
ವಿಜಯ್ ದೇವರಕೊಂಡ ಸಿನಿಮಾ ಅನ್ನು ಅತಿಯಾಗಿ ಪ್ರೀತಿಸುವ ಸ್ಟಾರ್ ನಟರಲ್ಲಿ ಒಬ್ಬರು. ಆದರೆ ಕಳೆದ ಕೆಲ ವರ್ಷಗಳಿಂದಲೂ ಅವರಿಗೆ ದೊಡ್ಡ ಗೆಲುವೊಂದು ಸಿಕ್ಕೇ ಇಲ್ಲ. ಸತತ ಪ್ರಯತ್ನಗಳ ಹೊರತಾಗಿಯೂ ಅವರ ಸಿನಿಮಾಗಳು ಸೋಲುತ್ತಲೇ ಇವೆ. ಇದೀಗ ಅವರು ತಮ್ಮ ಲಕ್ಕಿ ಚಾರ್ಮ್ ಆಗಿರುವ ಪತ್ನಿ ರಶ್ಮಿಕಾ ಮಂದಣ್ಣ ಅವರೊಟ್ಟಿಗೆ ಸೇರಿ ‘ರಣಬಾಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳಿದ್ದು, ಹಿಂದೊಮ್ಮೆ ತಾವು ಸಿನಿಮಾ ಒಂದಕ್ಕಾಗಿ ತಾವು ಪಟ್ಟ ಕಷ್ಟ ಹಾಗೂ ಪಾಲಿಸಿದ ಅತ್ಯಂತ ಕಠಿಣ ಡಯಟ್ ಬಗ್ಗೆ ಹೇಳಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ಭಾರಿ ಗಮನ ಸೆಳೆದಿತ್ತು. ವಿಜಯ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾದ ಮೇಲೆ ವಿಜಯ್ ಅವರಿಗೆ ಭಾರಿ ನಿರೀಕ್ಷೆ ಇತ್ತು. ಜೊತೆಗೆ ಭಾರಿ ಬಜೆಟ್ ಅನ್ನು ಸಹ ಸಿನಿಮಾದ ಮೇಲೆ ಹಾಕಲಾಗಿತ್ತು. ಇದೇ ಕಾರಣಕ್ಕೆ ವಿಜಯ್ ಸಹ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾಕ್ಕಾಗಿ ಅಗತ್ಯ ತಯಾರಿ ಮಾಡಿಕೊಂಡಿದ್ದರು. ಫೈಟರ್ ಕುರಿತ ಸಿನಿಮಾ ಆಗಿದ್ದ ಕಾರಣ, ಫೈಟರ್ ಅಂತೆ ಕಾಣಲು ಕಠಿಣವಾದ ತರಬೇತಿ ಮಾಡಿದ್ದರು.
ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಒಬ್ಬ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಫೈಟರ್ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರಕ್ಕಾಗಿ ಅವರು ತಮ್ಮ ದೇಹವನ್ನು ಕರಗಿಸಿ ವಿಭಿನ್ನ ಲುಕ್ ಪಡೆಯಲು ಬಹಳಷ್ಟು ಕಷ್ಟಪಟ್ಟಿದ್ದರು. ಈ ಕುರಿತು ಮಾತನಾಡಿರುವ ವಿಜಯ್, ಆ ಸಮಯದಲ್ಲಿ ತಾವು ಅತ್ಯಂತ ಕಷ್ಟದ ವ್ಯಾಯಾಮ, ಜಿಮ್ ಎಕ್ಸರ್ಸೈಸ್ ಜೊತೆಗೆ ಅವೈಜ್ಞಾನಿಕ ಜೊತೆಗೆ ಬಹಳ ಕಠಿಣವಾದ ಡಯಟ್ ಪಾಲನೆ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ರಣಬಾಲಿ’ ಟೀಸರ್: ಬ್ರಿಟಿಷರ ವಿರುದ್ಧ ಗುಡುಗಿದ ನಟ ವಿಜಯ್ ದೇವರಕೊಂಡ
‘ಲೈಗರ್’ ಚಿತ್ರದ ಶೂಟಿಂಗ್ ಸಮಯದಲ್ಲಿ ನೀರು ಕುಡಿಯುತ್ತಿರಲಿಲ್ಲ. ಶೂಟಿಂಗ್ ಆರಂಭವಾಗುವ ಕೊನೆಯ 10 ಗಂಟೆಗಳಂತೂ ನಾನು ನೀರೇ ಕುಡಿಯುತ್ತಿರಲಿಲ್ಲ. ಬಾಯಾರಿಕೆ ತಡೆಯಲು ಕೇವಲ ಒಂದು ಐಸ್ ಕ್ಯೂಬ್ ಅನ್ನು ನಾಲಿಗೆಯಿಂದ ನೆಕ್ಕುತ್ತಾ ಇರುತ್ತಿದ್ದೆ. ದಿನಕ್ಕೆ ಕೇವಲ 300 ಮಿಲಿ ಲೀಟರ್ ನೀರನ್ನು ಮಾತ್ರ ಕುಡಿಯುತ್ತಿದ್ದ ಆ ದಿನಗಳಲ್ಲಿ, ಮನಸ್ಸು ಸದಾ ‘ನೀರು, ನೀರು, ನೀರು’ ಎಂದು ಹಂಬಲಿಸುತ್ತಿತ್ತು ಎಂದು ವಿಜಯ್ ವಿವರಿಸಿದ್ದಾರೆ.
ನೀರು ಕಡಿಮೆ ಕುಡಿದರೆ ಚರ್ಮದ ಕಳಗಿನ ಕೊಬ್ಬು ಬೇಗ ಕರಗಿ, ಚರ್ಮ ಮಾಂಸಖಂಡಗಳ ಮೇಲೆ ಸರಿಯಾಗಿ ಕೂತು ಮಾಂಸಖಂಡದ ಶೇಪ್ ಅನ್ನು ಪಡೆಯುವ ಮೂಲಕ ಅಂಗಸೌಷ್ಟವ ಎದ್ದು ಕಾಣುತ್ತದೆ. ಹಾಗಾಗಿ ಹಲವು ನಟರುಗಳು ಶರ್ಟ್ ಲೆಸ್ ಸೀನ್ ಮಾಡುವ ಮುಂಚೆ ಹೀಗೆ ನೀರು ಬಿಟ್ಟು ಡಯಟ್ ಮಾಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ