Cloves Remedy For Cough
ಹವಾಮಾನ ಬದಲಾದಾಗ, ವೈರಲ್ ಸಮಸ್ಯೆಗಳು ಹೆಚ್ಚಾಗುವುದು ಬಹಳ ಸಾಮಾನ್ಯ. ಆದರೆ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಜೊತೆಗೆ ಎಲ್ಲದಕ್ಕೂ ಮಾತ್ರೆ, ಔಷಧಿಗಳ ಮೊರೆ ಹೋಗುವ ಮೊದಲು ಮನೆಯಲ್ಲಿಯೇ ಔಷಧೀಯ ಗುಣಗಳಿರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಆರೋಗ್ಯ (Health) ಹಾಳಾಗದಂತೆ ನೋಡಿಕೊಳ್ಳಬಹುದಾಗಿದೆ. ಹಿಂದಿನ ಕಾಲದಿಂದಲೂ ನಮ್ಮ ಅಜ್ಜಿಯಂದಿರು ಕೆಲವು ಔಷಧಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದರು ಇವುಗಳನ್ನು ಬಳಸಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅಂತಹ ಔಷಧಿಗಳ ಬಳಕೆ ಬಹಳ ಕಡಿಮೆಯಾಗಿದೆ. ಜೊತೆಗೆ ಅವುಗಳ ತಯಾರಿಕೆಯ ಬಗ್ಗೆಯೂ ಹೆಚ್ಚಾಗಿ ಮಾಹಿತಿ ಇರುವುದಿಲ್ಲ. ಆದರೆ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಕಂಡು ಬರುವ ಶೀತ, ಕೆಮ್ಮು, ಕಫ, ಜ್ವರಕ್ಕೆ ಅಜ್ಜಿಯಂದಿರು ಮಾಡುವ ಔಷಧಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನಿಮಗೂ ರಾತ್ರಿ ಸಮಯದಲ್ಲಿ ಕಫ ಕಟ್ಟಿದಂತಾಗಿ ಉಸಿರಾಡಲು ಕಷ್ಟವಾಗುತ್ತಿದ್ದರೆ ಲವಂಗ (Cloves) ಮತ್ತಿತರ ಆಹಾರ ಪದಾರ್ಥಗಳನ್ನು ಇಲ್ಲಿ ಹೇಳಿರುವಂತೆ ಬಳಸಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
- ಸಾಮಾನ್ಯವಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ರೋಗನಿರೋಧಕ ಶಕ್ತಿ ಚೆನ್ನಾಗಿರಬೇಕಾಗುತ್ತದೆ. ಹಾಗಾಗಿ ಇದನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ, ನೀವು ಹಾಲನ್ನು ಅರಿಶಿನ ಅಥವಾ ಕೇಸರಿ ಜೊತೆ ಸೇರಿಸಿಕೊಂಡು ಕುಡಿಯಬೇಕು, ಮಾತ್ರವಲ್ಲ ವಿಟಮಿನ್ ಸಿ ಮತ್ತು ಡಿ ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡಬೇಕು.
- ಹವಾಮಾನ ಬದಲಾಗುವಾಗ, ಶೀತ, ಕೆಮ್ಮು ಮತ್ತು ಗಂಟಲು ನೋವು ಸಾಮಾನ್ಯ. ಅದರಲ್ಲಿಯೂ ರಾತ್ರಿ ಮಲಗಿದ ಮೇಲೆ ಅಥವಾ ಮುಂಜಾನೆ ತೀವ್ರ ಕೆಮ್ಮ ಬರುತ್ತದೆ ಇದಕ್ಕೆ ನಾನಾ ರೀತಿಯ ಔಷಧಗಳ ಸೇವನೆಗಿಂತಲೂ ಲವಂಗ ತಕ್ಷಣದ ಪರಿಹಾರ ನೀಡಲು ಸಹಾಯ ಮಾಡುತ್ತದೆ. ನೀವು ಕೂಡ ರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಕೆಮ್ಮಲು ಪ್ರಾರಂಭಿಸಿದರೆ ಒಂದು ಗುಟುಕು ನೀರು ಕುಡಿಯಿರಿ. ನಂತರ, ಒಂದು ಲವಂಗವನ್ನು ನಿಮ್ಮ ಬಾಯಿಯಲ್ಲಿ ಇಟ್ಟು ಹಲ್ಲುಗಳ ನಡುವೆ ಒತ್ತಿರಿ. ಇದು ಬಹಳ ಬೇಗ ಕೆಮ್ಮನ್ನು ನಿಲ್ಲಿಸುತ್ತದೆ. ಬೆಳಿಗ್ಗೆ ಅದನ್ನು ಉಗುಳಿ. ಆದರೆ ಮಕ್ಕಳಿಗೆ ಈ ರೀತಿ ಲವಂಗವನ್ನು ನೀಡಬೇಡಿ.
- ಲವಂಗವು ಯುಜೆನಾಲ್ ಅನ್ನು ಹೊಂದಿರುತ್ತದೆ, ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳಿಂದ ತುಂಬಿರುತ್ತದೆ. ನೀವು ಲವಂಗವನ್ನು ನಿಮ್ಮ ಹಲ್ಲುಗಳ ನಡುವೆ ಒತ್ತಿದಾಗ, ಅದರ ರಸವು ನಿಮ್ಮ ಗಂಟಲಿನೊಳಗೆ ಹೋಗಿ ಕೆಮ್ಮಿನಿಂದ ಪರಿಹಾರ ನೀಡುತ್ತದೆ. ಹೀಗೆ ಶೀತ ಅಥವಾ ಗಂಟಲು ನೋವಿನಿಂದ ಪರಿಹಾರ ಪಡೆಯಲು ಸಹ ಲವಂಗವನ್ನು ಬಳಸಿಕೊಳ್ಳಬಹುದು. ಪ್ರತಿನಿತ್ಯ ಲವಂಗದ ನೀರು ಅಥವಾ ಚಹಾ ತಯಾರಿಸಿಕೊಂಡು ಕುಡಿಯಬಹುದು. ಮಾತ್ರವಲ್ಲ ಜೇನುತುಪ್ಪದೊಂದಿಗೆ ಲವಂಗದ ಪುಡಿಯನ್ನು ಬೆರೆಸಿ ಸೇವನೆ ಮಾಡಬಹುದು.
- ಶೀತ ಮತ್ತು ಕೆಮ್ಮಿನ ಜೊತೆಗೆ, ಲವಂಗವು ಹಲ್ಲುನೋವಿನಿಂದ ಪರಿಹಾರ ನೀಡುತ್ತದೆ. ಲವಂಗದಲ್ಲಿರುವ ಸಂಯುಕ್ತಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಇದನ್ನು ಅತಿಯಾಗಿ ಸೇವಿಸಬಾರದು.
- ಲವಂಗದ ಜೋತೆಗೆ ಇಂಗು ಕೂಡ ಕೆಮ್ಮು, ಕಫದಿಂದ ಮುಕ್ತಿ ನೀಡುತ್ತದೆ. ಇದರಲ್ಲಿರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಒಣ ಕೆಮ್ಮು, ನೆಗಡಿ, ಶೀತದಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ ಉಸಿರಾಟ ವ್ಯವಸ್ಥೆಗೆ ಸಂಬಂಧಪಟ್ಟಂತೆ ಯಾವುದಾದರೂ ಸೋಂಕುಗಳು ಎದುರಾದರೆ ಚಿಟಿಕೆ ಯಷ್ಟು ಇಂಗು ಸೇವನೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಇದರ ಸೇವನೆಯಿಂದ ಎದೆಯ ಭಾಗದಲ್ಲಿ ಕಟ್ಟಿಕೊಂಡಿರುವ ಕಫ, ಬೇಗ ಕರಗಿ, ಹೋಗುತ್ತದೆ. ಒಳ್ಳೆಯ ಫಲಿತಾಂಶ ಪಡೆಯಲು ಲವಂಗದ ನೀರನ್ನು ದಿನದಲ್ಲಿ ಎರಡು- ಮೂರು ಬಾರಿ ಕುಡಿಯಿರಿ.
- ದಾಲ್ಚಿನ್ನಿ ಮತ್ತು ನಿಂಬೆಯಿಂದಲೂ ಕೆಮ್ಮು ಕಡಿಮೆಯಾಗುತ್ತದೆ. ಒಂದು ಟೀ ಚಮಚ ಜೇನುತುಪ್ಪಕ್ಕೆ ಕೆಲವು ಹನಿ ನಿಂಬೆ ರಸ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಬೇಗ ಮಾಯವಾಗುತ್ತದೆ. ಮಾತ್ರವಲ್ಲ ಗೊರಕೆ ಹೊಡೆಯುವುದರಿಂದಲೂ ಮುಕ್ತಿ ಸಿಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ