ಕಾಲಿವುಡ್ ನಟ ವಿಜಯ್ ತಮ್ಮ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ಪಾವತಿಸದೇ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಅಲ್ಲದೇ ತೆರಿಗೆ ವಿನಾಯಿತಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ, ನ್ಯಾಯಾಲಯ ಅವರನ್ನು ತರಾಟೆ ತೆಗೆದುಕೊಂಡಿತ್ತು. ಇದೀಗ ವಿಜಯ್, ಹಿಂದಿನ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಅವರು ತಮ್ಮ ವಿರುದ್ಧ ಮಾಡಿದ ಎಲ್ಲಾ ವಿಮರ್ಶಾತ್ಮಕ ಟೀಕೆಗಳನ್ನು ತೆಗೆದುಹಾಕುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಜಯ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್ ನಾರಾಯಣ್, ಆಗಸ್ಟ್‌ನಲ್ಲಿ ನಟ ತನ್ನ ಕಾರಿಗೆ 32 ಲಕ್ಷಕ್ಕೂ ಹೆಚ್ಚು ಪ್ರವೇಶ ತೆರಿಗೆಯನ್ನು ಪಾವತಿಸಿದ್ದಾರೆ. ಆದ್ದರಿಂದ ವಿಜಯ್ ವಿರುದ್ಧ ನ್ಯಾಯಾಲಯ ಮಾಡಿದ ಕಟುವಾದ ಟೀಕೆಗಳನ್ನು ತೆಗೆದುಹಾಕುವಂತೆ ದ್ವಿಸದಸ್ಯ ಪೀಠಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವನ್ನು ನೀಡಿರುವ ವಕೀಲರು, ‘ನ್ಯಾಯಾಧೀಶರ ಹೇಳಿಕೆಯು ವಿಜಯ್‌ಗೆ ಸಾಕಷ್ಟು ನೋವನ್ನುಂಟುಮಾಡಿದೆ. ಜೊತೆಗೆ ಸಾರ್ವಜನಿಕರ ಮುಂದೆ ಅವರನ್ನು ಅಪರಾಧಿಯಂತೆ ಬಣ್ಣಿಸಿದೆ’ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ದಿನಾಂಕಕ್ಕೆ ಕಾಯ್ದಿರಿಸಿದೆ.
ಜುಲೈನಲ್ಲಿ ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ವಿಜಯ್ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಪ್ರವೇಶ ತೆರಿಗೆ ವಿನಾಯ್ತಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದರು. 2012ರಲ್ಲಿ ಇಂಗ್ಲೆಂಡ್ನಿಂದ ವಿಜಯ್ ಕಾರನ್ನು ಆಮದು ಮಾಡಿಕೊಂಡಿದ್ದರು. ವಿಜಯ್ ಅರ್ಜಿಯಲ್ಲಿ, ತೆರಿಗೆ ಬಹಳ ಹೆಚ್ಚಾಗಿದೆ ಎಂದು ತಿಳಿಸಿದ್ದರು. ನ್ಯಾಯಮೂರ್ತಿಗಳು ವಿಚಾರಣೆ ನಡೆಸಿ, ವಿಜಯ್ ವರ್ತನೆಯನ್ನು ದೇಶವಿರೋಧಿ ಹವ್ಯಾಸ ಎಂದು ಕರೆದು ಅರ್ಜಿ ವಜಾಗೊಳಿಸಿದ್ದರು. “ಈ ನಟರು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ತರಲು ತಮ್ಮನ್ನು ತಾವು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಚಿತ್ರಗಳು ಸಮಾಜದಲ್ಲಿನ ಭ್ರಷ್ಟ ಚಟುವಟಿಕೆಗಳ ವಿರುದ್ಧವಾಗಿವೆ. ಆದರೆ, ಅವರು ತೆರಿಗೆ ವಂಚಿಸುತ್ತಿದ್ದಾರೆ ಮತ್ತು ಕಾಯಿದೆಗಳ ನಿಬಂಧನೆಗಳಿಗೆ ಹೊಂದಿಕೆಯಾಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ’’ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ಛೀಮಾರಿ ಹಾಕಿದ್ದರು.
ನ್ಯಾಯಾಲಯವು ವಿಜಯ್‌ಗೆ ದಂಡ ವಿಧಿಸಿ, ಕೋವಿಡ್ -19 ಪರಿಹಾರ ಕಾರ್ಯಕ್ಕಾಗಿ ಗುರುತಿಸಲಾದ ಮುಖ್ಯಮಂತ್ರಿಗಳ ನಿಧಿಗೆ 1 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿತ್ತು. ನಂತರ ವಿಜಯ್ ಅವರು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವನ್ನು ಸಂಪರ್ಕಿಸಿದರು. ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠ ತಡೆ ನೀಡಿತ್ತು. ನ್ಯಾಯಮೂರ್ತಿ ಸುಬ್ರಮಣ್ಯಂ ಅವರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು.
ಚಿತ್ರಗಳ ವಿಚಾರಕ್ಕೆ ಬಂದರೆ ವಿಜಯ್, ಕೊನೆಯದಾಗಿ ‘ಮಾಸ್ಟರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ವಿಜಯ್ ಸೇತುಪತಿ ಖಳನಟನಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ವಿಜಯ್, ‘ಬೀಸ್ಟ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ:
Akshi: ‘ಅಕ್ಷಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಸಂಭ್ರಮ; ಇಲ್ಲಿವೆ ಚಿತ್ರಗಳು
Sheshagiri Basavaraj: ವಂಚನೆ, ಹಲ್ಲೆ, ಅತ್ಯಾಚಾರದ ಆರೋಪ; ಸ್ಯಾಂಡಲ್ವುಡ್ ಖಳನಟನ ಬಂಧನ