
ಟೊಮೇಟೊ! (Tomatoes) ಈ ಹೆಸರನ್ನು ಕೇಳದವರೇ ಇಲ್ಲ. ಟೊಮೇಟೊ/ ಗೂರೆ ಹಣ್ಣು (ಸೊಲ್ಯಾನಮ್ ಲೈಕೋಪರ್ಸಿಕಮ್) ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಭಾರತೀಯರ ಪ್ರತಿ ಮನೆಯಲ್ಲಿಯೂ ಈ ತರಕಾರಿ (vegetable) ಇಲ್ಲದೆಯೇ ಅಡುಗೆ ತಯಾರಾಗುವುದಿಲ್ಲ. ಹಾಗಾಗಿಯೇ ಇದನ್ನು ಪ್ರತಿ ಖಾದ್ಯದಲ್ಲೂ ಬಳಸಲಾಗುತ್ತದೆ. ಇದು ಯಾವುದೇ ಅಡುಗೆ ಇರಲಿ ತನ್ನದೇ ಆದಂತಹ ರುಚಿ ನೀಡಿ ಅಡುಗೆಯ ಸ್ವಾದವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ? ಟೊಮೇಟೊ ಸೇವನೆಯನ್ನು ಯಾರು ತಪ್ಪಿಸಬೇಕು? ಈ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.
ಟೊಮೇಟೊದಲ್ಲಿ ಲೈಕೋಪೀನ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲ ಹೃದಯಕ್ಕೆ ಹಾನಿ ಮಾಡುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಟೊಮೇಟೊದಲ್ಲಿ ಕಂಡು ಬರುವ ಪೊಟ್ಯಾಸಿಯಮ್ ಅಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ.
ಟೊಮೇಟೊಗಳು ವಿಟಮಿನ್ ಎ ಜೊತೆಗೆ ಲುಟೀನ್, ಬೀಟಾ- ಕ್ಯಾರೋಟಿನ್ ಮತ್ತು ಜಿಯಾಕ್ಸಾಂಥಿನ್ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವು ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಸಾಧನಗಳಿಂದ ಹೊರಸೂಸುವ ನೀಲಿ ಬೆಳಕಿನಿಂದಲೂ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಟೊಮೇಟೊದಲ್ಲಿ ಕಂಡು ಬರುವ ಲೈಕೋಪೀನ್ ಕ್ಯಾನ್ಸರ್ ತಡೆಗಟ್ಟುವಿಕೆಗೂ ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಪ್ರಾಸ್ಟೇಟ್, ಶ್ವಾಸಕೋಶ, ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ.
ಟೊಮೇಟೊಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಅವು ಲೈಕೋಪೀನ್ ಅನ್ನು ಸಹ ಹೊಂದಿರುತ್ತವೆ. ಇವೆರಡೂ ಚರ್ಮದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತವೆ. ಈ ಎರಡು ಅಂಶಗಳು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ, ಪರಿಣಾಮವಾಗಿ ಚರ್ಮ ಆರೋಗ್ಯಕರವಾಗಿರುತ್ತದೆ. ಮಾತ್ರವಲ್ಲ ಯೌವ್ವನದಿಂದ ಕೂಡಿರುತ್ತದೆ. ಜೊತೆಗೆ, ಸೂರ್ಯನ ಬೆಳಕಿನಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹ ಇವು ಸಹಾಯ ಮಾಡುತ್ತವೆ.
ಇದನ್ನೂ ಓದಿ: Tomato: ಮಧುಮೇಹಿಗಳು ಟೊಮೇಟೊ ತಿನ್ನಬಹುದೇ? ಗರ್ಭಿಣಿಯರೂ ಟೊಮೆಟೊಗಳನ್ನು ತಿನ್ನಬಹುದೇ?
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ