ಆರೋಗ್ಯಕರವೆಂದು ದಿನವೂ ಓಟ್ಸ್​ ಸೇವಿಸುವ ಮುನ್ನ ಈ ವಿಷಯವೂ ತಿಳಿದಿರಲಿ

|

Updated on: Sep 28, 2023 | 11:47 AM

ಓಟ್ಸ್ ತುಂಬಾ ಆರೋಗ್ಯಕರ, ನಾರಿನಂಶ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದು ಎಲ್ಲರಿಗೂ ಓಟ್ಸ್​ ಸೂಕ್ತವಲ್ಲದಿರಬಹುದು. ಹೀಗಾಗಿ, ಓಟ್ಸ್​ನ ಅಡ್ಡಪರಿಣಾಮಗಳ ಬಗ್ಗೆಯೂ ನೀವು ತಿಳಿದಿರುವುದು ಉತ್ತಮ. ಆ ಬಗ್ಗೆ ಮಾಹಿತಿ ಇಲ್ಲಿದೆ...

ಆರೋಗ್ಯಕರವೆಂದು ದಿನವೂ ಓಟ್ಸ್​ ಸೇವಿಸುವ ಮುನ್ನ ಈ ವಿಷಯವೂ ತಿಳಿದಿರಲಿ
ಓಟ್ಸ್
Image Credit source: iStock
Follow us on

ಓಟ್ಸ್ (Oats) ಅನ್ನು ಆರೋಗ್ಯಕರ ಆಹಾರ ಎಂದು ಹೇಳಲಾಗುತ್ತದೆ. ಫೈಬರ್ ಅಂಶ ಹೆಚ್ಚಾಗಿರುವ ಓಟ್ಸ್​ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಬೇರೆ ಇತರ ಆಹಾರದಂತೆ, ಓಟ್ಸ್ ಎಲ್ಲರ ಆರೋಗ್ಯಕ್ಕೂ ಸೂಕ್ತವಲ್ಲ. ತೂಕ ಇಳಿಸಲೆಂದು ಕೆಲವರು ದಿನವೂ ಓಟ್ಸ್​ ತಿನ್ನುತ್ತಾರೆ. ಇದರಿಂದ ಅನೇಕ ಅಡ್ಡಪರಿಣಾಮಗಳು ಕೂಡ ಆಗಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಓಟ್ಸ್ ಸ್ವಾಭಾವಿಕವಾಗಿ ಗ್ಲುಟನ್-ಮುಕ್ತವಾಗಿದ್ದರೂ ಕೆಲವು ಜೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಇದರಿಂದ ಸಮಸ್ಯೆ ಉಂಟಾಗಬಹುದು. ಜೀರ್ಣಕ್ರಿಯೆಯ ಸಮಸ್ಯೆ ಇರುವವರಿಗೆ ಓಟ್ಸ್ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್ ಮುಂತಾದ ತೊಂದರೆ ಉಂಟಾಗಬಹುದು. ಓಟ್ಸ್ ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದ್ದರೂ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರಿಗೆ ತೊಂದರೆ ಉಂಟುಮಾಡಬಹುದು. ಸಮತೋಲಿತ ಆಹಾರಕ್ಕಾಗಿ ಕಾರ್ಬೋಹೈಡ್ರೇಟ್‌ಗಳು ಮುಖ್ಯವಾಗಿದ್ದರೂ ಹೆಚ್ಚು ಓಟ್ಸ್ ತಿನ್ನುವುದು ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ಫಿಸಿಕೊ ಡಯಟ್ ಮತ್ತು ಸೌಂದರ್ಯದ ಚಿಕಿತ್ಸಾಲಯದ ಸಂಸ್ಥಾಪಕಿ, ಆಹಾರ ತಜ್ಞರಾದ ವಿಧಿ ಚಾವ್ಲಾ ಓಟ್ಸ್​ ಬಗ್ಗೆ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ. ಓಟ್ಸ್​ನಲ್ಲಿ ರಂಜಕದ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಸಮಸ್ಯೆಯಾಗಬಹುದು. ದುರ್ಬಲಗೊಂಡ ಮೂತ್ರಪಿಂಡದ ಕ್ರಿಯೆಯ ಸಂದರ್ಭಗಳಲ್ಲಿ ಹೆಚ್ಚುವರಿ ರಂಜಕದ ಸೇವನೆಯು ಮಿನರಲ್ಸ್​ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಮೂತ್ರಪಿಂಡದ ಆರೋಗ್ಯ ಹದಗೆಡುತ್ತದೆ. ಹೀಗಾಗಿ, ಮೂತ್ರಪಿಂಡದ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಓಟ್ಸ್​ ಸೇವಿಸುವುದು ಉತ್ತಮ ಎಂದಿದ್ದಾರೆ.

ಗೋಧಿಯಂತಹ ಇತರ ಧಾನ್ಯಗಳಿಗೆ ಅಲರ್ಜಿಗಳಿಗೆ ಹೋಲಿಸಿದರೆ ಓಟ್ಸ್​ನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಕಡಿಮೆ. ಆದರೂ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಕೆಲವೊಮ್ಮೆ ಚರ್ಮದ ಕಿರಿಕಿರಿ ಉಂಟಾಗಬಹುದು.

ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು

ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಓಟ್-ಆಧಾರಿತ ಉತ್ಪನ್ನಗಳಾದ ಇನ್​ಸ್ಟಂಟ್​ ಓಟ್ಸ್ ಮತ್ತು ಫ್ಲೇವರ್ ಇರುವ ಓಟ್ ಮೀಲ್ ಅನ್ನು ಹೆಚ್ಚು ಸಂಸ್ಕರಿಸಿರಬಹುದು. ಅದಕ್ಕೆ ಸಕ್ಕರೆ, ಕೃತಕ ವಾಸನೆ, ಪ್ರಿಸರ್ವೇಟಿವ್ ಹಾಕಿರುತ್ತಾರೆ. ಹೀಗಾಗಿ, ಇವುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಕಡಿಮೆ ಸಂಸ್ಕರಿಸಿದ, ಸರಳವಾದ ಓಟ್ಸ್ ಅನ್ನು ಆರಿಸಿಕೊಳ್ಳುವುದು ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ