ಈಗ ಎಲ್ಲೆಲ್ಲೂ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಜನರು ಗುಂಪು ಸೇರದಂತೆ ಸರ್ಕಾರಗಳು ಹಲವು ನಿಯಮಗಳನ್ನು ಜಾರಿ ಮಾಡಿವೆ. ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಹಾಗಾಗಿ ಅನೇಕ ಸೆಲೆಬ್ರಿಟಿಗಳ ಮದುವೆಗಳು ಮುಂದೂಡಲ್ಪಡುತ್ತಿವೆ. ಈ ನಡುವೆ ಇಲ್ಲೊಂದು ಜೋಡಿ ಕೇವಲ 150 ರೂಪಾಯಿ ಖರ್ಚಿನಲ್ಲಿ ಮದುವೆ ಆಗಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಹೀಗೆ ಸಿಂಪಲ್ ಆಗಿ ಬಾಳ ಬಂಧನಕ್ಕೆ ಒಳಗಾಗಿರುವುದು ‘ನಾಮಕರಣ್’ ಧಾರಾವಾಹಿ ಖ್ಯಾತಿಯ ನಟ ವಿರಾಫ್ ಪಟೇಲ್ ಮತ್ತು ನಟಿ ಸಲೋನಿ ಖನ್ನಾ.
ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿಯಲ್ಲಿ ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಅದಕ್ಕಿಂತಲೂ ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಅವರ ಆಸೆ ಆಗಿತ್ತು. ಆದರೆ ಅದಕ್ಕೆ ಕೊರೊನಾ ಅವಕಾಶ ನೀಡಿಲ್ಲ. ಅದರ ಬದಲು, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಸಿಂಪಲ್ ಮದುವೆಯನ್ನೇ ಈ ಸೆಲೆಬ್ರಿಟಿಗಳು ಆಯ್ಕೆ ಮಾಡಿಕೊಂಡಿದ್ದಾರೆ.
ಮೇ 6ರಂದು ದಿಢೀರ್ ಎಂದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಬಾಳ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಮದುವೆಯ ಉಂಗುರದ ಬದಲಿಗೆ ಪತ್ನಿಗೆ ರಬ್ಬರ್ ಬ್ಯಾಂಡ್ ನೀಡಿದ್ದಾರಂತೆ ವಿರಾಫ್! ಹೊಸ ಸೀರೆ ಖರೀದಿಸುವ ಸಂಭ್ರಮ ಇಲ್ಲ. ವಧುವಿನ ಸೀರೆಯನ್ನು ಬಾಡಿಗೆಗೆ ತರಲಾಗಿದೆ. ಸ್ನೇಹಿತರೇ ಸೇರಿಕೊಂಡು ಮೇಕಪ್ ಮತ್ತು ಕೇಶ ವಿನ್ಯಾಸ ಮಾಡಿದ್ದಾರೆ. ಒಟ್ಟು ಈ ಮದುವೆಗೆ ಅತಿಥಿಗಳಾಗಿದ್ದವರು ಮೂರು ಜನರ ಮಾತ್ರ.
ಇನ್ನುಳಿದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಈ ಮದುವೆಯನ್ನು ನೋಡುವ ಅವಕಾಶ ಕಲ್ಪಿಸಲಾಯಿತು. ಒಂದು ಗಂಟೆಯಲ್ಲಿ ಮದುವೆ ಮುಗಿಯಿತು. ಈ ಸಿಂಪಲ್ ವಿವಾವಹಕ್ಕೆ ಆದ ಖರ್ಚು ಕೇವಲ 150 ರೂಪಾಯಿ ಎಂದು ಸಲೋನಿ ಖನ್ನಾ ತಿಳಿಸಿದ್ದಾರೆ. ಇದು ಪರ್ಫಕ್ಟ್ ಮ್ಯಾರೇಜ್. ಪೈಸಾ ವಸೂಲ್ ಆಯ್ತು, ಮದುವೆ ಒಪ್ಪಿಗೆ ಆಯ್ತು ಎಂಬ ಕ್ಯಾಪ್ಷನ್ನೊಂದಿಗೆ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಸರಳವಾಗಿ ಮದುವೆ ಆಗುವ ಮೂಲಕ ಈ ಸೆಲೆಬ್ರಿಟಿಗಳು ಇತರರಿಗೂ ಮಾದರಿ ಆಗಿದ್ದಾರೆ. ಈ ಮದುವೆಯಿಂದ ಉಳಿಸಿದ ಹಣವನ್ನು ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ ದೇಣಿಗೆ ನೀಡುವುದಾಗಿ ನವದಂಪತಿ ತಿಳಿಸಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿ ಹಕ್ಕಿಗಳಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಹೀಗೂ ಮದುವೆ ಆಗಬಹುದಾ ಎಂದು ಕಮೆಂಟ್ಗಳ ಮೂಲಕ ನೆಟ್ಟಿಗರು ಅಚ್ಚರಿ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ:
ಹಣವಿದೆ ಎಂದು ಅದ್ದೂರಿಯಾಗಿ ಮದುವೆಯಾದ ಸೆಲೆಬ್ರಿಟಿಗಳು; ನಂತರ ಕಾದಿತ್ತು ಶಾಕ್
ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ