
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ನಲ್ಲಿ ಮಿಂಚಲು ಎಲ್ಲ ಸ್ಟಾರ್ ನಟರು ಪ್ರಯತ್ನಿಸುತ್ತಿದ್ದಾರೆ. ಆ ಪೈಕಿ ವಿಜಯ್ ದೇವರಕೊಂಡ (Vijay Deverakonda) ಕೂಡ ರೇಸ್ನಲ್ಲಿ ಇದ್ದಾರೆ. ಟಾಲಿವುಡ್ನಲ್ಲಿ ಖ್ಯಾತಿ ಪಡೆದ ಬಳಿಕ ಅವರು ಈಗ ಬಾಲಿವುಡ್ ಮೇಲೆ ಕಣ್ಣಿಟ್ಟಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಆದರೆ ಅವರು ನಟಿಸಿರುವ ಒಂದು ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು. ಹೌದು, ಅವರು ಅಭಿನಯಿಸಿರುವ ‘ಲೈಗರ್’ (Liger) ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನ ಟ್ರೇಲರ್ (Liger Trailer) ಮೂಲಕ ಸದ್ದು ಮಾಡಲು ಚಿತ್ರತಂಡ ಸಜ್ಜಾಗಿದೆ.
ಬಹುನಿರೀಕ್ಷಿತ ‘ಲೈಗರ್’ ಸಿನಿಮಾಗೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ವಿಶ್ವವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲೈಗರ್’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಈಗ ಟ್ರೇಲರ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಜುಲೈ 21ರಂದು ‘ಲೈಗರ್’ ಸಿನಿಮಾದ ಟ್ರೇಲರ್ ಲಾಂಚ್ ಆಗಲಿದೆ. ಅದನ್ನು ತಿಳಿಸುವ ಸಲುವಾಗಿ ಒಂದು ಪೋಸ್ಟರ್ ಹಂಚಿಕೊಳ್ಳಲಾಗಿದೆ. ವಿಜಯ್ ದೇವರಕೊಂಡ ಅವರ ಮೇಲೆ ಅಟ್ಯಾಕ್ ಮಾಡಲು 20ಕ್ಕೂ ಅಧಿಕ ಬಾಕ್ಸರ್ಗಳು ಸುತ್ತುವರಿದಿದ್ದಾರೆ. ಅವರೆಲ್ಲರನ್ನು ಹಿಮ್ಮೆಟ್ಟಿಸಲು ವಿಜಯ್ ದೇವರಕೊಂಡ ಸಜ್ಜಾಗಿದ್ದಾರೆ. ಈ ರೀತಿಯ ಕಾನ್ಸೆಪ್ಟ್ನಲ್ಲಿ ಈ ಪೋಸ್ಟರ್ ಮೂಡಿಬಂದಿದೆ.
ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಅವರು ಬಾಲಿವುಡ್ಗೆ ಕಾಲಿಡುತ್ತಿರುವುದರಿಂದ ಪ್ರಚಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಮತ್ತು ಮುಂಬೈನಲ್ಲಿ ಪ್ರತ್ಯೇಕವಾಗಿ ಟ್ರೇಲರ್ ಲಾಂಚ್ ನಡೆಯಲಿದೆ. ಜುಲೈ 21ರಂದು ಬೆಳಗ್ಗೆ 9.30ಕ್ಕೆ ಹೈದರಾಬಾದ್ನಲ್ಲಿ ಹಾಗೂ ಸಂಜೆ 7.30ಕ್ಕೆ ಹೈದರಾಬಾದ್ನಲ್ಲಿ ದೊಡ್ಡ ಇವೆಂಟ್ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರರಾಗಿದ್ದಾರೆ.
ಈ ಮೊದಲು ಬಿಡುಗಡೆ ಮಾಡಲಾಗಿದ್ದ ಫಸ್ಟ್ ಗ್ಲಿಂಪ್ಸ್ ವಿಡಿಯೋದಿಂದ ‘ಲೈಗರ್’ ಸಿನಿಮಾ ಮೇಲೆ ತುಂಬ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿರುವ ‘ಅಕ್ಡಿ ಪಕ್ಡಿ..’ ಸಾಂಗ್ ಸಹ ಧೂಳೆಬ್ಬಿಸುತ್ತಿದೆ. ಇನ್ನೇನಿದ್ದರೂ ಟ್ರೇಲರ್ ಸದ್ದು ಮಾಡುವುದೊಂದೇ ಬಾಕಿ.
Published On - 10:57 am, Tue, 19 July 22