AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಕಾಲು ಸೆಳೆತ ಬರುತ್ತಾ? ನಿದ್ರೆ, ಆರೋಗ್ಯ ಎರಡೂ ಹಾಳಾಗುತ್ತೆ ಅಂತ ಭಯವೇ? ಈ ಟಿಪ್ಸ್ ಫಾಲೋ ಮಾಡಿ

ನಿದ್ರೆ ಸರಿಯಾಗಿ ಬಂದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಆದ್ರೆ ಅದಕ್ಕೆ ಅಡ್ಡಿಯಾದರೆ ಆರೋಗ್ಯದ ಜೊತೆಗೆ ಸೌಂದರ್ಯವೂ ಹಾಳಾಗುತ್ತೆ. ಈ ರೀತಿ ಆಗಬಾರದು ಎಂದರೆ ಯಾವುದೇ ಅಡೆತಡೆ ಇಲ್ಲದೆ ರಾತ್ರಿ ನಿದ್ದೆ ಮಾಡಬೇಕು. ಆದ್ರೆ ಕೆಲವರಿಗೆ ರಾತ್ರಿ ಸಮಯದಲ್ಲಿ ಕಾಲು ಸೆಳೆತ ಕಂಡು ಬರುತ್ತದೆ. ಈ ರೀತಿ ಕಂಡುಬರುವ ಸ್ನಾಯು ನೋವು ಹಾನಿಕಾರಕವಲ್ಲದಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾಗಿ ಕಾಲು ಸೆಳೆತಗಳು ಯಾವ ರೀತಿಯಲ್ಲಿ ಬರುತ್ತವೆ, ಅವುಗಳಿಗೆ ಕಾರಣವೇನು ಮತ್ತು ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ರಾತ್ರಿ ಕಾಲು ಸೆಳೆತ ಬರುತ್ತಾ? ನಿದ್ರೆ, ಆರೋಗ್ಯ ಎರಡೂ ಹಾಳಾಗುತ್ತೆ ಅಂತ ಭಯವೇ? ಈ ಟಿಪ್ಸ್ ಫಾಲೋ ಮಾಡಿ
ಕಾಲು ಸೆಳೆತ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 28, 2025 | 5:07 PM

Share

ರಾತ್ರಿ ಸಮಯದಲ್ಲಿ ಕಂಡು ಬರುವ ಕಾಲು ಸೆಳೆತ (Leg Cramps) ಕೆಲವರನ್ನು ಹೈರಾಣವಾಗಿರಿಸುತ್ತದೆ. ನಿದ್ರೆ ಮಾಡಲಾಗದೆಯೇ ನೋವಿನಿಂದ ಪದೇ ಪದೇ ಎಚ್ಚರವಾಗುವುದರಿಂದ ರಾತ್ರಿ ಆಗುವುದೇ ಬೇಡ ಎನಿಸುವಷ್ಟು ಕೋಪ ಬರುತ್ತದೆ. ಆದರೂ ಕೆಲವರು ಇದನ್ನು ಅಲಕ್ಷ್ಯ ಮಾಡುತ್ತಾರೆ. ನಿಮಗೆ ತಿಳಿದಿರಲಿ ಇದು ಸಾಮಾನ್ಯವಲ್ಲ ಇದರಿಂದ ಮುಕ್ತಿ ಪಡೆಯುವುದು ನೀವು ಅಂದುಕೊಂಡಷ್ಟು ಸುಲಭವೂ ಅಲ್ಲ. ಆದರೆ ಅವುಗಳನ್ನು ತಡೆಗಟ್ಟಲು ನೀವು ಪ್ರಯತ್ನಿಸಬಹುದು. ಕಾಲು ಸೆಳೆತಗಳು ಯಾವ ರೀತಿಯಲ್ಲಿ ಬರುತ್ತವೆ, ಅವುಗಳಿಗೆ ಕಾರಣವೇನು ಮತ್ತು ರಾತ್ರಿಯಲ್ಲಿ ಕಂಡುಬರುವ ಕಾಲು ಸೆಳೆತವನ್ನು (Leg Cramps At Night) ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಕಾಲಿನ ಸೆಳೆತ ಎಂದರೆ ಕಾಲಿನ ಸ್ನಾಯುಗಳಲ್ಲಿ, ಪಾದ ಅಥವಾ ತೊಡೆಯಲ್ಲಿ ಹಠಾತ್ ಬಿಗಿತ ಮತ್ತು ನೋವು ಕಂಡು ಬರುವಂತದ್ದು. ಈ ರೀತಿ ಕಂಡು ಬರುವ ಕಾಲಿನ ಸೆಳೆತಗಳು ಹಾನಿಕಾರಕವಲ್ಲದಿದ್ದರೂ ಕೂಡ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಇವು ಹೆಚ್ಚಾಗಿ ರಾತ್ರಿ ಸಮಯದಲ್ಲಿಯೇ ಕಂಡು ಬರುತ್ತದೆ. ಏಕೆಂದರೆ ಹೆಚ್ಚು ಚಟುವಟಿಕೆ ಮಾಡದಿದ್ದಾಗ ಅಥವಾ ನೀವು ನಿದ್ರಿಸುತ್ತಿರುವಾಗ ಇವು ಕಂಡು ಬರುವ ಸಂಭವ ಇರುತ್ತದೆ. ಹಾಗಾಗಿ ರಾತ್ರಿ ಈ ರೀತಿಯಾದಾಗ ನಿಮಗೆ ನಿದ್ರೆಯಿಂದ ಎಚ್ಚರವಾಗಿ, ಮತ್ತೆ ನಿದ್ರೆ ಮಾಡುವುದಕ್ಕೆ ಕಷ್ಟವಾಗಬಹುದು, ಜೊತೆಗೆ ರಾತ್ರಿಯಿಡೀ ನಿಮಗೆ ನೋವು ನೀಡಬಹುದು. ಈ ರೀತಿ ನಿಮಗೂ ಆಗಾಗ ಆಗುತ್ತಿದ್ದರೆ, ಇದಕ್ಕೆ ಮೂಲ ಕಾರಣವನ್ನು ಗುರುತಿಸಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಅತ್ಯಗತ್ಯ.

ರಾತ್ರಿಯಲ್ಲಿ ಕಾಲು ಸೆಳೆತಕ್ಕೆ ಕಾರಣವೇನು?

ಕಾಲು ಸೆಳೆತಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ರಾತ್ರಿಯಲ್ಲಿ ಕಾಲು ಸೆಳೆತಕ್ಕೆ ಕೆಲವು ಸಾಮಾನ್ಯ ಅಂಶಗಳು ಮತ್ತು ಸಂಭಾವ್ಯ ಕಾರಣಗಳಿವೆ.

ಇದನ್ನೂ ಓದಿ
Image
ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ?
Image
ಕಣ್ಣಿನ ಆರೋಗ್ಯದಿಂದ ಕ್ಯಾನ್ಸರ್ ತಡೆಗಟ್ಟುವ ವರೆಗೆ; ಚೀನಿಕಾಯಿಯ ಉಪಯೋಗಗಳಿವು
Image
ಹಣ್ಣು, ತರಕಾರಿಗಳನ್ನು ತೊಳೆಯುವುದು ಹೇಗೆ? ವಿವಿಧ ವಿಧಾನಗಳು ಇಲ್ಲಿವೆ
Image
ನೀವು ಏನಾದರೂ ತಿಂದ ತಕ್ಷಣ ಟಾಯ್ಲೆಟ್ ಗೆ ಹೋಗುತ್ತೀರಾ? ನಿಮಗೆ ಇಲ್ಲಿದೆ ಸಲಹೆ

ನಿರ್ಜಲೀಕರಣ:

ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯದಿರುವುದು ಜೊತೆಗೆ ಮದ್ಯ ಸೇವನೆ ಮಾಡುವುದು ಕೂಡ ಇದಕ್ಕೆ ಕಾರಣವಾಗಿರಬಹುದು.

ಎಲೆಕ್ಟ್ರೋಲೈಟ್ ಅಸಮತೋಲನ:

ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಲ್ಲಿನ ಅಸಮತೋಲನವು ಸ್ನಾಯುಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೆಳೆತಕ್ಕೆ ಕಾರಣವಾಗಬಹುದು.

ಅತಿಯಾದ ಒತ್ತಡ:

ವಿಶೇಷವಾಗಿ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡುವ ಸಮಯದಲ್ಲಿ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಹಾಕುವುದರಿಂದಲೂ ಈ ರೀತಿಯ ಸಮಸ್ಯೆ ಕಂಡುಬರಬಹುದು.

ಸ್ನಾಯುಗಳ ಆಯಾಸ:

ದಣಿದ ಅಥವಾ ಅತಿಯಾಗಿ ಕೆಲಸ ಮಾಡುವ ಸ್ನಾಯುಗಳು ಸೆಳೆತಕ್ಕೆ ಹೆಚ್ಚು ಒಳಗಾಗುತ್ತವೆ.

ಔಷಧಗಳು:

ಮೂತ್ರವರ್ಧಕಗಳು, ಸ್ಟ್ಯಾಟಿನ್ಗಳು ಮತ್ತು ಕೆಲವು ಆಸ್ತಮಾ ಔಷಧಿಗಳು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು.

ಗರ್ಭಧಾರಣೆ:

ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿರುವ ಗರ್ಭಿಣಿಯರು ಹೆಚ್ಚಾಗಿ ಕಾಲು ಸೆಳೆತವನ್ನು ಅನುಭವಿಸುತ್ತಾರೆ.

ವೈದ್ಯಕೀಯ ಪರಿಸ್ಥಿತಿಗಳು:

ಮಧುಮೇಹ, ಮೂತ್ರಪಿಂಡ ಕಾಯಿಲೆ, ಥೈರಾಯ್ಡ್ ಅಸ್ವಸ್ಥತೆಗಳು ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು.

ವಯಸ್ಸು:

ವಯಸ್ಸಾದವರಲ್ಲಿ ಸ್ನಾಯು ಸೆಳೆತ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ರಾತ್ರಿಯಲ್ಲಿ ಕಂಡು ಬರುವ ಕಾಲು ಸೆಳೆತವನ್ನು ತಡೆಯುವುದು ಹೇಗೆ?

ಹೈಡ್ರೇಟೆಡ್ ಆಗಿರಿ

ದೇಹದ ನಿರ್ಜಲೀಕರಣ ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು, ಆದ್ದರಿಂದ ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ. ಅಲ್ಲದೆ, ಮಲಗುವ ಸಮಯಕ್ಕೆ ಮುಂಚಿತವಾಗಿ ಆಲ್ಕೋಹಾಲ್ ಸೇವಿಸಬೇಡಿ. ಈ ರೀತಿಯ ಅಭ್ಯಾಸ ನಿಮ್ಮನ್ನು ನಿರ್ಜಲೀಕರಣಗೊಳಿಸುವುದಲ್ಲದೆ, ಸ್ನಾಯು ಅಂಗಾಂಶಗಳಿಗೆ ಹಾನಿ ಮಾಡುತ್ತದೆ. ಜೊತೆಗೆ ವಿಟಮಿನ್ ಬಿ ಮತ್ತು ಡಿ, ಕಬ್ಬಿಣ, ಸತು ಮತ್ತು ಪೊಟ್ಯಾಸಿಯಮ್ ಕೊರತೆಗೆ ಕಾರಣವಾಗಬಹುದು.

ಶಾಖ ನೀಡಿ

ಶಾಖವು ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲ ಮಾಡಿ ಕಾಲಿನ ಸೆಳೆತದಿಂದ ನಿಮಗೆ ಪರಿಹಾರ ನೀಡುತ್ತದೆ. ಯಾವ ಜಾಗದಲ್ಲಿ ನೋವು ಬರುತ್ತಿದೆ ಎಂಬುದನ್ನು ಕಂಡು ಹಿಡಿದು ಅದರ ಮೇಲೆ ಬಿಸಿ ಟವಲ್, ಹಾಟ್ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಕಾಲು ಸೆಳೆತ ಬಹ ತೀವ್ರವಾಗಿದ್ದರೆ ಬಿಸಿನೀರಿನ ಸ್ನಾನವನ್ನು ಕೂಡ ಮಾಡಬಹುದು. ಮಾತ್ರವಲ್ಲ ಈ ರೀತಿ ಸಮಸ್ಯೆ ಕಂಡು ಬರುತ್ತಿದ್ದರೆ ಪ್ರತಿನಿತ್ಯ ಮಲಗುವ ಮುನ್ನ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಕಾಲಿನ ಸೆಳೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಮಸಾಜ್ ಮಾಡಿ

ರಾತ್ರಿ ವೇಳೆ ಕಾಲು ಸೆಳೆತ ಕಾಣಿಸಿಕೊಂಡರೆ, ನೋವು ಕಂಡು ಬರುತ್ತಿರುವ ಜಾಗವನ್ನು ಎರಡೂ ಕೈಗಳಿಂದ ಮಸಾಜ್ ಮಾಡಲು ಪ್ರಯತ್ನಿಸಿ. ಇದು ಬಿಗಿಯಾದ ಸ್ನಾಯುವನ್ನು ತ್ವರಿತವಾಗಿ ಸಡಿಲಗೊಳಿಸಲು ಸಹಾಯ ಮಾಡುತ್ತದೆ.

ಮೆಗ್ನೀಸಿಯಮ್ ಪೂರಕ ಆಹಾರಗಳ ಸೇವನೆ ಮಾಡಿ

ಮೆಗ್ನೀಸಿಯಮ್ ಕೊರತೆಯು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ. ಹಾಗಾಗಿ ಮೆಗ್ನೀಸಿಯಮ್ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಿ. ನಿಮ್ಮ ದೇಹದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವಲ್ಲಿ ಮೆಗ್ನೀಸಿಯಮ್ ಅತ್ಯಗತ್ಯ.

ಪೊಟ್ಯಾಸಿಯಮ್ ಭರಿತ ಆಹಾರವನ್ನು ಹೆಚ್ಚು ಸೇವಿಸಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಮ್ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಕಡಿಮೆ ಮಟ್ಟದ ಪೊಟ್ಯಾಸಿಯಮ್ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಬಾಳೆಹಣ್ಣು, ಕಿತ್ತಳೆ ಮತ್ತು ಆಲೂಗಡ್ಡೆಯ ಸೇವನೆಯನ್ನು ಹೆಚ್ಚಿಸಿಕೊಳ್ಳಿ.

ನಡೆಯಿರಿ ಅಥವಾ ಕಾಲನ್ನು ಅಲ್ಲಾಡಿಸಿ

ಕೆಲವೊಮ್ಮೆ ಕಾಲಿನ ಸೆಳೆತಕ್ಕೆ ಉತ್ತಮ ಪರಿಹಾರವೆಂದರೆ ನಡೆಯುವುದು. ಹೌದು, ನಡಿಗೆಯಿಂದ ಕಾಲಿನ ಸಣ್ಣ ಅಪಧಮನಿಗಳು ಹಿಗ್ಗುತ್ತವೆ, ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಸ್ನಾಯುಗಳಿಗೆ ರಕ್ತದ ಹರಿವಿನ ಕೊರತೆಯಿಂದಾಗಿ ಕಾಲು ಸೆಳೆತ ಉಂಟಾಗುವುದರಿಂದ, ನಡೆಯುವುದು ಈ ರೀತಿಯ ಸಮಸ್ಯೆಗೆ ಮುಕ್ತಿ ನೀಡುತ್ತದೆ.

ಇದನ್ನೂ ಓದಿ: ನಡೆಯುವಾಗ ಕಾಲು ಸೆಳೆತ? ಇದು ಹೃದಯದ ತೊಂದರೆಗಳನ್ನು ಸೂಚಿಸುತ್ತದೆ

ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನಿಲ್ಲುವುದನ್ನು ತಪ್ಪಿಸಿ

ಸಾಧ್ಯವಾದರೆ, ಹಗಲಿನಲ್ಲಿ ದೀರ್ಘಕಾಲ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ಅಥವಾ ನಿಂತುಕೊಂಡಿರುವುದನ್ನು ತಪ್ಪಿಸಿ. ಪ್ರತಿದಿನ ಹೆಚ್ಚಿನ ಸಮಯ ನಿಂತುಕೊಂಡಿರುವವರಲ್ಲಿ ಕಾಲಿನಲ್ಲಿ ಸೆಳೆತ ಹೆಚ್ಚಾಗಿ ಕಂಡುಬರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Fri, 27 June 25