
ಟಾಲಿವುಡ್ನ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೂ ಮುನ್ನ ತಾವು ಎದುರಿಸಿದ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಈ ಜೋಡಿ ಮೊದಲ ಬಾರಿಗೆ ಜೊತೆಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಜಯ್ ತಾವು ರಶ್ಮಿಕಾ ಬಳಿ ಮದುವೆಯ ಬಗ್ಗೆ ನೂರು ಬಾರಿ ಪ್ರಸ್ತಾಪಿಸಲು ಹೇಳಿದ್ದೇಕೆ ಎಂಬುದರ ಅಸಲಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ವಿಜಯ್ ದೇವರಕೊಂಡ ಈ ಹಿಂದೆ ಪ್ರೀತಿ ಹಾಗೂ ಮದುವೆಯ ವಿಚಾರದಲ್ಲಿ ವಿಭಿನ್ನ ಯೋಚನೆ ಹೊಂದಿದ್ದರು. ವೃತ್ತಿಜೀವನ ಹಾಗೂ ಮಹತ್ವಾಕಾಂಕ್ಷೆಗಳೇ ಮುಖ್ಯವಾಗಿದ್ದ ಕಾರಣ ಅವರು ಆರಂಭದಲ್ಲಿ ಪ್ರೀತಿಯನ್ನು ನಂಬುತ್ತಿರಲಿಲ್ಲ. ಆದರೆ ಕಾಲ ಕಳೆದಂತೆ ರಶ್ಮಿಕಾ ಅವರ ಮೇಲಿನ ಒಡನಾಟ ಪ್ರೀತಿಗೆ ತಿರುಗಿತು. ರಶ್ಮಿಕಾ ಜೊತೆ ಇದ್ದಾಗ ತಮಗೆ ಸಿಗುವ ನೆಮ್ಮದಿ ಹಾಗೂ ಸಮಾಧಾನವೇ ತಮ್ಮ ಜೀವನದ ಅತಿ ದೊಡ್ಡ ಖುಷಿ ಎಂದು ವಿಜಯ್ ಈ ವೇಳೆ ಹಂಚಿಕೊಂಡಿದ್ದಾರೆ.
ಮದುವೆ ಎನ್ನುವುದು ಯಾವುದೇ ಭಾವನಾತ್ಮಕ ಆವೇಶದಲ್ಲಿ ಅಥವಾ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಾಗಬಾರದು ಎಂದು ವಿಜಯ್ ಭಾವಿಸಿದ್ದರು. ಜೀವನದ ಏಳು-ಬೀಳುಗಳಲ್ಲಿ, ಸುಖ-ದುಃಖಗಳಲ್ಲಿ ಮತ್ತು ಎಲ್ಲಾ ಸವಾಲುಗಳನ್ನು ಎದುರಿಸಿದ ಮೇಲೂ ಮದುವೆಯ ನಿರ್ಧಾರ ಗಟ್ಟಿಯಾಗಿ ಉಳಿಯುತ್ತದೆಯೇ ಎಂಬುದನ್ನು ಪರೀಕ್ಷಿಸಲು ಬಯಸಿದ್ದರು. ಈ ಕಾರಣಕ್ಕಾಗಿಯೇ ಅವರು ರಶ್ಮಿಕಾ ಬಳಿ ಮದುವೆಯ ಮಾತುಕತೆಯನ್ನು ಒಂದು ವರ್ಷ ಕಾಲ ನಡೆಸಿದ್ದರು. ಈ ಅವಧಿಯಲ್ಲಿ 100 ಬಾರಿ ಮದುವೆ ಬಗ್ಗೆ ಮಾತನಾಡಿದ್ದರು.
ರಶ್ಮಿಕಾ ಮಂದಣ್ಣ ಕೂಡ ವಿಜಯ್ ಅವರ ಈ ನಡೆಗೆ ಯಾವುದೇ ಬೇಸರ ಮಾಡಿಕೊಂಡಿರಲಿಲ್ಲ. ವಿಜಯ್ ಅವರ ಹಿಂದಿನ ನೋವುಗಳು ಮತ್ತು ಅವರ ಸೂಕ್ಷ್ಮ ಸ್ವಭಾವವನ್ನು ರಶ್ಮಿಕಾ ಅರ್ಥ ಮಾಡಿಕೊಂಡಿದ್ದರು. ಯಾವುದೇ ಸಂದರ್ಭದಲ್ಲೂ ತಮ್ಮಿಬ್ಬರ ಸಂಬಂಧ ಗಟ್ಟಿಯಾಗಿರಬೇಕು ಎಂಬ ಕಾರಣಕ್ಕಾಗಿಯೇ ವಿಜಯ್ ಈ ಪರೀಕ್ಷೆ ಒಡ್ಡಿದ್ದರು ಎಂಬುದನ್ನು ಅವರು ಮನಗಂಡಿದ್ದರು. ಕೊನೆಗೆ ಇಬ್ಬರೂ ತಮ್ಮ ಕುಟುಂಬದವರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದನ್ನೂ ಓದಿ: ದಕ್ಷಿಣ ಭಾರತದ ಉಚ್ಚಾರಣೆ ಟೀಕೆಗಳಿಗೆ ನಟಿ ರಶ್ಮಿಕಾ ಮಂದಣ್ಣ ಖಡಕ್ ತಿರುಗೇಟು
ಕಾರ್ಯಕ್ರಮದಲ್ಲಿ ತಮ್ಮ ಮದುವೆ ಕುರಿತು ಇವರು ಮಾಡಿದ ವಿಷಯ ಚರ್ಚೆಯ ಕೇಂದ್ರಬಿಂದು ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಕೇಳಿ ಬಂದಿದೆ. ‘ಇವರ ಸಂಬಂಧ ಹೆಚ್ಚು ದಿನ ಇರಲ್ಲ’ ಎಂದು ಕೂಡ ಕೆಲವರು ಟೀಕೆ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.