ಪ್ರತಿನಿತ್ಯ ಇಯರ್ ಫೋನ್, ಹೆಡ್ ಫೋನ್ ಬಳಕೆ ಮಾಡುತ್ತೀರಾ! ಸ್ವಲ್ಪ ದಿನದಲ್ಲಿ ಕಿವಿ ಕೇಳಿಸದಿರಬಹುದು ಎಚ್ಚರ
ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಹಿಡಿದು ಮೆಟ್ರೋಗಳಲ್ಲಿ ಓಡಾಡುವ ವ್ಯಕ್ತಿಯ ವರೆಗೆ ಎಲ್ಲರ ಕಿವಿಯಲ್ಲಿಯೂ ಇಯರ್ ಫೋನ್ ಇದ್ದೆ ಇರುತ್ತದೆ. ಮಾತನಾಡಲು ಅಥವಾ ಹಾಡು ಕೇಳಲು ಅಥವಾ ರೀಲ್ಸ್ ನೋಡಲು ಹೀಗೆ ಸಾವಿರ ಕಾರಣಗಳಿಗೆ ಜನರು ಹೆಡ್ ಫೋನ್ ಮತ್ತು ಇಯರ್ ಫೋನ್ ಬಳಸುತ್ತಾರೆ ಆದರೆ ಇದೇ ರೀತಿ ನಾವು ದಿನನಿತ್ಯ ಮಾಡುವುದರಿಂದ ನಮ್ಮ ಕಿವಿ ಏನಾಗಬಹುದು ಎಂದು ಯೋಚಿಸಿದ್ದೀರಾ? ಈ ಬಗ್ಗೆ ಅರಿತೋ ಅರಿಯದೆಯೋ ನಾವು ರೂಢಿಸಿಕೊಂಡಿರುವ ಅಭ್ಯಾಸ ಮುಂದೆ ಕಿವಿಯ ಆರೋಗ್ಯಕ್ಕೆ ಸಂಚಕಾರವಾಗಬಹುದು.

ಪ್ರತಿನಿತ್ಯ ಆಫೀಸ್ ಅಥವಾ ಇನ್ನಿತರ ಕೆಲಸಗಳಿಗೆ ಹೋಗುವವರು ಕಿವಿಯಲ್ಲಿ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆ ಮಾಡುವುದನ್ನು ನೀವು ನೋಡಿರಬಹುದು. ಅದರಲ್ಲಿಯೂ ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಹಿಡಿದು ಮೆಟ್ರೋಗಳಲ್ಲಿ ಓಡಾಡುವ ವ್ಯಕ್ತಿಯ ವರೆಗೆ ಎಲ್ಲರ ಕಿವಿಯಲ್ಲಿಯೂ ಇಯರ್ ಫೋನ್ ಇದ್ದೆ ಇರುತ್ತದೆ. ಮಾತನಾಡಲು ಅಥವಾ ಹಾಡು ಕೇಳಲು ಅಥವಾ ರೀಲ್ಸ್ ನೋಡಲು ಹೀಗೆ ಸಾವಿರ ಕಾರಣಗಳಿಗೆ ಜನರು ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಸುತ್ತಾರೆ ಆದರೆ ಇದೇ ರೀತಿ ನಾವು ದಿನನಿತ್ಯ ಮಾಡುವುದರಿಂದ ನಮ್ಮ ಕಿವಿ ಏನಾಗಬಹುದು ಎಂದು ಯೋಚಿಸಿದ್ದೀರಾ? ಈ ಬಗ್ಗೆ ಅರಿತೋ ಅರಿಯದೆಯೋ ನಾವು ರೂಢಿಸಿಕೊಂಡಿರುವ ಅಭ್ಯಾಸ ಮುಂದೆ ಕಿವಿಯ ಆರೋಗ್ಯಕ್ಕೆ ಸಂಚಕಾರವಾಗಬಹುದು. ಇದಕ್ಕೆ ಪೂರಕವೆಂಬಂತೆ ಇಯರ್ ಫೋನ್ ಗಳು ಮತ್ತು ಹೆಡ್ ಫೋನ್ ಗಳ ಅತಿಯಾದ ಬಳಕೆಯಿಂದ ಉಂಟಾಗುವ ಶ್ರವಣ ನಷ್ಟದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದ್ದು, ಇದರ ದೀರ್ಘಕಾಲದ ಬಳಕೆಯ ವಿರುದ್ಧ ಜಾಗೃತಿ ಮೂಡಿಸುವಂತೆ ರಾಜ್ಯ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಿದೆ.
ವಿರಾಮವಿಲ್ಲದೆ ಇಯರ್ ಫೋನ್, ಹೆಡ್ ಫೋನ್ ಬಳಕೆ ಮಾಡಬೇಡಿ
ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್ಎಸ್) ಡಾ. ಅತುಲ್ ಗೋಯೆಲ್ ಅವರು ಹೇಳುವ ಪ್ರಕಾರ, “ಮೊದಲು ಮಕ್ಕಳಿಗೆ ಪರದೆಯ ಸಮಯವನ್ನು ಸೀಮಿತಗೊಳಿಸಬೇಕು. ಇದು ಬಹಳ ಮುಖ್ಯ. ಏಕೆಂದರೆ ನಿರಂತರ ವೀಕ್ಷಣೆಯು ಮೆದುಳಿನ ಅರಿವಿನ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ, ಸಾಮಾಜಿಕ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಜನರು 50 ಡೆಸಿಬಲ್ ಗಿಂತ ಕಡಿಮೆ ಆಡಿಯೊ ಸಾಧನಗಳನ್ನು ಬಳಕೆ ಮಾಡಬೇಕು. ಜೊತೆಗೆ ಪ್ರತಿದಿನ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯಬಾರದು ಅಲ್ಲದೆ ಆಲಿಸುವ ಅವಧಿಗಳಲ್ಲಿ ವಿರಾಮ ತೆಗೆದುಕೊಳ್ಳಬೇಕು ಅಂದರೆ ಒಂದೇ ಬಾರಿಗೆ ವಿರಾಮ ಇಲ್ಲದೆ ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆ ಮಾಡಬಾರದು. ಸಾಧ್ಯವಾದಷ್ಟು ಕಡಿಮೆ ವಾಲ್ಯೂಮ್ ಗಳಲ್ಲಿ ಆಡಿಯೊವನ್ನು ಪ್ಲೇ ಮಾಡುವಂತೆ” ಗೋಯೆಲ್ ಸಲಹೆ ನೀಡಿದ್ದಾರೆ.
“ಅದರಲ್ಲಿಯೂ ಮಕ್ಕಳು ಆನ್ಲೈನ್ ಗೇಮಿಂಗ್ ಗಳನ್ನು ಹೆಚ್ಚು ಬಳಸದಂತೆ ನೋಡಿಕೊಳ್ಳಬೇಕು. ಅವುಗಳಲ್ಲಿ ಬಳಕೆ ಮಾಡುವ ದೊಡ್ಡ ಶಬ್ದಗಳಿಗೆ ಮಕ್ಕಳು ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸಬೇಕು. ಅದರ ಜೊತೆ ಜೊತೆಗೆ ಈ ಬಗ್ಗೆ ಮಕ್ಕಳಲ್ಲಿ ಸಾಧ್ಯವಾದಷ್ಟು ಪೋಷಕರು ಅರಿವು ಮೂಡಿಸಬೇಕು ಜೊತೆಗೆ ಅವರು ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ ಸರಾಸರಿ ಧ್ವನಿ ಮಟ್ಟವು 100 ಡೆಸಿಬಲ್ಗಳನ್ನು ಮೀರದಂತೆ ರಾಜ್ಯಗಳು ಸರಿಯಾಗಿ ಕ್ರಮಕೈಗೊಳ್ಳಬೇಕು” ಎಂದು ಡಾ. ಅತುಲ್ ಗೋಯೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಷ್ಟ ಮಖಾನಾ, ಇದರಿಂದ ಬೊಜ್ಜಿನ ನಿಯಂತ್ರಣ ಖಂಡಿತ
ಮುಂದೊಂದು ದಿನ ಶ್ರವಣ ಹಾನಿಯಾಗಬಹುದು ಎಚ್ಚರ!
ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಸುವುದರಿಂದ ಉಂಟಾಗುವ ಶ್ರವಣ ನಷ್ಟದ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ಹೆಚ್ಚು ಬಳಸಬಾರದು. ಆದರೆ ಈ ಬಗ್ಗೆ ಗಮನ ಹರಿಸುವುದಕ್ಕಿಂತ ಅದನ್ನು ಕಡೆಗಣಿಸುವವರೇ ಹೆಚ್ಚು. ಇದನ್ನು ಬಳಸುವುದರಲ್ಲಿ ನಿಯಂತ್ರಣ ತರದಿದ್ದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ ಅದರಲ್ಲಿಯೂ ಕಿರಿಯ ವಯಸ್ಸಿನವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಡಿಯೋ ಸಾಧನಗಳ ಮೂಲಕ ಸಂಗೀತ ಮತ್ತು ಇತರ ಶಬ್ದಗಳಿಗೆ ದೀರ್ಘಕಾಲ ಮತ್ತು ಅತಿಯಾಗಿ ಒಡ್ಡಿಕೊಳ್ಳುವುದು ಮುಂದೊಂದು ದಿನ ಶ್ರವಣ ಹಾನಿಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ.
ಈ ರೀತಿಯ ಸಮಸ್ಯೆಗಳನ್ನು ತಡೆಯಲು ಅಥವಾ ಶ್ರವಣ ನಷ್ಟವನ್ನು ಮೊದಲೇ ಪತ್ತೆಹಚ್ಚಲು ಆಗಾಗ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಒಮ್ಮೆ ಶ್ರವಣವು ಶಾಶ್ವತವಾಗಿ ದುರ್ಬಲಗೊಂಡರೆ, ಶ್ರವಣ ಸಾಧನಗಳ ಅಳವಡಿಕೆ ಮಾಡಿದರೂ ಕೂಡ ಮೊದಲಿನಷ್ಟು ಸ್ಪಷ್ಟವಾಗಿ ಕಿವಿ ಕೇಳಿಸುವುದಿಲ್ಲ ಇದಲ್ಲದೆ, ಚಿಕ್ಕ ವಯಸ್ಸಿನಿಂದಲೇ ನಿರಂತರ ಟಿನ್ನಿಟಸ್ ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಟಿನ್ನಿಟಸ್ ಖಿನ್ನತೆಯಿಂದ ನಿಮ್ಮ ಕಿವಿಯಲ್ಲಿ ನಿರಂತರ ರಿಂಗಿಂಗ್ ಅಥವಾ ಗಿಜಿಗುಡುವ ಶಬ್ದ ಕೇಳಿ ಬರುತ್ತಿರಬಹುದು. ಹಾಗಾಗಿ ಈ ಬಗ್ಗೆ ಮೊದಲು ಪೋಷಕರು ಎಚ್ಚರಿಕೆ ವಹಿಸಬೇಕು. ಜೊತೆಗೆ ಪ್ರತಿಯೊಬ್ಬರೂ ಕೂಡ ಕಿವಿಯ ಆರೋಗ್ಯ ಕಾಪಾಡಿಕೊಳ್ಳಲು ಇಯರ್ ಫೋನ್ ಮತ್ತು ಹೆಡ್ ಫೋನ್ ಬಳಕೆಯನ್ನು ನಿಯಂತ್ರಣದಲ್ಲಿ ಇಡಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ