‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್

‘ರಾಮಾಯಣ’ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಆದಾಗ ಕೆಲವರು ಟೀಕೆ ಮಾಡಿದರು. ಆ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಚಿತ್ರದಲ್ಲಿ ಹಾಲಿವುಡ್ ಸ್ಟೈಲ್ ಯಾಕೆ ಇದೆ ಎಂಬುದನ್ನು ಅವರು ವಿವರಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ‘ಇದು ಕೇವಲ ಭಾರತೀಯ ಸಿನಿಮಾವಲ್ಲ, ಪೂರ್ವ ಮತ್ತು ಪಶ್ಚಿಮದ ತಂತ್ರಜ್ಞಾನದ ಸಂಗಮ’ ಎಂದಿದ್ದಾರೆ.

‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್
Ramayana Glimpse
Image Credit source: Prime Focus Studios

Updated on: Apr 19, 2026 | 7:25 AM

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ (Ramayana) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಇತ್ತೀಚೆಗೆ ಲಾಸ್ ವೇಗಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಸಿನಿಮಾಕಾನ್’ (CinemaCon) ಕಾರ್ಯಕ್ರಮದಲ್ಲಿ ನಟ ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಬಗ್ಗೆ ಮಾತನಾಡಿದರು. ಈ ವೇಳೆ ಸಿನಿಮಾದಲ್ಲಿನ ಪಾಶ್ಚಿಮಾತ್ಯ ಶೈಲಿಯ ಬಗ್ಗೆ ಯಶ್ (Yash) ಸ್ಪಷ್ಟನೆ ನೀಡಿದರು.

‘ರಾಮಾಯಣ’ ಸಿನಿಮಾದ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆ ಆಯಿತು. ಆ ವಿಡಿಯೋದಲ್ಲಿ ಅಸುರರ ವಿನ್ಯಾಸವು ಹಾಲಿಯುಡ್ ಶೈಲಿಯಲ್ಲಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರಿಸಿದ ಯಶ್, ‘ನಮ್ಮ ಗುರಿ ಜಾಗತಿಕ ಮಾರುಕಟ್ಟೆಯಾಗಿದೆ. ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಗೆ ನಮ್ಮ ಕಥೆ ತಲುಪಬೇಕಾದರೆ, ಅವರಿಗೆ ಪರಿಚಿತವಿರುವ ಶೈಲಿಯಲ್ಲಿಯೂ ಸಿನಿಮಾ ಇರಬೇಕಾಗುತ್ತದೆ’ ಎಂದು ಚಿತ್ರದ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸಮರ್ಥಿಸಿಕೊಂಡರು.

ಈ ಚಿತ್ರದಲ್ಲಿ ಲಂಕೇಶ್ವರ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರದ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾವಣನನ್ನು ಕೇವಲ ಅಸುರನನ್ನಾಗಿ ನೋಡದೆ, ಅವನಲ್ಲಿದ್ದ ಮಾನವೀಯ ಗುಣಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಿರುವುದಾಗಿ ಅವರು ತಿಳಿಸಿದ್ದಾರೆ.

‘ನಾನು ರಾವಣನ ಮೂಲ ಸತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದೇನೆ. ಜನರಿಗೆ ಆ ಪಾತ್ರದ ಭಾವನೆಗಳು ಅರ್ಥವಾಗಬೇಕು ಮತ್ತು ಕನೆಕ್ಟ್ ಆಗಬೇಕು ಎನ್ನುವ ಉದ್ದೇಶದಿಂದ ರಾವಣನನ್ನು ಸಾಧ್ಯವಾದಷ್ಟು ಮಾನವೀಯವಾಗಿ ಚಿತ್ರಿಸಲು ಪ್ರಯತ್ನಿಸಿದ್ದೇನೆ’ ಎಂದು ಯಶ್ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್

‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಇದರ ಒಟ್ಟು ಬಜೆಟ್ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು 4,100 ಕೋಟಿಗೂ ರೂಪಾಯಿ ಹೆಚ್ಚು) ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾತ್ರವಲ್ಲದೆ, ವಿಶ್ವದ ಗಮನಾರ್ಹ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us