕರೊಬ್ಬರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ತೆಲುಗಿನಲ್ಲಿ ‘ಪೊಲೀಸ್ ಕಂಪ್ಲೇಂಟ್’ ಹೆಸರಿನ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಚಿತ್ರದ ನಿರ್ದೇಶಕರು ವರಲಕ್ಷ್ಮಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವರಲಕ್ಷ್ಮಿ ಅವರು ಚಿತ್ರತಂಡಕ್ಕೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬುದು ಅವರ ಮುಖ್ಯ ದೂರು. ಇದು ಚರ್ಚೆಯ ವಿಷಯವಾಗಿದೆ.
‘ಈ ಸಿನಿಮಾಗೆ ವರಲಕ್ಷ್ಮಿ 75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅವರ ವೈಯಕ್ತಿಕ ಸಿಬ್ಬಂದಿಯ ಖರ್ಚಿಗಾಗಿಯೇ ದಿನಕ್ಕೆ ಬರೋಬ್ಬರಿ 50,000 ರೂಪಾಯಿ ನೀಡಲಾಗಿದೆ. ಸಿನಿಮಾದ ಪ್ರಚಾರದ ಈವೆಂಟ್‌ಗಳಲ್ಲಿ ಭಾಗವಹಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ, ಅವರು ಕೊಟ್ಟಿದ್ದು ಕೇವಲ 40 ನಿಮಿಷ ಮಾತ್ರ’ ಎಂಬುದು ನಿರ್ದೇಶಕರ ಆರೋಪ. ‘ತಮ್ಮ ಇತರ ಚಿತ್ರದ ಕೆಲಸಗಳ ನೆಪ ಹೇಳಿ, ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಡಬ್ಬಿಂಗ್ ಅನ್ನು ವರಲಕ್ಷ್ಮಿ ಅವರು ಉದ್ದೇಶಪೂರ್ವಕವಾಗಿ ತಡ ಮಾಡಿದ್ದಾರೆ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಕಿಚ್ಚನ್ ಸರ್ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ
ವರಲಕ್ಷ್ಮಿ ಅವರಿಗೆ ವಿವಾದಗಳು ಸುತ್ತಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಅವರು ನಿರ್ದೇಶನ ಮಾಡಿದ್ದ ‘ಎಸ್ ಸರಸ್ವತಿ’ ಚಿತ್ರದ ಪ್ರಚಾರದ ಸಮಯದಲ್ಲೂ ದೊಡ್ಡ ಗದ್ದಲವೇ ನಡೆದಿತ್ತು. ಈ ಚಿತ್ರಕ್ಕೆ ಖ್ಯಾತ ಬರಹಗಾರ ಸಾಯಿ ಮಾಧವ್ ಬುರ್ರಾ ಕಥೆ ಬರೆದಿದ್ದರು. ‘ನನ್ನ ಕಥೆಗೆ ಚಿತ್ರತಂಡದವರು ಇಲ್ಲದ ಬದಲಾವಣೆಗಳನ್ನು ಮಾಡಿ, ಕಥೆಯನ್ನೇ ಸಂಪೂರ್ಣವಾಗಿ ಹಾಳುಗೆಡವಿದ್ದಾರೆ’ ಎಂದು ಅವರು ಬಹಿರಂಗವಾಗಿಯೇ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು. ಆ ಸಮಯದಲ್ಲಿ ವರಲಕ್ಷ್ಮಿ ತಮ್ಮನ್ನು ತಾವು ಸಮರ್ಥಿಸಿಕೊಂಡು, ವಿವಾದಕ್ಕೆ ಫುಲ್‌ಸ್ಟಾಪ್ ಇಡಲು ಪ್ರಯತ್ನಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.