
ಅನುರಾಗ್ ಕಶ್ಯಪ್ (Anurag Kashyap), ಬಾಲಿವುಡ್ನ ಸ್ಟಾರ್ ನಿರ್ದೇಶಕ. ಅವರ ಸಿನಿಮಾಗಳು ಭಾರಿ ಬಜೆಟ್, ದೊಡ್ಡ ಸ್ಟಾರ್ ನಟರನ್ನು ಹೊಂದಿರುವುದಿಲ್ಲವಾದರೂ ತಮ್ಮ ವಿಭಿನ್ನ ಶೈಲಿಯಿಂದಾಗಿ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಅನುರಾಗ್ ಕಶ್ಯಪ್ ಸಂಪಾದಿಸಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ನೋ ಸ್ಮೋಕಿಂಗ್’, ‘ದೇವ್ ಡಿ’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ಅನುರಾಗ್ ಕಶ್ಯಪ್ ನೀಡಿದ್ದು, ನಟನೆಯಲ್ಲೂ ಸಹ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಚಿತ್ರರಂಗದೊಂದಿಗೂ ಅವಿನಾಭಾವ ಸಂಬಂಧ ಹೊಂದಿರುವ ಅನುರಾಗ್ ಅವರಿಗೆ ದಕ್ಷಿಣದಲ್ಲೂ ಸಾಕಷ್ಟು ಡಿಮ್ಯಾಂಡ್ ಇದೆ. ಆದರೆ ಅನುರಾಗ್ ಅವರು ದಳಪತಿ ವಿಜಯ್ ಸಿನಿಮಾ ಒಂದರಲ್ಲಿ ಕೇವಲ 30 ಸೆಕೆಂಡ್ಗಳ ದೃಶ್ಯವೊಂದರಲ್ಲಿ ನಟಿಸಿದ್ದರು. ಅದೇಕೆ ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ರಜನೀ ಅಭಿಮಾನಿಗಳ ಮನಸ್ಸು ಗೆದ್ದಿದೆ.
ಅನುರಾಗ್ ಕಶ್ಯಪ್ ದೊಡ್ಡ ನಿರ್ದೇಶಕ, ಒಳ್ಳೆಯ ನಟ ಸಹ. ಅವರ ಸ್ಥಾನದಲ್ಲಿರುವವರು ಯಾರೂ 10-20 ಸೆಕೆಂಡುಗಳ ಅತಿಥಿ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ. ಆದರೆ ಅನುರಾಗ್ ಕಶ್ಯಪ್, ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾನಲ್ಲಿ ಕೇವಲ 30 ಸೆಕೆಂಡುಗಳ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರು ಹೀಗೆ ಮಾಡಿದ್ದಕ್ಕೆ ಕಾರಣವೂ ಇದೆ. ಅದುವೇ ರಜನೀಕಾಂತ್.
ಅನುರಾಗ್ ಕಶ್ಯಪ್ ಹೇಳಿಕೊಂಡಿರುವಂತೆ ಅವರು ಬಹಳ ಹಿಂದಿನಿಂದಲೂ ರಜನೀಕಾಂತ್ ಅವರ ಅಭಿಮಾನಿ ಅಂತೆ. ರಜನೀಕಾಂತ್ ಅವರು ಹಿಂದಿಯ ‘ಗಿರಫ್ತಾರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ರಜನೀಕಾಂತ್ ಸಾಯುತ್ತಾರೆ ಆದರೆ ಸಾಯುವ ಮೊದಲು ಒಂದು ಸಿಗರೇಟು ಸೇರಿ ಬಳಿಕ ಸಾವನ್ನು ಎದುರುಗೊಳ್ಳುತ್ತಾರೆ. ಅನುರಾಗ್ ಕಶ್ಯಪ್ ಅವರಿಗೆ ಆ ಸೀನ್ ಬಹಳ ಇಷ್ಟವಾಗಿತ್ತಂತೆ. ಹಾಗಾಗಿ ತಾವೂ ಸಹ ಅಂಥಹುದ್ದೇ ಸೀನ್ನಲ್ಲಿ ನಟಿಸಬೇಕು ಎಂದು ‘ಲಿಯೋ’ ಸಿನಿಮಾದ ಆ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಿದರಂತೆ.
ಇದನ್ನೂ ಓದಿ:ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ?
ಆ ಸೀನ್ ಅನ್ನು ರೀಕ್ರಿಯೇಟ್ ಮಾಡುವಂತೆ ‘ಲಿಯೋ’ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಬಳಿ ಅನುರಾಗ್ ಕೇಳಿದ್ದರಂತೆ. ಅದರಂತೆ ಅವರೂ ಸಹ ಕೇವಲ ಅನುರಾಗ್ ಅವರಿಗಾಗಿ ಆ ಸಣ್ಣ ಸೀನ್ ಸೃಷ್ಟಿ ಮಾಡಿದ್ದಾರೆ. ‘ಗಿರಫ್ತಾರ್’ ಸಿನಿಮಾನಲ್ಲಿ ರಜನೀಕಾಂತ್ ಆ ಸೀನ್ನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದರು, ಅನುರಾಗ್ ಸಹ ‘ಲಿಯೋ’ನಲ್ಲಿ ಅದಕ್ಕೆ ಹೋಲುವ ಬಣ್ಣದ ಶರ್ಟ್ ಧರಿಸಿ, ರಜನೀ ಅವರ ಸ್ಟೈಲ್ ಅನ್ನೇ ‘ಲಿಯೋ’ ಸಿನಿಮಾದ ಸೀನ್ನಲ್ಲಿ ಅನುರಾಗ್ ಕಶ್ಯಪ್ ಅನುಕರಣೆ ಮಾಡಿದ್ದಾರೆ.
ಅನುರಾಗ್ ಕಶ್ಯಪ್ ಕೆಲವಾರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದು, ದಕ್ಷಿಣದಲ್ಲಿ ಈಗಲೂ ಬೇಡಿಕೆ ಇರುವ ನಟ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಮಹಾರಾಜ’ ಸಿನಿಮಾನಲ್ಲಿ ಅನುರಾಗ್ ಕಶ್ಯಪ್ ವಿಲನ್. ಅದಕ್ಕೂ ಮುಂಚೆ ತಮಿಳಿನ ‘ಇಮೈಕ್ಕ ನಾಡಿಗಳ್’, ಇತ್ತೀಚೆಗೆ ಬಂದ ‘ವಿಡುದಲೈ ಪಾರ್ಟ್ 2’ಗಳಲ್ಲಿ ನಟಿಸಿದ್ದಾರೆ. ಇದೀಗ ತಮಿಳಿನ ‘ಒನ್ 2 ಒನ್’ ಹಾಗೂ ತೆಲುಗಿನ ‘ಡಕೈಟ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ