ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಇಷ್ಟಪಡುತ್ತಾರೆ. ಜನರು ಈ ಪರಿ ಪ್ರೀತಿ ತೋರಿಸಲು ಹಲವು ಕಾರಣಗಳಿವೆ. ನಿರ್ದೇಶಕರಿಗೂ ಈ ನಟಿಯನ್ನು ಕಂಡರೆ ಅಚ್ಚುಮೆಚ್ಚು. ಕೊಟ್ಟ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಸೂಕ್ತ ನ್ಯಾಯ ಸಲ್ಲಿಸುತ್ತಾರೆ ಎಂಬ ಭರವಸೆ ಎಲ್ಲ ನಿರ್ದೇಶಕರಿಗೂ ಮೂಡಿದೆ. ಈ ವಾರ (ಜೂನ್ 17) ‘ವಿರಾಟ ಪರ್ವಂ’ (Virata Parvam) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ನೋಡಿ ಫ್ಯಾನ್ಸ್ ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನ ರೀತಿಯೇ ಸಾಯಿ ಪಲ್ಲವಿ ಪಾತ್ರಕ್ಕೂ ಪ್ರಾಮುಖ್ಯತೆ ಸಿಕ್ಕಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಅಚ್ಚರಿ ಏನೆಂದರೆ ಈ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರು 2 ದಿನ ಉಪವಾಸ ಮಾಡಿದ್ದರು ಎಂದು ನಿರ್ದೇಶಕ ವೇಣು ಉಡುಗುಲ ಅವರು ಹೇಳಿದ್ದಾರೆ. ಈ ವಿಷಯ ತಿಳಿದ ಬಳಿಕ ‘ಸಾಯಿ ಪಲ್ಲವಿ ಅವರೇ ನಿಜವಾದ ನ್ಯಾಷನಲ್ ಕ್ರಶ್’ (National Crush) ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.
ಪಾತ್ರ ಯಾವ ರೀತಿ ಇರುತ್ತದೆಯೋ ಅದಕ್ಕ ತಕ್ಕಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗಬೇಕಾಗುತ್ತದೆ. ಈ ಚಿತ್ರದಲ್ಲಿ ನಾಯಕಿಯು ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಎರಡು ದಿನ ಊಟ ಮಾಡಿರುವುದಿಲ್ಲ. ಆ ದೃಶ್ಯದಲ್ಲಿ ನಟಿಸಲು ಸಾಯಿ ಪಲ್ಲವಿ ಕೂಡ ಎರಡು ದಿನ ಊಟ ಮಾಡಿರಲಿಲ್ಲ ಎಂಬ ವಿಚಾರವನ್ನು ನಿರ್ದೇಶಕರು ಹೇಳಿದ್ದಾರೆ. ಅವರ ಈ ಬದ್ಧತೆ ಕಂಡು ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಸಿನಿಮಾದಲ್ಲಿ ಆ ದೃಶ್ಯ ಹೇಗೆ ಮೂಡಿಬಂದಿರಬಹುದು ಎಂಬುದನ್ನು ನೋಡಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: Sai Pallavi: ಮೈ ಕಾಣುವಂತೆ ಬಟ್ಟೆ ಧರಿಸಬಾರದು ಅಂತ ಸಾಯಿ ಪಲ್ಲವಿ ನಿರ್ಧಾರ ಮಾಡಿದ್ದು ಯಾಕೆ? ಸತ್ಯ ಬಾಯ್ಬಿಟ್ಟ ನಟಿ
ಪ್ರತಿ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಅವರು ‘ವಿರಾಟ ಪರ್ವಂ’ ಚಿತ್ರದಲ್ಲಿ ನಕ್ಸಲೈಟ್ ಅವತಾರ ತಾಳಿದ್ದಾರೆ. ನಕ್ಸಲ್ ಗುಂಪಿನ ನಾಯಕನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ನಕ್ಸಲ್ ಕಮಾಂಡರ್ ಮೇಲೆ ಪ್ರೀತಿ ಚಿಗುರಿದ ಬಳಿಕ ಸಾಮಾನ್ಯ ಹಳ್ಳಿ ಹುಡುಗಿಯೊಬ್ಬಳು ತಾನೂ ಕೂಡ ನಕ್ಸಲೈಟ್ ಆಗುತ್ತಾಳೆ ಎಂಬ ಒನ್ ಲೈನ್ ಸ್ಟೋರಿಯನ್ನು ಟ್ರೇಲರ್ನಲ್ಲಿ ಬಿಟ್ಟುಕೊಡಲಾಗಿದೆ. 1990ರ ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ವಿರಾಟ ಪರ್ವಂ’ ಸಿನಿಮಾ ಸಿದ್ಧವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:54 am, Wed, 15 June 22