‘ವಾರಣಾಸಿ’ ಸಿನಿಮಾಕ್ಕೆ ಸಂಕಷ್ಟ, ಹೆಸರು ಬದಲಾಯಿಸಿದ ರಾಜಮೌಳಿ

Varanasi movie name: ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾಕ್ಕೆ ‘ವಾರಣಾಸಿ’ ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರು ಘೋಷಿಸಲು ಭಾರಿ ದೊಡ್ಡ ಕಾರ್ಯಕ್ರಮವನ್ನೇ ರಾಜಮೌಳಿ ಮಾಡಿದ್ದರು. ಆದರೆ ಸಿನಿಮಾದ ಹೆಸರು ಇದೀಗ ವಿವಾದಕ್ಕೆ ಸಿಲುಕಿದೆ. ಇದೇ ಕಾರಣಕ್ಕೆ ರಾಜಮೌಳಿ ಅವರು ಸಿನಿಮಾದ ಹೆಸರನ್ನು ಬದಲಾವಣೆ ಮಾಡಿದ್ದಾರೆ.

‘ವಾರಣಾಸಿ’ ಸಿನಿಮಾಕ್ಕೆ ಸಂಕಷ್ಟ, ಹೆಸರು ಬದಲಾಯಿಸಿದ ರಾಜಮೌಳಿ
Varanasi

Updated on: Nov 30, 2025 | 3:45 PM

ರಾಜಮೌಳಿ (Rajamlouli) ನಿರ್ದೇಶನ ಮಾಡಿ, ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದ ಹೆಸರನ್ನು ಇತ್ತೀಚೆಗಷ್ಟೆ ರಾಜಮೌಳಿ ಬಿಡುಗಡೆ ಮಾಡಿದ್ದರು. ಸಿನಿಮಾಕ್ಕೆ ‘ವಾರಣಾಸಿ’ ಎಂದು ಹೆಸರಿಡಲಾಗಿದ್ದು, ಸಿನಿಮಾ ಬಿಡುಗಡೆ ಆಗಲಿರುವ ಎಲ್ಲ ಭಾಷೆಗಳಲ್ಲಿಯೂ ಸಿನಿಮಾದ ಹೆಸರು ‘ವಾರಣಾಸಿ’ ಎಂದೇ ಇರಲಿದೆ. ಆದರೆ ಸಿನಿಮಾದ ಹೆಸರು ಘೋಷಿಸಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಸಣ್ಣ ವಿವಾದವೊಂದು ಸೃಷ್ಟಿಯಾಗಿತ್ತು. ಅಸಲಿಗೆ ‘ವಾರಣಾಸಿ’ ಹೆಸರನ್ನು ಈ ಮೊದಲು ಬೇರೆ ನಿರ್ಮಾಣ ಸಂಸ್ಥೆಯೊಂದು ನೊಂದಣಿ ಮಾಡಿಸಿದೆ. ಇದೇ ಕಾರಣಕ್ಕೆ ತೆಲುಗಿನಲ್ಲಿ ಮಾತ್ರವೇ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ ರಾಜಮೌಳಿ.

‘ವಾರಣಾಸಿ’ ಸಿನಿಮಾವನ್ನು ತೆಲುಗಿನ ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯೊಂದು ನೊಂದಣಿ ಮಾಡಿಸಿದೆ. ತೆಲುಗು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್​​ನವರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ನವರಿಗೆ ‘ವಾರಣಾಸಿ’ ಹೆಸರಿನ ರಿಜಿಸ್ಟರ್ ಮಾಡಿ ದಾಖಲೆಗಳನ್ನು ನಿಡಿದ್ದಾರೆ. 2023 ರಿಂದಲೂ ಈ ಹೆಸರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಬಳಿಯೇ ಇದೆ. ಜೂನ್ 24, 2025ರಂದು ಹೆಸರನ್ನು ಮತ್ತೆ ಒಂದು ವರ್ಷಗಳ ಕಾಲಕ್ಕೆ ನೊಂದಣಿ ಮಾಡಿಸಲಾಗಿದೆ.

ತೆಲುಗಿನಲ್ಲಿ ‘ವಾರಣಾಸಿ’ ಹೆಸರು ಬೇರೆಯವರ ಬಳಿ ಇರುವ ಕಾರಣ ರಾಜಮೌಳಿ, ತಮ್ಮ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ. ಹಾಗೆಂದು ಸಂಪೂರ್ಣವಾಗಿ ಬದಲಿಸಿಲ್ಲ, ಬದಲಿಗೆ ‘ವಾರಣಾಸಿ’ ಸಿನಿಮಾವನ್ನು ‘ರಾಜಮೌಳಿ ವಾರಣಾಸಿ’ ಎಂದು ನೊಂದಣಿ ಮಾಡಿಸಿದ್ದಾರೆ. ತೆಲುಗಿನಲ್ಲಿ ಮಾತ್ರ ‘ವಾರಣಾಸಿ’ ಸಿನಿಮಾ ‘ರಾಜಮೌಳಿ ವಾರಣಾಸಿ’ ಹೆಸರಿನಿಂದ ಬಿಡುಗಡೆ ಆಗಲಿದೆ. ಭಾರಿ ದೊಡ್ಡ ಕಾರ್ಯಕ್ರಮ ಮಾಡಿ ಸಿನಿಮಾದ ಹೆಸರನ್ನು ಘೋಷಿಸಿರುವ ಕಾರಣ ಈಗ ಮತ್ತೆ ಬೇರೆ ಹೆಸರು ಇಡಲು ಕಷ್ಟ, ಹಾಗಾಗಿ ಸಿನಿಮಾದ ಹೆಸರನ್ನು ಹೆಚ್ಚು ಬದಲಾವಣೆ ಮಾಡದೆ ‘ರಾಜಮೌಳಿ ವಾರಣಾಸಿ’ ಎಂದು ಇಡಲಾಗಿದೆ.

ಇದನ್ನೂ ಓದಿ:ಗ್ರ್ಯಾಂಡ್ ಟೈಟಲ್ ಲಾಂಚ್ ಈವೆಂಟ್ ವ್ಯರ್ಥ; ಬದಲಾಗಲಿದೆ ‘ವಾರಣಾಸಿ’ ಟೈಟಲ್?

ಸಿನಿಮಾದ ಪೋಸ್ಟರ್​​ಗಳಲ್ಲಿ ‘ವಾರಣಾಸಿ’ ಹೆಸರು ದೊಡ್ಡದಾಗಿ ಇರಲಿದ್ದು, ರಾಜಮೌಳಿ ಎಂಬುದನ್ನು ಚಿಕ್ಕದಾಗಿ ಪ್ರದರ್ಶಿಸಲಾಗುತ್ತದೆ. ಇನ್ನು ಸಿಬಿಎಫ್​​ಸಿ ಪ್ರಮಾಣ ಪತ್ರದಲ್ಲಿ ಸಿನಿಮಾದ ಹೆಸರಿನ ಜಾಗದಲ್ಲಿ ‘ರಾಜಮೌಳಿ ವಾರಣಾಸಿ’ ಎಂದು ಇರಲಿದೆ. ಈ ಸಮಸ್ಯೆ ತೆಲುಗಿನಲ್ಲಿ ಮಾತ್ರವೇ ಆಗಿದೆ. ಹಿಂದಿ, ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ‘ವಾರಣಾಸಿ’ ಹೆಸರಿನಲ್ಲಿಯೇ ಸಿನಿಮಾಕ್ಕೆ ಪ್ರಮಾಣ ಪತ್ರ ಸಿಗಲಿದೆ. ಅದೇ ಹೆಸರಿನಲ್ಲಿ ಬಿಡುಗಡೆ ಸಹ ಆಗಲಿದೆ.

‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ವಿಲನ್. ಸಿನಿಮಾನಲ್ಲಿ ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ಆರ್ ಮಾಧವನ್ ನಟಿಸಿದ್ದಾರೆ. ಸಿನಿಮಾನಲ್ಲಿ ಕೆಲವು ಹಾಲಿವುಡ್ ಸ್ಟಾರ್ ನಟರು ಸಹ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ 2027ರಲ್ಲಿ ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ