
ಕೆಲವರು ಸೋರೆಕಾಯಿಯನ್ನು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಇದರಿಂದ ಪಲ್ಯ, ಸಾಂಬಾರ್, ಚಟ್ನಿ, ಖೀರ್ ಹೀಗೆ ಖಾರವಾದ ಪದಾರ್ಥಗಳಿಂದ ಹಿಡಿದು ಸಿಹಿ ವರೆಗೆ ಎಲ್ಲಾ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇನ್ನು ಈ ಸೋರೆಕಾಯಿ (Bottle Gourd) ನಮ್ಮ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಕೂಡ ಬಹಳ ಪ್ರಯೋಜನಕಾರಿಯಾಗಿದೆ. ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಸತು, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿಯೇ ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಆದರೆ ಇಷ್ಟೆಲ್ಲಾ ಆರೋಗ್ಯ (health) ಪ್ರಯೋಜನಗಳಿರುವ ಈ ತರಕಾರಿಯನ್ನು ಕೆಲವರು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗದರೆ ಇದು ಯಾರಿಗೆ ಒಳ್ಳೆಯದು? ಇದರಿಂದ ಸಿಗುವ ಪ್ರಯೋಜನಗಳೇನು? ಯಾರು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳಿ.
ಈ ತರಕಾರಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಹೆಚ್ಚು ತಿನ್ನುವ ಬಯಕೆಯನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋರೆಕಾಯಿ ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಇನ್ನು ಇವುಗಳಲ್ಲಿರುವ ಕಡಿಮೆ ಪಿಷ್ಟ ಅಂಶವು ಮಧುಮೇಹಿಗಳಿಗೆ ಒಳ್ಳೆಯದು. ಅವು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತವೆ.
ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವವರು ಅಥವಾ ಈಗಾಗಲೇ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೋರೆಕಾಯಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಫೈಬರ್ ಅಂಶ ಚೆನ್ನಾಗಿದ್ದರೂ ಕೂಡ ಇದು ಜೀರ್ಣವಾಗುವುದಿಲ್ಲ. ಆದ್ದರಿಂದ, ಅನಿಲ, ಅಜೀರ್ಣ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳಿರುವವರು ಈ ತರಕಾರಿ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಇಲ್ಲದಿದ್ದರೆ, ನಿಮ್ಮ ಸಮಸ್ಯೆಗಳು ಇನ್ನಷ್ಟು ಹದಗೆಡಬಹುದು.
ಸೋರೆಕಾಯಿ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದು. ಆದರೆ ಈಗಾಗಲೇ ಕಡಿಮೆ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ತರಕಾರಿ ಸೇವನೆ ಮಾಡುವುದು ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಕಡಿಮೆ ರಕ್ತದೊತ್ತಡ ಸಮಸ್ಯೆ ಇರುವವರು ಸೇವನೆ ಮಾಡಬಾರದು ಅಥವಾ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಸೋರೆಕಾಯಿಯಲ್ಲಿ ಆಕ್ಸಲೇಟ್‌ಗಳು ಇರುತ್ತವೆ. ಇವು ಮೂತ್ರಪಿಂಡಗಳಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಆದ್ದರಿಂದ, ಈಗಾಗಲೇ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ತರಕಾರಿಯ ಸೇವನೆ ಮಾಡುವುದನ್ನು ತಪ್ಪಿಸುವುದು ಉತ್ತಮ. ನೀವು ಇದನ್ನು ತಿನ್ನಲೇಬೇಕೆಂದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದು ಆ ಬಳಿಕ ಸೇವನೆ ಮಾಡುವುದು ಬಹಳ ಉತ್ತಮ.
ಎಚ್ಐವಿ/ ಏಡ್ಸ್ ರೋಗಿಗಳು ಅಥವಾ ಕೀಮೋಥೆರಪಿಗೆ ಒಳಗಾಗುವಂತಹ ಅಥವಾ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಜಾಗರೂಕರಾಗಿರಬೇಕು. ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನ ಅಪಾಯವಿದೆ. ವಿಶೇಷವಾಗಿ, ಆಹಾರವನ್ನು ಸರಿಯಾಗಿ ಬೇಯಿಸದಿದ್ದರೆ ಬಹಳ ಅಪಾಯಕಾರಿ.
ಇದನ್ನೂ ಓದಿ: ಈ ತರಕಾರಿಗಳನ್ನು ಸೋರೆಕಾಯಿಯೊಂದಿಗೆ ಸೇವನೆ ಮಾಡಬೇಡಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 4 July 25