ನರಗಳಿಗೆ ಹಾನಿ ಮಾಡುವ ಈ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನರಗಳ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ನಮ್ಮ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ನಾವು ಇಷ್ಟಪಟ್ಟು ತಿನ್ನುವಂತಹ ಕೆಲವು ಆಹಾರಗಳು ನರಗಳ ಆರೋಗ್ಯವನ್ನು ಹಾಳುಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ನರಗಳ ಆರೋಗ್ಯ ಕಾಪಾಡಿಕೊಳ್ಳಲು, ಪ್ರತಿನಿತ್ಯ ಯಾವ ರೀತಿಯ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ನರಮಂಡಲ ದೇಹದಲ್ಲಿನ ನರ ಮತ್ತು ಕೋಶಗಳ ಜಾಲವಾಗಿದ್ದು ನಮ್ಮ ಮೆದುಳು ಮತ್ತು ದೇಹದ ನಡುವೆ ಮಾಹಿತಿಯನ್ನು ರವಾನೆ ಮಾಡುವಂತಹ ಕೆಲಸ ಮಾಡುತ್ತದೆ. ಇದರರ್ಥ ನರಗಳು (Nerves) ನಮ್ಮ ಮೆದುಳಿನಿಂದ ದೇಹದ ವಿವಿಧ ಭಾಗಗಳಿಗೆ ಸಂದೇಶಗಳನ್ನು ಕಳುಹಿಸುತ್ತವೆ. ಅದಕ್ಕಾಗಿಯೇ ನರಗಳ ಆರೋಗ್ಯವು ದೇಹದ ಒಟ್ಟಾರೆ ಆರೋಗ್ಯಕ್ಕೆ (Health) ಬಹಳ ನಿರ್ಣಾಯಕವಾಗಿದೆ. ಆದರೆ, ಪ್ರಸ್ತುತ ನಮ್ಮ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರಲ್ಲಿ ನರ ದೌರ್ಬಲ್ಯ ಸಮಸ್ಯೆ ಕಂಡುಬರುತ್ತಿದೆ. ಪ್ರತಿನಿತ್ಯ ನಾವು ಸೇವಿಸುವ ಕೆಲವು ಆಹಾರಗಳು ನರಗಳಿಗೆ ಹಾನಿ ಉಂಟುಮಾಡಬಹುದು. ಹಾಗಾದರೆ ಯಾವ ರೀತಿಯ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಕ್ಕರೆ ಪಾನೀಯಗಳು
ನಮಗೆ ಬಾಯಾರಿಕೆಯಾದಾಗ, ನೀರು ಕುಡಿಯುವ ಬದಲು ಹೆಚ್ಚಿನ ಸಂದರ್ಭಗಳಲ್ಲಿ ಸೋಡಾ, ಕ್ರೀಡಾ ಪಾನೀಯ, ಶಕ್ತಿ ಪಾನೀಯ ಮತ್ತು ಹಣ್ಣಿನ ರಸಗಳಂತಹ ಸಕ್ಕರೆ ಬೆರೆಸಿರುವಂತಹ ಪಾನೀಯಗಳನ್ನು ಕುಡಿಯುತ್ತೇವೆ. ಆದರೆ ಆ ಕ್ಷಣಕ್ಕೆ ನಮ್ಮ ಬಾಯಾರಿಕೆಯನ್ನು ನೀಗಿಸುವ ಈ ತಂಪು ಪಾನೀಯಗಳು ನರಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಪಾನೀಯಗಳಲ್ಲಿ ಪೋಷಕಾಂಶಗಳ ಕೊರತೆಯಿದ್ದು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಇರುತ್ತದೆ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಆಲ್ಝೈಮರ್ ಕಾಯಿಲೆಗೆ ಕಾರಣವಾಗಬಹುದು. ಈ ಪಾನೀಯಗಳಲ್ಲಿರುವ ಫ್ರಕ್ಟೋಸ್ ಮೆದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಸಂಸ್ಕರಿಸಿದ, ಪ್ಯಾಕ್ ಮಾಡಿದ ಆಹಾರಗಳು
ಇತ್ತೀಚಿನ ದಿನಗಳಲ್ಲಿ, ಬಹಳಷ್ಟು ಜನರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇರುತ್ತಾರೆ. ಹಾಗಾಗಿ ಜೀವನ ಒತ್ತಡದಿಂದಲೇ ಕೂಡಿರುತ್ತದೆ. ಕೆಲವರಂತು ಮನೆ ಜವಾಬ್ದಾರಿ ನಿಭಾಯಿಸಲು ಯಾವಾಗಲೂ ಮನೆಯಿಂದ ದೂರ ಇರುತ್ತಾರೆ. ಇಂತವರಲ್ಲಿ ಅನೇಕರು ಸಮಯವಿಲ್ಲದೆ ಹಸಿವಾದಾಗ ಸಂಸ್ಕರಿಸಿದ ಅಥವಾ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸುತ್ತಾರೆ. ಆದರೆ ಈ ಆಹಾರಗಳು ನರಗಳ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ. ಏಕೆಂದರೆ ಈ ರೀತಿಯ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಮತ್ತು ಸಕ್ಕರೆ ಇದ್ದು, ಇದು ನರಗಳಿಗೆ ಹಾನಿ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ಆಹಾರಗಳು ಸರಿಯಾದ ಪ್ರಮಾಣದ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ, ಇದು ನರಗಳ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.
ಜಂಕ್ ಫುಡ್, ಫಾಸ್ಟ್ ಫುಡ್
ಇತ್ತೀಚಿನ ದಿನಗಳಲ್ಲಿ, ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಿಜ್ಜಾ, ಬರ್ಗರ್ ಮತ್ತು ಫ್ರೆಂಚ್ ಫ್ರೈಸ್‌ನಂತಹ ಜಂಕ್ ಫುಡ್‌ಗಳ ಜೊತೆಗೆ, ಫಾಸ್ಟ್ ಫುಡ್‌ಗಳು ಅನಾರೋಗ್ಯಕರ ಕೊಬ್ಬುಗಳು, ಹೆಚ್ಚುವರಿ ಉಪ್ಪು ಮತ್ತು ಸಕ್ಕರೆಯನ್ನು ಹೊಂದಿರುತ್ತವೆ. ಇವು ನರಗಳಿಗೆ ಹಾನಿಕಾರಕ. ಪರಿಣಾಮವಾಗಿ, ಅವು ನರ ದೌರ್ಬಲ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ನೀವು ಈ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು .
ಸಿಹಿತಿಂಡಿಗಳು
ಹೆಚ್ಚಿನ ಮಟ್ಟದ ಸಕ್ಕರೆ ಬೆರೆಸಿರುವಂತಹ ಆಹಾರಗಳು ನರಗಳ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ನರಗಳಿಗೆ ಹಾನಿ ಮಾಡುತ್ತದೆ. ಮಧುಮೇಹ ಇರುವವರಿಗೆ ಇದು ಬಹಳ ಅಪಾಯಕಾರಿ.
ಮದ್ಯಪಾನ, ಧೂಮಪಾನ
ಆಗಾಗ ಅಥವಾ ನಿರಂತರವಾಗಿ ಮದ್ಯಪಾನ ಮಾಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಇದು ನರಪ್ರೇಕ್ಷಕಗಳ ಅಡ್ಡಿಗೆ ಕಾರಣವಾಗುತ್ತದೆ, ಅಂದರೆ ಅದು ನರಗಳಿಗೆ ಹಾನಿ ಮಾಡುತ್ತದೆ. ಅತಿಯಾದ ಮದ್ಯಪಾನವು ದೇಹದಲ್ಲಿ ವಿಟಮಿನ್ ಬಿ 1 ಕೊರತೆಯನ್ನು ಉಂಟುಮಾಡುತ್ತದೆ, ಇದು ವೆರ್ನಿಕೆ- ಕೊರ್ಸಕೋಫ್ ಸಿಂಡ್ರೋಮ್ ಬೆಳವಣಿಗೆಗೆ ಕಾರಣವಾಗಬಹುದು. ಈ ಸಿಂಡ್ರೋಮ್ ಮೆದುಳಿಗೆ ಮಾತ್ರವಲ್ಲದೆ ನರಗಳಿಗೂ ತೀವ್ರ ಹಾನಿಯನ್ನುಂಟುಮಾಡುತ್ತದೆ.
ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಸೋರೆಕಾಯಿಯಿಂದ ದೂರವಿದ್ದಷ್ಟೂ ಒಳ್ಳೆಯದು? ಯಾಕೆ ಗೊತ್ತಾ?
ನರಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಆಹಾರಗಳು:
- ಸಾಲ್ಮನ್ ಮೀನು, ಅಗಸೆ ಬೀಜಗಳು ಮತ್ತು ವಾಲ್ನಟ್‌ಗಳು ಒಮೆಗಾ- 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಇವು ನರಗಳ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
- ಪಾಲಕ್ ಮತ್ತು ಬ್ರೊಕೊಲಿಯಂತಹ ತರಕಾರಿಯಲ್ಲಿ ವಿಟಮಿನ್ ಬಿ, ಸಿ, ಇ, ಮೆಗ್ನೀಸಿಯಮ್, ಸತು, ಫೋಲೇಟ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ನರಗಳ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬಾದಾಮಿ ಮತ್ತು ಗೋಡಂಬಿಯಂತಹ ಒಣ ಹಣ್ಣುಗಳು ಕೂಡ ನರಗಳ ಬಲವನ್ನು ಹೆಚ್ಚಿಸುತ್ತವೆ.
- ಕುಂಬಳಕಾಯಿ ಬೀಜಗಳಲ್ಲಿರುವ ಕಬ್ಬಿಣ, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಪೋಷಕಾಂಶಗಳು ನರಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
- ಧಾನ್ಯಗಳು ಕೂಡ ನರಗಳ ಆರೋಗ್ಯವನ್ನು ಉತ್ತೇಜಿಸುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








