Heart Attack: ಅತಿಯಾಗಿ ವರ್ಕ್​ಔಟ್ ಮಾಡಿದರೂ ಹೃದಯಾಘಾತ ಆಗುತ್ತಾ?; ವೈದ್ಯರ ಸಲಹೆ ಇಲ್ಲಿದೆ

|

Updated on: Feb 05, 2024 | 11:06 AM

25 ವರ್ಷದ ಆಸುಪಾಸಿನವರಲ್ಲೂ ಈಗೀಗ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲೆಲ್ಲ ದೈಹಿಕವಾಗಿ ಸಕ್ರಿಯರಾಗಿಲ್ಲದ ವ್ಯಕ್ತಿಗಳಿಗೆ ಹೃದಯಾಘಾತದ ಅಪಾಯ ಹೆಚ್ಚು ಎನ್ನಲಾಗುತ್ತಿತ್ತು. ಆದರೀಗ, ಜಿಮ್​, ವ್ಯಾಯಾಮ, ಜಾಗಿಂಗ್ ಎಂದೆಲ್ಲ ಬಹಳ ಆ್ಯಕ್ಟಿವ್ ಆಗಿರುವವರಿಗೂ ಹೃದಯಾಘಾತ ಉಂಟಾಗುತ್ತಿದೆ. ಇದರ ಹಿಂದಿನ ಕಾರಣವೇನೆಂದು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಆದರೂ ಅತಿಯಾಗಿ ವರ್ಕ್​ಔಟ್ ಮಾಡುವವರಿಗೆ ವೈದ್ಯರು ನೀಡಿರುವ ಕಿವಿಮಾತು ಇಲ್ಲಿದೆ.

Heart Attack: ಅತಿಯಾಗಿ ವರ್ಕ್​ಔಟ್ ಮಾಡಿದರೂ ಹೃದಯಾಘಾತ ಆಗುತ್ತಾ?; ವೈದ್ಯರ ಸಲಹೆ ಇಲ್ಲಿದೆ
ಹೃದಯಾಘಾತ
Image Credit source: iStock
Follow us on

ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡಿ, ಜಾಗಿಂಗ್ ಸೈಕ್ಲಿಂಗ್ ಎಂದೆಲ್ಲ ತಮ್ಮ ದೇಹವನ್ನು ಬಹಳ ಫಿಟ್ ಆಗಿಟ್ಟುಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಹೃದಯಾಘಾತದಿಂದ ಸಾವನ್ನಪ್ಪಿದ ನಂತರ ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಇದೀಗ ಪ್ರತಿದಿನ 100 ಕಿಲೋ ಮೀಟರ್ ಸೈಕಲ್ ತುಳಿಯುತ್ತಿದ್ದ ಸೈಕ್ಲಿಸ್ಟ್ ಹಾಗೂ ಫಿಟ್‌ನೆಸ್ ಐಕಾನ್ ಆಗಿದ್ದ ಅನಿಲ್ ಕಡಸೂರ್ 3 ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅತಿಯಾದ ವರ್ಕ್​ಔಟ್​ನಿಂದಲೂ ಹೃದಯಾಘಾತ (Heart Attack) ಉಂಟಾಗಬಹುದಾ? ಎಂಬ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿವೆ.

ಸೆಂಚುರಿ ರೈಡರ್ ಎಂದೇ ಖ್ಯಾತಿ ಪಡೆದಿದ್ದ ಅನಿಲ್ ಪ್ರತಿನಿತ್ಯ 100 ಕಿ.ಮೀ. ಸೈಕಲ್ ತುಳಿಯುತ್ತಿದ್ದರು. 45 ವರ್ಷ ವಯಸ್ಸಿನ ಅನಿಲ್ ಇತ್ತೀಚೆಗೆ 42 ತಿಂಗಳು ಒಂದರ ಹಿಂದೊಂದು ಸೆಂಚುರಿ ರೈಡ್‌ಗಳನ್ನು ಪೂರ್ಣಗೊಳಿಸಿದ್ದರು. ಕಳೆದ 1,500 ದಿನಗಳಿಂದ ಪ್ರತಿದಿನ 100 ಕಿಮೀ ಸೈಕ್ಲಿಂಗ್ ಮಾಡುವ ಮೂಲಕ ಸೆಂಚುರಿ ರೈಡರ್ ಎಂದು ಹೆಸರಾಗಿದ್ದ ಅನಿಲ್ ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದರು. ಅನೇಕ ಯುವಕರಿಗೆ ಫಿಟ್‌ನೆಸ್ ಐಕಾನ್ ಆಗಿದ್ದ ಅವರು ಜನವರಿ 31ರಂದು ತಮ್ಮ 42 ತಿಂಗಳ ಬ್ಯಾಕ್-ಟು-ಬ್ಯಾಕ್ ಸೆಂಚುರಿ ರೈಡ್‌ಗಳನ್ನು ಪೂರ್ಣಗೊಳಿಸುವುದಾಗಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ನಂತರ ಅದೇ ರಾತ್ರಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದ ಅಪಾಯದಿಂದ ಪಾರಾಗುವುದು ಹೇಗೆ?

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ನಡುವೆ ಅನಿಲ್ ಅವರ ಸಾವಿನಿಂದ ಮತ್ತಷ್ಟು ಆತಂಕ ಎದುರಾಗಿದೆ. ಜಡ ಜೀವನಶೈಲಿ, ಆಹಾರ ಮತ್ತು ಇತರ ಅಂಶಗಳು ಹೃದಯಾಘಾತಕ್ಕೆ ಕಾರಣವೆಂದು ಹೇಳಲಾಗುತ್ತದೆ. ಆದರೆ, ಅನಿಲ್ ಕಡ್ಸೂರ್ ಪ್ರಕರಣದಲ್ಲಿ ವೈದ್ಯರು ಹೃದಯಾಘಾತಕ್ಕೆ ಕಾರಣವೇನು? ಎಂಬ ಬಗ್ಗೆ ಇತರ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಅನಿಲ್ ಅವರ ಹೃದಯಾಘಾತಕ್ಕೆ ಕಾರಣವೇನೆಂಬುದರ ಬಗ್ಗೆ ಖ್ಯಾತ ವೈದ್ಯರಾದ ಡಾ. ಸುಧೀರ್ ಕುಮಾರ್, ಅವರಿಗೆ ವ್ಯಾಯಾಮದ ಡೋಸ್ ವಿಪರೀತವಾಗಿತ್ತು. ನಿತ್ಯ ಸುಮಾರು 7 ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿ 100 ಕಿ.ಮೀ. ಪ್ರಯಾಣಿಸುತ್ತಿದ್ದರು. ಸಂಶೋಧನೆಯ ಪ್ರಕಾರ, ಮರಣದ ಮೇಲೆ ವ್ಯಾಯಾಮದ ಪರಿಣಾಮವು ಯು ಆಕಾರದಲ್ಲಿರುತ್ತದೆ. ಆರಂಭದಲ್ಲಿ ಅದರಿಂದ ಪ್ರಯೋಜನವಾಗುತ್ತದೆ. ಕೆಲವು ನಿರ್ದಿಷ್ಟ ವ್ಯಾಯಾಮದ ಪ್ರಮಾಣವನ್ನು ಮೀರಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತದೆ. ಅದರಿಂದ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಉಂಟಾಗುವ ಲಕ್ಷಣಗಳೇನು?

ಕನಿಷ್ಟ ಒಂದು ದಿನದ ಬಿಡುವೂ ಇಲ್ಲದೆ ನಿರಂತರವಾಗಿ ವ್ಯಾಯಾಮ ಮಾಡುವವರು ಹೆಚ್ಚಿನ ಮರಣದ ಅಪಾಯವನ್ನು ಹೊಂದಿರುತ್ತಾರೆ. ಮಧ್ಯೆ ಆಗಾಗ ವಿಶ್ರಾಂತಿಯ ಅಗತ್ಯವಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೀಗಾಗಿ, ವ್ಯಾಯಾಮದ ಪ್ರಮಾಣವನ್ನು ಮಿತಿಯಲ್ಲಿ ಇರಿಸುವುದು ಉತ್ತಮ. ತೀವ್ರವಾದ ವ್ಯಾಯಾಮದಿಂದ ವಾರಕ್ಕೆ ಕನಿಷ್ಠ 1 ದಿನವಾದರೂ ವಿರಾಮ ತೆಗೆದುಕೊಳ್ಳಬೇಕು. ಪ್ರತಿನಿತ್ಯ 100 ಕಿ.ಮೀ ಸೈಕ್ಲಿಂಗ್ ಮಾಡುವುದರಿಂದ ನಿಮ್ಮ ದೇಹಕ್ಕೆ ಶ್ರಮ ಉಂಟಾಗುತ್ತದೆ. ಅದು ಅಂತಿಮವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹೃದಯಾಘಾತದ ನಂತರದ ಮೊದಲ 1 ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಹೃದಯಾಘಾತದ ಮೊದಲ 60 ನಿಮಿಷಗಳಲ್ಲಿ ಸೂಕ್ತ ಕ್ರಮವನ್ನು ಕೈಗೊಂಡರೆ ಅದರಿಂದಾಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ