
ಬೆಂಗಳೂರು, ಫೆಬ್ರವರಿ 27: ಪ್ರತಿ ವರ್ಷ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರು ಫ್ಲೂನಿಂದ (Flu) ತೊಂದರೆಗೊಳಗಾಗುತ್ತಾರೆ. ಪ್ರತಿ ವರ್ಷ 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣಗಳಲ್ಲಿ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಪರಿಸ್ಥಿತಿ ಎದುರಿಸುತ್ತಾರೆ. ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಫ್ಲೂ ನಿಮ್ಮ ದೈನಂದಿನ ಜೀವನ ಮತ್ತು ಕೆಲಸ ಕಾರ್ಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಅದಕ್ಕೆ ಸೂಕ್ತ ಲಸಿಕೆ ಪಡೆಯುವುದು ಅವಶ್ಯವಾಗಿದೆ ಮತ್ತು ಲಸಿಕೆಯಿಂದ ನಿಮ್ಮನ್ನು ನೀವು ರಕ್ಷಿಸಬಹುದಾಗಿದೆ. ಆದರೆ ಅನೇಕ ಜನರು ಅರಿವಿನ ಕೊರತೆಯಿಂದ ಮತ್ತು ತಪ್ಪು ತಿಳುವಳಿಕೆಗಳಿಂದ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ.
ಸಾಮಾನ್ಯವಾಗಿ ವೃತ್ತಿಪರರು ಫ್ಲೂಗೆ ಒಳಗಾಗುವ ಸಂಭವ ಹೆಚ್ಚು. ನೀವು ನಗರದ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಾಗಲಿ ಅಥವಾ ಸಣ್ಣ ಪಟ್ಟಣದ ಕಾರ್ಖಾನೆ ಉದ್ಯೋಗಿಯಾಗಿ ಕೆಲಸ ಮಾಡುವವರಾಗಲಿ ನಿಮ್ಮನ್ನು ಫ್ಲೂ ಬಾಧಿಸುತ್ತದೆ. ಅದರಿಂದ ನಿಮ್ಮ ಮನೆ ಮತ್ತು ಕೆಲಸದ ಮೇಲೆ ಪರಿಣಾಮ ಉಂಟಾಗುತ್ತದೆ. ನಮ್ಮಲ್ಲಿ ಬಹಳಷ್ಟು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸಕ್ಕೆ ಹೋಗುತ್ತಾರೆ. ಈ ಅವಧಿಯಲ್ಲಿ ಅವರು ಕೆಲಸ ಮಾಡುವುದಕ್ಕೆ ಕಷ್ಟ ಪಡುವುಲ್ಲದೆ ಫ್ಲೂ ಅನ್ನು ಇತರರಿಗೆ ಹರಡುತ್ತಾರೆ. ಅಲ್ಲದೇ ಹೆಚ್ಚು ತಡ ಮಾಡಿದಷ್ಟು ವೈದ್ಯರ ಭೇಟಿ, ಔಷಧಿ ಖರ್ಚು ಜಾಸ್ತಿಯಾಗುತ್ತದೆ. ಆಸ್ಪತ್ರೆ ವಾಸ ಮಾಡಬೇಕಾಗಿ ಬಂದು ಖರ್ಚುಗಳು ಮತ್ತಷ್ಟು ಹೆಚ್ಚುವ ಸಂಭವವೂ ಇರುತ್ತದೆ.
ಈ ಕುರಿತು ಮಾತನಾಡುವ ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ. ಜೆಜೊ ಕರಂಕುಮಾರ್ ಅವರು, “ಫ್ಲೂ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಉತ್ಪಾದಕತೆಯ ಮೇಲೆ ಪರಿಣಾಮ ಉಂಟು ಮಾಡಬಹುದು. ಭಾರತದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳಿಂದ ನಮ್ಮ ಆರೋಗ್ಯ ವ್ಯವಸ್ಥೆ ಒತ್ತಡ ಅನುಭವಿಸುತ್ತಿದೆ. ಇಂಥಾ ಹೊತ್ತಲ್ಲಿ ಫ್ಲೂ ಲಸಿಕೆ ತೆಗೆದುಕೊಳ್ಳುವ ಕುರಿತಾದ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ’’ ಎಂದಿದ್ದಾರೆ.
ಇದನ್ನೂ ಓದಿ: ಪ್ರತಿನಿತ್ಯ ಇಯರ್ ಫೋನ್, ಹೆಡ್ ಫೋನ್ ಬಳಕೆ ಮಾಡುತ್ತೀರಾ! ಸ್ವಲ್ಪ ದಿನದಲ್ಲಿ ಕಿವಿ ಕೇಳಿಸದಿರಬಹುದು ಎಚ್ಚರ
‘‘ಫ್ಲೂ ಲಸಿಕೆ ಪಡೆಯುವುದರಿಂದ ನಿಮ್ಮ ದೇಹವು ಫ್ಲೂ ವಿರುದ್ಧ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಇದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಮೂಲಕ ಫ್ಲೂ ಉಲ್ಬಣದಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ’’ ಎಂದು ಹೇಳಿದ್ದಾರೆ.
ಭಾರತದಲ್ಲಿ ಫ್ಲೂ ಲಸಿಕೆಯ ಸ್ವೀಕಾರತೆ ಇನ್ನೂ ಆರಂಭಿಕ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಹೆಚ್ಚಬೇಕಿದೆ. ಹೆಚ್ಚು ಜನರು ಈ ಕುರಿತು ಅರಿವು ಪಡೆದುಕೊಳ್ಳುವುದರಿಂದ ಫ್ಲೂನಿಂದ ರಕ್ಷಣೆ ಪಡೆಯುವವರ ಸಂಖ್ಯೆಯೂ ಜಾಸ್ತಿಯಾಗಲಿದೆ.
ಬೆಂಗಳೂರಿನ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಎಚ್‌ಓಡಿ ಡಾ. ರವೀಂದ್ರ ಮೆಹ್ತಾ ಮಾತನಾಡಿ, “ಲಸಿಕೆ ಪಡೆಯುವುದು ಫ್ಲೂನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಫ್ಲೂ ಲಸಿಕೆ ಸುರಕ್ಷಿತವಾಗಿದೆ, ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಪ್ರತೀ ವರ್ಷವೂ ಆಯಾ ವರ್ಷದ ವೈರಸ್ ತಳಿಗಳಿಗೆ ಹೊಂದಿಕೊಳ್ಳುವಂತೆ ನವೀಕರಿಸಲ್ಪಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಫ್ಲೂ ವೈರಸ್‌ಗಳ ಮೇಲೆ ಹೆಚ್ಚು ನಿಗಾ ಇಡುತ್ತದೆ ಮತ್ತು ಇನ್ಫ್ಲುಯೆಂಜಾ ಸೀಸನ್ಗೆ ತಕ್ಕಂತೆ ವರ್ಷಕ್ಕೆ ಎರಡು ಬಾರಿ ಲಸಿಕೆಯನ್ನು ನವೀಕರಿಸುತ್ತದೆ. ವರ್ಷಕ್ಕೊಮ್ಮೆ ಒಂದು ಶಾಟ್ ಲಸಿಕೆ ತೆಗೆದುಕೊಳ್ಳುವುದರಿಂದ ಫ್ಲೂನ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಮತ್ತು ನ್ಯುಮೋನಿಯಾದಂತಹ ಗಂಭೀರ ಸಮಸ್ಯೆ ಉಂಟಾಗುವುದನ್ನು ತಡೆಯಬಹುದು. ಲಸಿಕೆ ಪಡೆಯುವ ಮೂಲಕ, ನೀವು ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಸುತ್ತಲಿನವರೂ ಸುರಕ್ಷಿತವಾಗಿರಲು ಸಹಾಯ ಮಾಡುತ್ತೀರಿ” ಎಂದು ಹೇಳುತ್ತಾರೆ.
ಭಾರತದಲ್ಲಿ ಅತ್ಯಂತ ಸಾಮಾನ್ಯ ಫ್ಲೂ ವೈರಸ್‌ಗಳೆಂದರೆ ಸಬ್‌ಟೈಪ್ ಎ(ಎಚ್1ಎನ್1) ಮತ್ತು ಎ(ಎಚ್3ಎನ್2). ಸಾಮಾನ್ಯವಾಗಿ ಚಳಿಗಾಲ ಮತ್ತು ಮುಂಗಾರು ಸಮಯದಲ್ಲಿ ಫ್ಲೂ ತೊಂದರೆ ಕೊಡುತ್ತದೆ. ಸೋಂಕಿತ ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಸಿಡಿಯುವ ಸಣ್ಣ ಹನಿಗಳ ಮೂಲಕ ಫ್ಲೂ ಹರಡುತ್ತದೆ.
ಇದನ್ನೂ ಓದಿ: ಈ ತರಕಾರಿಗಳನ್ನು ಸೋರೆಕಾಯಿಯೊಂದಿಗೆ ಸೇವನೆ ಮಾಡಬೇಡಿ
ಕೆಲಸದ ಸ್ಥಳದಲ್ಲಿ ಸುರಕ್ಷಿತವಾಗಿರಲು, ನಿಯಮಿತವಾಗಿ ಕೈ ತೊಳೆಯಿರಿ ಮತ್ತು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ. ನೀವು ಅನಾರೋಗ್ಯ ಪೀಡಿತರಾಗಿದ್ದರೆ ಫ್ಲೂ ಹರಡದಂತೆ ತಡೆಯಲು ಮನೆಯಲ್ಲಿಯೇ ಇರುವುದು ಒಳ್ಳೆಯದು. ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರತಿ ವರ್ಷ ಲಸಿಕೆ ಪಡೆಯುವುದರಿಂದ ನಿಮ್ಮನ್ನು ಮತ್ತು ನಿಮ್ಮ ಸುತ್ತಲಿನವರನ್ನು ಫ್ಲೂನಿಂದ ರಕ್ಷಿಸಿಕೊಳ್ಳಬಹುದು.
ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.