
‘ರಾಮಾಯಣ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ನಟಿಸಿರುವ ರಣ್ಬೀರ್ ಕಪೂರ್, ‘ರಾವಣ’ ಯಶ್, ‘ಸೀತೆ’ ಸಾಯಿ ಪಲ್ಲವಿ, ‘ಲಕ್ಷ್ಮಣ’ ಪಾತ್ರದಲ್ಲಿ ನಟಿಸಿರುವ ರವಿ ದುಬೆ, ಶೂರ್ಪನಖಿ ಪಾತ್ರದಲ್ಲಿ ನಟಿಸಿರುವ ರಕುಲ್ ಇನ್ನೂ ಹಲವಾರು ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆದರೆ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರನ್ನು ಪ್ರಚಾರದಿಂದ ಹೊರಗಿಡಲಾಗಿದೆ. ಮಾತ್ರವಲ್ಲ, ಸಿನಿಮಾದ ಯಾವುದೇ ಟೀಸರ್, ಟ್ರೈಲರ್ನಲ್ಲಿ ಹನುಮಂತನ ಪಾತ್ರವನ್ನು ತೋರಿಸಲಾಗಿಲ್ಲ. ಆದರೆ ಇದಕ್ಕೆ ಕಾರಣ ಇದೆ.
‘ರಾಮಾಯಣ’ ಸಿನಿಮಾದ ಕೆಲವು ಟೀಸರ್, ಟ್ರೈಲರ್, ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಆದರೆ ಯಾವುದರಲ್ಲೂ ಸಹ ಆಂಜನೇಯನ ಪಾತ್ರದ ಪರಿಚಯ ಇರಲಿ, ಉಲ್ಲೇಖವೂ ಸಹ ಇಲ್ಲ. ಮಾತ್ರವಲ್ಲ, ಸಿನಿಮಾದ ಪ್ರಚಾರದ ಸಂದರ್ಭದಲ್ಲೂ ಸಹ ಆಂಜನೇಯ ಪಾತ್ರದ ಬಗ್ಗೆ, ಆ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ, ಸಂಸದ ಸನ್ನಿ ಡಿಯೋಲ್ ಬಗ್ಗೆ ಉಲ್ಲೇಖವನ್ನೂ ಮಾಡಲಾಗಿಲ್ಲ. ಇದು ಚಿತ್ರತಂಡದ ಯೋಜಿತ ನಡೆ ಎನ್ನಲಾಗುತ್ತಿದೆ.
ಬಹುತೇಕರಿಗೆ ತಿಳಿದಿರುವಂತೆ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಈ ನವೆಂಬರ್ 5ಕ್ಕೆ ಮೊದಲ ಭಾಗವಷ್ಟೆ ರಿಲೀಸ್ ಆಗಲಿದೆ. ಮೊದಲ ಭಾಗದಲ್ಲಿರಾಮ ಹಾಗೂ ರಾವಣನ ಪಾತ್ರ ಪರಿಚಯ, ರಾಮ ಮತ್ತು ಸೀತೆಯ ವಿವಾಹ, ರಾವಣನ ತಪಸ್ಸು ಮತ್ತು ಪಡೆವ ಶಕ್ತಿ. ರಾಮನ ವನವಾಹ ಮತ್ತು ಸೀತಾ ಮಾತೆಯ ಅಪಹರಣದ ಕತೆಯನ್ನು ಮಾತ್ರವೇ ಒಳಗೊಂಡಿರಲಿದೆ.
ಇದನ್ನೂ ಓದಿ:ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್ ಬೆಲೆ ಏರಿಕೆ ಇಲ್ಲ
ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಭಾರಿ ಅದ್ಧೂರಿಯಾಗಿ ಆಂಜನೇಯ ಪಾತ್ರದ ಎಂಟ್ರಿ ಆಗಲಿದೆ. ಆ ದೃಶ್ಯ, ಕ್ಲೈಮ್ಯಾಕ್ಸ್ನ ಹೈಲೆಟ್ ಆಗಿರಲಿದೆ ಹಾಗಾಗಿಯೇ ಆಂಜನೇಯ ಪಾತ್ರದ ಬಗ್ಗೆ ಸಿನಿಮಾದ ಯಾವುದೇ ಟೀಸರ್, ಟ್ರೈಲರ್, ಹಾಡುಗಳಲ್ಲಿ ಉಲ್ಲೇಖ ನೀಡಲಾಗಿಲ್ಲ. ಆಂಜನೇಯ ಪಾತ್ರದ ಎಂಟ್ರಿ ದೃಶ್ಯವನ್ನು ಭಾರಿ ಅದ್ಧೂರಿಯಾಗಿ ಮತ್ತು ಸಿನಿಮ್ಯಾಟಿಕ್ ಆಗಿ ಶೂಟ್ ಮಾಡಲಾಗಿದೆಯಂತೆ, ಅದನ್ನು ಜನ ಚಿತ್ರಮಂದಿರದಲ್ಲಿಯೇ ನೋಡಬೇಕು ಎಂಬುದು ಚಿತ್ರತಂಡದ ಉದ್ದೇಶ.
ಇನ್ನೂ ಕೆಲವು ಸುದ್ದಿಗಳ ಪ್ರಕಾರ, ಆಂಜನೇಯ ಪಾತ್ರದ ಎಂಟ್ರಿ ಮೊದಲ ಭಾಗದ ಅಂತ್ಯದಲ್ಲಿ ಆಗಲಿದೆ ಆದರೆ ಕಿಷ್ಕಿಂದಾ ಖಾಂಡದ ಭಾಗವನ್ನೇ ಸಿನಿಮಾದಿಂದ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಅಂದರೆ ರಾಮ, ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುವ ಕತೆಯನ್ನೇ ಸಿನಿಮಾದಿಂದ ಕೈಬಿಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆಯ ಬಳಿಕ ಎಲ್ಲವೂ ತಿಳಿದು ಬರಲಿದೆ. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ