ಮನುಷ್ಯರಿಗೆ ಬರುವ ರೋಗಗಳಿಗೆ ಏನು ಕಮ್ಮಿಯಿಲ್ಲ, ಒಂದಲ್ಲಾ ಒಂದು ರೀತಿಯ ರೋಗಗಳು ಮೈ ಮೇಲೆ ಒಕ್ಕರಿಸುತ್ತದೆ. ಕೆಲವು ರೋಗಗಳು ಮನುಷ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಅದೇ ರೀತಿಯಲ್ಲಿ, 15 ವರ್ಷದ ಬಾಲಕಿಯೊಬ್ಬಳು ನೀರಿನ ಅಲರ್ಜಿಯಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆಯಿಂದಾಗಿ ಆಕೆ ನಿಯಮಿತವಾಗಿ ಸ್ನಾನವೂ ಮಾಡಲು ಸಾಧ್ಯವಾಗುತ್ತಿಲ್ಲ. ಯುಎಸ್ನ ಅರಿಜೋನಾದ ಟಕ್ಸನ್ನಿಂದ ಅಬಿಗೈಲ್ ಬೆಕ್ ಎಂಬ ಬಾಲಕಿ ಕಳೆದ ತಿಂಗಳಿನಿಂದ ಅಕ್ವಾಜೆನಿಕ್ ಉರ್ಟೇರಿಯಾರಿಯಾದಿಂದ ಬಳಲುತ್ತಿದ್ದಾಳೆ. ಈ ರೋಗದ ಲಕ್ಷಣವನ್ನು ಆಕೆಗೆ ಮೂರು ವರ್ಷಗಳ ಹಿಂದೆಯೇ ಕಾಣಿಸಿಕೊಂಡಿತ್ತು. ಇಂಥ ಅಪರೂಪದ ರೋಗ 200 ಮಿಲಿಯನ್ ಜನರಲ್ಲಿ ಒಬ್ಬರಿಗೆ ಬರುತ್ತದೆ.
ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಈ ನೀರಿನ ಅಲರ್ಜಿಯಿಂದ ಬಳಲುತ್ತಿರುವವರ ಸಂಖ್ಯೆ 100ಕ್ಕಿಂತ ಕಡಿಮೆ ಇದೆ ಎಂಬುದು ನಿಟ್ಟುಸಿರು ಬಿಡುವ ಸಂಗತಿ. ಮಳೆ ಬಂದಾಗ ಅಥವಾ ಅವಳು ಸ್ನಾನ ಮಾಡುವಾಗ ತನ್ನ ಚರ್ಮದ ಮೇಲೆ ಆಸಿಡ್ ಸುರಿದಂತೆ ಭಾಸವಾಗುತ್ತದೆ. ನೀರು ಕುಡಿಯಲೂ ಕಷ್ಟಸಾಧ್ಯ. ಒಂದು ವರ್ಷಕ್ಕೂ ಹೆಚ್ಚು ಆಕೆ ನೀರು ಕೂಡ ಕುಡಿದಿಲ್ಲವಂತೆ.
ಸದ್ಯ ಬಾಲಕಿಗೆ ವೈದ್ಯರು ಪುನರ್ಜಲೀಕರನ ಮಾತ್ರೆಗಳನ್ನು ಸೂಚಿಸಿದ್ದಾರೆ. ಅವಳು ಒಂದು ಸಮಯದಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಕುಡಿಯಬಹುದಾಗಿದ್ದು, ಆಂಟಿಹಿಸ್ಟಮೈನ್ ಮತ್ತು ಸ್ಟೀರಾಯ್ಡ್ಗಳನ್ನು ತೆಗೆದುಕೊಳ್ಳುತ್ತಾಳೆ.
ತನ್ನ ಸಮಸ್ಯೆಯನ್ನು ಸ್ವತಃ ಅಬಿಗೈಲ್ ಬೆಕ್ ಹೇಳಿಕೊಂಡಿದ್ದಾಳೆ. ”ನನ್ನ ಕಣ್ಣೀರು ನನ್ನ ಮುಖವು ಕೆಂಪಾಗುವಂತೆ ಮಾಡುತ್ತದೆ, ನೋವು ಉಂಟು ಮಾಡುತ್ತದೆ, ಚರ್ಮವನ್ನು ಸುಡುತ್ತದೆ. ಸಣ್ಣದಾಗಿ ಆರಂಭವಾದ ಈ ಸಮಸ್ಯೆ ಕಾಲಾನಂತರದಲ್ಲಿ ಹೆಚ್ಚಾಗತೊಡಗಿತು. ಮಳೆಯಾದಾಗ ಅದು ತುಂಬಾ ನೋವು ಉಂಟುಮಾಡುತ್ತದೆ. ನೀರು ಆಮ್ಲದಂತೆ ಭಾಸವಾಗುತ್ತದೆ. ಈ ಬಗ್ಗೆ ನಾನು ಅಮ್ಮನ ಬಳಿ ಹೇಳಿಕೊಂಡೆ. ನನಗೆ ನೀರಿನ ಅಲರ್ಜಿ ಇದೆ ಎಂದು ಜನರ ಬಳಿ ಹೇಳಿದಾಗ ಹಾಸ್ಯಾಸ್ಪದವೆಂದು ಭಾವಿಸುತ್ತಾರೆ. ಇನ್ನೊಂದಷ್ಟು ಮಂದಿ ಆಘಾತಕ್ಕೊಳಗಾಗಿದ್ದಾರೆ ಎಂದು ಡೈಲಿ ಮೇಲ್ನಿಂದ ಅಬಿಗೈಲ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
ಆರಂಭದಲ್ಲಿ ಸಮಸ್ಯೆ ಕಂಡುಬಂದಾಗ ತನ್ನ ಮನೆಯ ನೀರಿನಲ್ಲಿ ಸಮಸ್ಯೆ ಇರಬಹುದೆಂದು ಅಂದುಕೊಂಡಿದ್ದಳು. ಅದಾಗಿಯೂ ದಿನಗಳು ಕಳೆಯುತ್ತಿದ್ದಂತೆ ರೋಗ ಲಕ್ಷಣ ಉಲ್ಬಣಗೊಂಡಿತು. ಜನರ ಆಡುಮಾತಿಗೆ ಭಯಪಟ್ಟು ವೈದ್ಯರನ್ನು ಭೇಟಿಯಾಗುವುದನ್ನು ನಿಲ್ಲಿಸಿದಳು. ಆದರೆ, ಈ ಬಾರಿ ಧೈರ್ಯ ಮಾಡಿದ ಆಕೆ, ತನ್ನ ಸ್ಥಿತಿಯ ಬಗ್ಗೆ ಹೆಚ್ಚು ತಿಳಿದಿಲ್ಲ. ಹೀಗಾಗಿ ವೈದ್ಯರಿಗೆ ತಿಳಿಸಬೇಕಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.