ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಡಾ. ಸೌರಭ್ ಸೇಥಿ

ಆರೋಗ್ಯವೇ ನಮ್ಮ ಸಂಪತ್ತು ಎಂಬ ಮಾತನ್ನು ನೀವು ಕೇಳಿರಬಹುದು. ಹಾಗಾಗಿ ನಮ್ಮ ಆರೋಗ್ಯವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಡಾ. ಸೌರಭ್ ಸೇಥಿ ಅವರು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ರಾತ್ರಿಯ ಸಮಯದಲ್ಲಿ ನಾವು ಮಾಡಬಾರದಂತಹ ಕೆಲಸಗಳ ಬಗ್ಗೆ ಸಲಹೆ ನೀಡಿದ್ದಾರೆ. ಇವುಗಳನ್ನು ಮಾಡದಿದ್ದರೆ ರಾತ್ರಿ ಒಳ್ಳೆ ನಿದ್ರೆ ಬರುತ್ತೆ ಮಾತ್ರವಲ್ಲ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಕೂಡ ಚೆನ್ನಾಗಿರುತ್ತೆ. ಹಾಗಿದ್ರೆ ನಿಮಗೂ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಮನಸ್ಸಿದ್ದರೆ ವೈದ್ಯರು ಹೇಳಿರುವ ಈ ಸಿಂಪಲ್ ಸಲಹೆಗಳನ್ನು ಪಾಲಿಸಿ.

ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಡಾ. ಸೌರಭ್ ಸೇಥಿ
Doctor Sethi

Updated on: Jul 09, 2025 | 5:58 PM

ಇಂದಿನ ನಮ್ಮ ಜೀವನಶೈಲಿಯಲ್ಲಿ (Lifestyle) ಒತ್ತಡ ಎನ್ನುವುದು ತೀರಾ ಸಾಮಾನ್ಯವಾಗಿದೆ, ಹಾಗಾಗಿ ಪ್ರತಿಯೊಬ್ಬರಿಗೂ ವಿಶ್ರಾಂತಿ ಅಗತ್ಯವಾಗಿ ಬೇಕಾಗಿರುತ್ತದೆ. ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದ ನಂತರ, ರಾತ್ರಿ ಸಮಯದಲ್ಲಿ ಸುಖ ನಿದ್ರೆ (Sleep) ಮಾಡಿ ವಿಶ್ರಾಂತಿ ಪಡೆಯಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಈ ರೀತಿ “ನಿದ್ರೆ ಮಾಡಲೇಬೇಕು, ಅದರಿಂದ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ” ಎಂಬ ಮನಸ್ಥಿತಿ ಕಡಿಮೆಯಾಗುತ್ತಿದೆ. ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡುವುದು ಬಹಳ ನಿರ್ಣಾಯಕವಾಗಿದೆ. ನಿದ್ರೆಯನ್ನು ಹಾಳು ಮಾಡಿಕೊಳ್ಳುವುದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ನಿತ್ಯದ ದಿನಚರಿ ಸರಿಯಾಗಿರಬೇಕಾಗುತ್ತದೆ, ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳನ್ನು ನಾವೇ ಆಹ್ವಾನಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ.

ಅನೇಕ ಜನರು, ತಿಳಿದೋ ತಿಳಿಯದೆಯೋ, ರಾತ್ರಿಯ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಈ ತಪ್ಪುಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ಇದಕ್ಕೆ ಪೂರಕವೆಂಬಂತೆ, ಹಾರ್ವರ್ಡ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ (doctor.sethi) ಕೂಡ ಇದೇ ವಿಷಯವನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ರಾತ್ರಿ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ಮಾಡಬಾರದು. ಇವುಗಳನ್ನು ತಪ್ಪಿಸಿದರೆ, ಒಂದು ತಿಂಗಳಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ. ಹಾಗಾದರೆ ನಮ್ಮ ಅಭ್ಯಾಸಗಳು ಹೇಗಿರಬೇಕು? ಯಾವುದು ನಮ್ಮ ಆರೋಗ್ಯ ಹಾಳು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ
ಅಬ್ಬಬ್ಬಾ... ಟೊಮೇಟೊ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಕೊಲೆಸ್ಟ್ರಾಲ್ ಮಂಜಿನಂತೆ ಕರಗಲು ಈ ಹಣ್ಣಿನ ಬೀಜಗಳನ್ನು ಸೇವನೆ ಮಾಡಿ
ಈ ಹಣ್ಣಿನ ಎಲೆ ಸೇವಿಸಿದ್ರೆ ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ
ಚರ್ಮದ ಸಮಸ್ಯೆಗೆ ವೈದ್ಯರು ನೀಡಿರುವ ಈ ಸಲಹೆ ಟ್ರೈ ಮಾಡಿ

ರಾತ್ರಿಯಲ್ಲಿ ಸಮಯದಲ್ಲಿ ಹೆಚ್ಚು ತಿನ್ನುವುದು

ಮಲಗುವ ಮುನ್ನ ಹೊಟ್ಟೆ ತುಂಬುವಂತೆ ಊಟ ಮಾಡುವುದು ಸರಿಯಲ್ಲ ಎಂದು ವೈದ್ಯರು ಹೇಳುತ್ತಾರೆ. ಈ ರೀತಿ ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದು ಅಜೀರ್ಣ, ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಹಾಗಾಗಿ ಮಲಗುವ ಮೊದಲು ಕನಿಷ್ಠ 2- 3 ಗಂಟೆಗಳ ಮೊದಲು ಭೋಜನ ಮಾಡುವುದು ಬಹಳ ಒಳ್ಳೆಯದು. ಅದರಲ್ಲಿಯೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಆಯ್ಕೆ ಮಾಡಬೇಕು. ಗಂಜಿ, ಸೂಪ್ ಅಥವಾ ಬೇಯಿಸಿದ ತರಕಾರಿಗಳು ಉತ್ತಮ ಆಯ್ಕೆಗಳಾಗಿವೆ.

ರಾತ್ರಿಯಲ್ಲಿ ಕೆಫೀನ್ ತೆಗೆದುಕೊಳ್ಳುವುದು

ಕಾಫಿ, ಟೀ, ಚಾಕೊಲೇಟ್ ಮತ್ತು ಅನೇಕ ತಂಪು ಪಾನೀಯಗಳಲ್ಲಿಯೂ ಕೆಫೀನ್ ಅಂಶವಿರುತ್ತದೆ. ಸಂಜೆ ಅಥವಾ ತಡರಾತ್ರಿಯಲ್ಲಿ ಕೆಫೀನ್ ಸೇವಿಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಧ್ಯಾಹ್ನದ ನಂತರ ಕೆಫೀನ್ ಅನ್ನು ತಪ್ಪಿಸಬೇಕೆಂದು ವೈದ್ಯರು ಹೇಳುತ್ತಾರೆ.

ಮಲಗುವ ಮುನ್ನ ಗಂಟೆಗಟ್ಟಲೆ ಫೋನ್‌ ನೋಡುವುದು

ಇತ್ತೀಚಿನ ದಿನಗಳಲ್ಲಿ, ಇದು ಸಾಮಾನ್ಯ ಅಭ್ಯಾಸಗಳಲ್ಲಿ ಒಂದಾಗಿದೆ. ಮಲಗುವ ಮುನ್ನ ಗಂಟೆಗಟ್ಟಲೆ ಇನ್ಸ್ಟಾ, ಫೇಸ್ ಬುಕ್ ಅಥವಾ ಯಾವುದಾದರೂ ವಿಡಿಯೋ ನೋಡುತ್ತಾ ಮೊಬೈಲ್ ಸ್ಕ್ರೋಲ್ ಮಾಡುವುದನ್ನು ತಪ್ಪಿಸಿ. ಈ ಚಟುವಟಿಕೆ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ಫೋನ್‌, ಟ್ಯಾಬ್ಲೆಟ್‌ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ, ಸಾಮಾನ್ಯವಾಗಿ ಈ ಹಾರ್ಮೋನ್ ನಿಮಗೆ ನಿದ್ರೆ ಬರಲು ಸಹಾಯ ಮಾಡುತ್ತದೆ. ಆದರೆ ನೀವು ಈ ರೀತಿ ಗಂಟೆಗಟ್ಟಲೆ ಫೋನ್‌ ನೋಡುವುದರಿಂದ ಅವುಗಳ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಮಲಗುವ ಮೊದಲು ಕನಿಷ್ಠ ಒಂದು ಗಂಟೆಯಾದರೂ ಎಲ್ಲಾ ಡಿಜಿಟಲ್ ಪರದೆಗಳಿಂದ ದೂರವಿರಿ ಎಂದು ವೈದ್ಯರು ಹೇಳುತ್ತಾರೆ. ಇವುಗಳ ಬದಲಾಗಿ, ನೀವು ಪುಸ್ತಕ ಓದಬಹುದು, ಸಂಗೀತ ಕೇಳಬಹುದು ಅಥವಾ ಕುಟುಂಬ ಸದಸ್ಯರೊಂದಿಗೆ ಮಾತನಾಡಬಹುದು.

ಇಲ್ಲಿದೆ ನೋಡಿ ವಿಡಿಯೋ:

ಚಿಂತೆ ಆರೋಗ್ಯ ಹಾಳು ಮಾಡುತ್ತೆ

ಇಂದಿನ ನಮ್ಮ ಜೀವನಶೈಲಿಯಲ್ಲಿ, ಒತ್ತಡವು ಎನ್ನುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಒತ್ತಡ ಮತ್ತು ಚಿಂತೆಗಳೊಂದಿಗೆ ಮಲಗುವುದು ನಿಮ್ಮ ನಿದ್ರೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಒತ್ತಡದಲ್ಲಿದ್ದಾಗ, ನಿಮ್ಮ ದೇಹವು ಕಾರ್ಟಿಸೋಲ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಒಳ್ಳೆಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಲಗುವ ಮೊದಲು ಧ್ಯಾನ ಮಾಡುವುದು, ಆಳವಾದ ಉಸಿರನ್ನು ತೆಗೆದುಕೊಳ್ಳುವುದು ಅಥವಾ ನಿಮ್ಮ ನೆಚ್ಚಿನ ಸಂಗೀತವನ್ನು ಸ್ವಲ್ಪ ಸಮಯದ ವರೆಗೆ ಕೇಳುವಂತಹ ಚಟುವಟಿಕೆಗಳನ್ನು ಮಾಡುವುದು ಒಳ್ಳೆಯದು ಎಂದು ಡಾ. ಸೌರಭ್ ಸೇಥಿ ಹೇಳುತ್ತಾರೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನೀವು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಈ ರೀತಿ ಮಾಡುವ ಅಭ್ಯಾಸ ನಿಮಗಿದ್ದರೆ ಮೆದುಳಿಗೆ ಹಾನಿಯಾಗುತ್ತೆ ಎಚ್ಚರ

ಇವುಗಳಿಂದಲೂ ದೂರವಿರಿ;

  • ಮಲಗುವ ಮುನ್ನ ಮದ್ಯ ಸೇವಿಸಬಾರದು. ಮೊದಲಿಗೆ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ತೋರುತ್ತದೆಯಾದರೂ, ನಂತರ ಇದು ನಿಮ್ಮ ಸುಖ ನಿದ್ರೆಗೆ ಅಡ್ಡಿಪಡಿಸುತ್ತದೆ.
  • ತೀವ್ರವಾದ ವ್ಯಾಯಾಮವು ಕೂಡ ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ಸಂಜೆ ಸಮಯದಲ್ಲಿ ಲಘು ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು.
  • ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡುವುದು ತುಂಬಾ ಒಳ್ಳೆಯದು ಎಂದು ಕೆಲವರು ನಂಬುತ್ತಾರೆ. ಆದರೆ ತುಂಬಾ ಬಿಸಿನೀರಿನ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಬಹುದು, ಇದರಿಂದ ನಿದ್ರೆ ಬರುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ ಬಿಸಿನೀರಿನ ಬದಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಬಹಳ ಪ್ರಯೋಜನಕಾರಿಯಾಗಿದೆ.
  • ರಾತ್ರಿಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿದ್ರೆಗೆ ಭಂಗ ಬರಬಹುದು. ಆದ್ದರಿಂದ, ಇವುಗಳನ್ನು ಸಹ ತಪ್ಪಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ