ಗ್ರ್ಯಾಂಡ್ ಟೈಟಲ್ ಲಾಂಚ್ ಈವೆಂಟ್ ವ್ಯರ್ಥ; ಬದಲಾಗಲಿದೆ ‘ವಾರಣಾಸಿ’ ಟೈಟಲ್?
ಎಸ್ಎಸ್ ರಾಜಮೌಳಿ ಅವರ 'ವಾರಣಾಸಿ' ಸಿನಿಮಾದ ಶೀರ್ಷಿಕೆ ವಿವಾದ ಸೃಷ್ಟಿ ಮಾಡಿದೆ. ಸಿಎಚ್ ಸುಬ್ಬಾ ರೆಡ್ಡಿ 'ವಾರಣಾಸಿ' (Vaaranasi) ಟೈಟಲ್ ನೋಂದಾಯಿಸಿದ್ದರೆ, ರಾಜಮೌಳಿ 'ವಾರಣಾಸಿ' (Varanasi) ಟೈಟಲ್ ನೋಂದಾಯಿಸಿದ್ದಾರೆ. ಶೀರ್ಷಿಕೆ ಬದಲಾದರೆ ₹27 ಕೋಟಿ ನಷ್ಟವಾಗುವ ಸಾಧ್ಯತೆಯಿದೆ. ಈಗ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮಾತುಕತೆ ನಡೆಯುತ್ತಿದೆ.

ಎಸ್ಎಸ್ ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾಗೆ ‘ವಾರಣಾಸಿ’ ಎಂದು ಟೈಟಲ್ ಇಡಲಾಗಿದೆ. ಈ ಟೈಟಲ್ನ ಇತ್ತೀಚೆಗೆ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಸಿನಿಮಾದ ಟೈಟಲ್ ವಿಚಾರದಲ್ಲಿ ವಿವಾದ ಭುಗಿಲೆದ್ದಿದೆ. ಈ ಟೈಟಲ್ ನಮ್ಮದು ಎಂದು ಸಿಎಚ್ ಸುಬ್ಬಾ ರೆಡ್ಡಿ ಹೇಳಿದ್ದಾರೆ.
‘ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್’ ಸಂಸ್ಥೆಯನ್ನು ಸುಬ್ಬಾ ರೆಡ್ಡಿ ನಡೆಸುತ್ತಿದ್ದಾರೆ. ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅವರು 2023ರಲ್ಲೇ ‘ತೆಲುಗು ಸಿನಿಮಾ ನಿರ್ಮಾಪಕರ ಮಂಡಳಿ’ ಅಲ್ಲಿ ‘ವಾರಣಾಸಿ’ ಟೈಟಲ್ ನೋಂದಣಿ ಮಾಡಿದ್ದಾರೆ. ಜೂನ್ ಅಲ್ಲಿ ಈ ಟೈಟಲ್ನ ಮರು ನೋಂದಣಿ ಮಾಡಿಸಲಾಗಿದ್ದು, 2026ರವರೆಗೆ ಬಳಕೆ ಮಾಡಬಹುದಾಗಿದೆ.
ವಾರಣಾಸಿ ಉಚ್ಚಾರಣೆ ಒಂದೇ ರೀತಿಯಲ್ಲಿ ಇದೆ. ಆದರೆ, ಇಂಗ್ಲಿಷ್ ಸ್ಪೆಲ್ಲಿಂಗ್ನಲ್ಲಿ ವ್ಯತ್ಯಾಸ ಇದೆ. ಸುಬ್ಬಾ ರೆಡ್ಡಿ ಅವರು ನೋಂದಣಿ ಮಾಡಿಸಿದ್ದು ‘Vaaranasi’ ಎಂದು. ರಾಜಮೌಳಿ ನೋಂದಣಿ ಮಾಡಿಸಿದ್ದು ‘Varanasi’ ಎಂದು. ಹೀಗಾಗಿ, ಸುಬ್ಬಾ ರೆಡ್ಡಿ ದೂರು ನೀಡಿದರೆ ಈ ಪ್ರಕರಣ ನಿಲ್ಲುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ‘ವಾರಣಾಸಿ’ ಈವೆಂಟ್ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಖರ್ಚಾಗಿದ್ದು ಇಷ್ಟೊಂದಾ?
ಮಾತುಕತೆಯಿಂದ ಬಗೆಹರಿಯಲಿದೆ ವಿವಾದ?
‘ವಾರಣಾಸಿ’ ಶೀರ್ಷಿಕೆಯ ವಿವಾದವು ಸೌಹಾರ್ದಯುತವಾಗಿ ಬಗೆಹರಿಯುತ್ತದೆ ಎಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭರತ್ ಭೂಷಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಚರ್ಚೆಗಳು ನಡೆಯುತ್ತಿವೆ. ಈ ಸಮಸ್ಯೆ ಸುಗಮವಾಗಿ ಬಗೆಹರಿಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೊಡ್ಡ ಮೊತ್ತದ ಹಣ ವ್ಯರ್ಥ?
ಒಂದೊಮ್ಮೆ ರಾಜಮೌಳಿ ಅವರು ಸಿನಿಮಾದ ಟೈಟಲ್ ಬದಲಿಸಬೇಕಾದ ಪರಿಸ್ಥಿತಿ ಬಂದರೆ ಸಾಕಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾಗಲಿದೆ. ಟೈಟಲ್ ಲಾಂಚ್ಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡದಾದ ಈವೆಂಟ್ ಮಾಡಲಾಗಿತ್ತು. ಇದಕ್ಕೆ 27 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಟೈಟಲ್ ಬದಲಾವಣೆ ಆದರೆ ರಾಜಮೌಳಿ ತಂಡಕ್ಕೆ ಹಿನ್ನಡೆ ಆಗುತ್ತದೆ. ಹಾಗಾಗದಿರಲಿ ಎಂಬುದು ಅಭಿಮಾನಿಗಳ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Thu, 20 November 25




