
ನಾವು ಸೇವನೆ ಮಾಡುವ ಆಹಾರಕ್ಕೂ, ನಮ್ಮ ಮೆದುಳು ಕಾರ್ಯ ನಿರ್ವಹಿಸುವುದಕ್ಕೂ ಸಂಬಂಧವಿದೆ. ಈ ಬಗ್ಗೆ ಕೆಲವರಿಗೆ ತಿಳಿದಿರಬಹುದು. ಇನ್ನು ಹಲವರು ತಿಳಿದಿದ್ದರೂ ಅದನ್ನು ಕಡೆಗಣಿಸಿರಬಹುದು. ಸಾಮಾನ್ಯವಾಗಿ ನಾವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೇವೆಯೋ ಅದನ್ನು ನಮ್ಮ ಯೋಚನಾಕ್ರಮದ ಮೇಲೆ ಪ್ರಭಾವ ಬೀರಬಹುದು. ಅಂದರೆ ನಮ್ಮ ಕರುಳು (Gut health) ಮತ್ತು ಮೆದುಳಿನ ಕಾರ್ಯಗಳು ಒಂದಕ್ಕೊಂದು ಬೆಸೆದಿರುತ್ತದೆ. ಹಾಗಾಗಿ ರಸ್ಪರ ಪ್ರಭಾವ ಬೀರುತ್ತವೆ. ಕರುಳು ಕೇವಲ ನಮ್ಮ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿ, ಮಾನಸಿಕ ಮತ್ತು ಒಟ್ಟಾರೆ ಆರೋಗ್ಯಕ್ಕೂ ಅತ್ಯಗತ್ಯ ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಕರುಳಿನಲ್ಲಿ ಉತ್ಪತ್ತಿಯಾಗುವ ಸಿರೊಟೋನಿನ್, ಮೆದುಳು (Brain), ಕರುಳನ್ನು ನಿಯಂತ್ರಿಸುತ್ತದೆ. ಇದು ನಿದ್ರೆಯ ಗುಣಮಟ್ಟ, ಮನಸ್ಥಿತಿ ಬದಲಾವಣೆ ಮತ್ತು ಹಸಿವಿನ ಪ್ರಮುಖ ನಿಯಂತ್ರಕವಾಗಿದೆ. ಈ ಹಾರ್ಮೋನ್ ಮಟ್ಟವನ್ನು ವಿಭಿನ್ನ ಆಹಾರಗಳಿಂದ ನಿರ್ಧರಿಸಲಾಗುತ್ತದೆ. ಹಾಗಾದರೆ ಮೆದುಳು, ಆರೋಗ್ಯವಾಗಿರಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಮೈನೋ ಆಮ್ಲಗಳು, ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಸಮೃದ್ಧವಾಗಿರುವ ಆಹಾರಗಳು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಧಾನ್ಯ, ದ್ವಿದಳ ಧಾನ್ಯ, ಎಲೆ ತರಕಾರಿ, ಟೊಮೆಟೊ, ಬ್ರೊಕೊಲಿ, ಕ್ಯಾರೆಟ್, ಹಣ್ಣುಗಳು, ನೆಲ್ಲಿಕಾಯಿ, ಕಿತ್ತಳೆ, ಪೇರಲ, ಸೇಬು, ನೇರಳೆ, ಬಾಳೆಹಣ್ಣು, ಸಲಾಡ್, ಆಲಿವ್ ಎಣ್ಣೆ, ಅಡುಗೆ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ, ಬಾದಾಮಿ, ವಾಲ್ನಟ್ಸ್, ಅಗಸೆ ಬೀಜ, ಎಳ್ಳು, ಕುಂಬಳಕಾಯಿ, ಕಲ್ಲಂಗಡಿ, ಕೊಬ್ಬಿನ ಮೀನು, ಮೊಟ್ಟೆ ಮತ್ತು ಮಸಾಲೆಗಳು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳಾಗಿವೆ.
ವಿಟಮಿನ್ ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಕೆ, ಸತು, ಮೆಗ್ನೀಸಿಯಮ್, ಒಮೆಗಾ- 3 ಕೊಬ್ಬಿನಾಮ್ಲಗಳು, ಕೋಲೀನ್, ಆಲ್ಫಾ- ಲಿನೋಲೆನಿಕ್ ಆಮ್ಲ, ಬೀಟಾ- ಕ್ಯಾರೋಟಿನ್, ಲೈಕೋಪೀನ್, ಆಂಥೋಸಯಾನಿನ್‌ಗಳು, ಪಾಲಿಫಿನಾಲ್‌ಗಳು, ಕರ್ಕ್ಯುಮಿನ್ ಮತ್ತು ಏಕಾಪರ್ಯಾಪ್ತ ಕೊಬ್ಬುಗಳು/ ಎಣ್ಣೆಗಳಂತಹ ಕೆಲವು ಪೋಷಕಾಂಶಗಳು ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪೋಷಕಾಂಶಗಳು ಅವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಮಾತ್ರವಲ್ಲ ಕರುಳಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ಇದರಿಂದಾಗಿ ಮೆದುಳು ಮತ್ತು ಕರುಳಿನ ಜೀವಕೋಶಗಳೆರಡರ ಕ್ಷೀಣತೆಯನ್ನು ತಡೆಯುತ್ತದೆ.
ಇದನ್ನೂ ಓದಿ: ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ?
ಇದೆಲ್ಲದರ ಜೊತೆಗೆ ಮೊಸರು ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹುರಿದ ಜೀರಿಗೆಯೊಂದಿಗೆ ಮೊಸರನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗುತ್ತದೆ. ಇದು ಮಲಬದ್ಧತೆ ಅಥವಾ ಅಜೀರ್ಣದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಹಾರ ತಜ್ಞರು ಕೂಡ ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್ ಆಹಾರಗಳು ಜೀರ್ಣಕ್ರಿಯೆಗೆ ಸಹಾಯ ಮಾಡಲು ಅಗತ್ಯವಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಮೂಲಗಳಾಗಿವೆ. ಮೊಸರು ಮತ್ತು ಮಜ್ಜಿಗೆ, ಸೇಬು ಮತ್ತು ಇನ್ನಿತರ ಹಣ್ಣುಗಳು, ಗಿಡಮೂಲಿಕೆಗಳು, ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ದಾಲ್ಚಿನ್ನಿ ಮತ್ತು ಅರಿಶಿನ, ಡೈರಿ ಉತ್ಪನ್ನಗಳು ಕರುಳಿನ ಆರೋಗ್ಯ ಕಾಪಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ