ಚಳಿಗಾಲದಲ್ಲಿಯೇ ಪಾರ್ಶ್ವವಾಯು ಪ್ರಕರಣ ಹೆಚ್ಚಾಗುವುದಕ್ಕೆ ಈ ಅಂಶಗಳೇ ಕಾರಣ! ತಡೆಗಟ್ಟಲು ವೈದ್ಯರು ನೀಡಿದ ಈ ಸಲಹೆಗಳನ್ನು ಪಾಲಿಸಿ
ವಾತಾವರಣ ತಂಪಾಗಿದ್ದಾಗ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತದೆ. ಮಾತ್ರವಲ್ಲ, ತಾಪಮಾನ ಕಡಿಮೆ ಇದ್ದಾಗ ರಕ್ತದೊತ್ತಡ ಹೆಚ್ಚಾಗಬಹುದು, ಇದು ರಕ್ತವನ್ನು ದಪ್ಪವಾಗಿಸಬಹುದು ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದು ಸಂಶೋಧನೆಗಳಿಂದ ಬಹಿರಂಗ ಗೊಂಡಿದೆ. ಅದರಲ್ಲಿಯೂ ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಚಳಿಯ ವಾತಾವರಣದಲ್ಲಿ ಪಾರ್ಶ್ವವಾಯ ಹೆಚ್ಚಾಗುವುದಕ್ಕೆ ಕಾರಣವೇನು? ಈ ಅಪಾಯವನ್ನು ಯಾವ ರೀತಿ ತಡೆಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹವಾಮಾನದಲ್ಲಿ ಆಗುವಂತಹ ಬದಲಾವಣೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅದರಲ್ಲಿಯೂ ಈಗ ಮಳೆ ಕಡಿಮೆಯಾಗಿ ಚಳಿ ಆರಂಭವಾಗುತ್ತದೆ. ಈ ಸಮಯದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಈ ಬಗ್ಗೆ ವೈದ್ಯರು ಮತ್ತು ಸಂಶೋಧಕರು ಕೂಡ ಎಚ್ಚರಿಕೆ ನೀಡಿದ್ದು ತಾಪಮಾನ ಕಡಿಮೆಯಾದಂತೆ, ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ. ಹೌದು, ದಿ ಲ್ಯಾನ್ಸೆಟ್ ಮತ್ತು ಸ್ಟ್ರೋಕ್‌ನಲ್ಲಿ ಪ್ರಕಟವಾದ ಅಧ್ಯಯನಗಳು ಸೇರಿದಂತೆ ಹಲವಾರು ಸಂಶೋಧನೆಗಳು ಚಳಿಗಾಲದಲ್ಲಿ, ಅದರಲ್ಲಿಯೂ ಸರಾಸರಿ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ, ಇಸ್ಕೆಮಿಕ್ ಸ್ಟ್ರೋಕ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹಾಗಾಗಿ ಈ ವಿಷಯದ ಕುರಿತ ಮತ್ತಷ್ಟು ಮಾಹಿತಿಯನ್ನು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರವಿಜ್ಞಾನದ ನಿರ್ದೇಶಕ ಡಾ. ಮನೋಜ್ ಖನಾಲ್ (Dr. Manoj Khanal) ಅವರು ಹಂಚಿಕೊಂಡಿದ್ದು ತಾಪಮಾನ ಹೆಚ್ಚಾಗಿರುವುದಕ್ಕೆ ಹೊಲಿಕೆ ಮಾಡಿದರೆ ತಾಪಮಾನ ಕಡಿಮೆ ಆದಾಗ ಅಂದರೆ ಚಳಿಗಾಲದಲ್ಲಿ ಪಾರ್ಶ್ವವಾಯು ಪ್ರಕರಣಗಳು ಹೆಚ್ಚಳವಾಗುತ್ತದೆ ಎಂದಿದ್ದಾರೆ. ಹಾಗಾದರೆ ಚಳಿಯ ವಾತಾವರಣದಲ್ಲಿ ಪಾರ್ಶ್ವವಾಯ ಹೆಚ್ಚಾಗುವುದಕ್ಕೆ ಕಾರಣವೇನು, ಈ ಅಪಾಯವನ್ನು ಯಾವ ರೀತಿ ತಡೆಯಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಶೀತ ಹವಾಮಾನ ಅಥವಾ ಚಳಿ ನಮ್ಮ ಹೃದಯರಕ್ತನಾಳದ ಮತ್ತು ರಕ್ತಪರಿಚಲನಾ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮ ರಕ್ತದೊತ್ತಡ ಹೆಚ್ಚಾಗುವುದು, ರಕ್ತ ದಪ್ಪವಾಗುವುದು ಮತ್ತು ಹೆಪ್ಪುಗಟ್ಟುವಿಕೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಜನ್ಮತಾಳುತ್ತದೆ. ಮಾತ್ರವಲ್ಲ ಋತುಮಾನದ ಬದಲಾವಣೆಗಳು ಮೆದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಈ ಚಳಿಗಾಲದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಹಚ್ಚಿನ ಪ್ರಾಶಸ್ಥ ನೀಡಬೇಕಾಗುತ್ತದೆ. ಜೊತೆಗೆ ಶೀತ ತಾಪಮಾನವು ಪಾರ್ಶ್ವವಾಯು ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ? ಅದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ.
ತಂಪು ವಾತಾವರಣ ಪಾರ್ಶ್ವವಾಯು ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?
ರಕ್ತನಾಳಗಳು ಸಂಕುಚಿತಗೊಂಡಂತೆ ರಕ್ತದೊತ್ತಡ ಹೆಚ್ಚಾಗುತ್ತದೆ
ಡಾ. ಮನೋಜ್ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಚಳಿಯಾದಾಗ, ದೇಹ ಶಾಖ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ ಆಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಅಧಿಕ ರಕ್ತದೊತ್ತಡ ಪಾರ್ಶ್ವವಾಯುವಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.
ಇದನ್ನೂ ಓದಿ: ಎಐ ಮೂಲಕ ಪಾರ್ಶ್ವವಾಯು ಸಮಸ್ಯೆಗೆ ತ್ವರಿತ ಚಿಕಿತ್ಸೆ
ದಪ್ಪ ರಕ್ತ ಮತ್ತು ಹೆಪ್ಪುಗಟ್ಟುವಿಕೆಯ ಅಪಾಯ
ಶೀತ ವಾತಾವರಣ ರಕ್ತವನ್ನು ಸ್ವಲ್ಪ ದಪ್ಪವಾಗಿಸುತ್ತದೆ, ಇದು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಡಾ. ಮನೋಜ್ ಹೇಳುತ್ತಾರೆ. ಈ ರೀತಿ ರಕ್ತ ಹೆಪ್ಪುಗಟ್ಟಿದಾಗ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗಬಹುದು, ಮಾತ್ರವಲ್ಲ ಇದು ಇಸ್ಕೆಮಿಕ್ ಸ್ಟ್ರೋಕ್‌ಗೆ ಕಾರಣವಾಗಬಹುದು. ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (JAHA) ನಲ್ಲಿ 2023 ರಲ್ಲಿ ನಡೆದ ಅಧ್ಯಯನವು ಕೂಡ ಇದನ್ನೇ ಹೇಳುತ್ತದೆ.
ದೈಹಿಕ ಚಟುವಟಿಕೆ ಕಡಿಮೆಗಾವುದು ಮತ್ತು ತೂಕ ಹೆಚ್ಚಳ
ಚಳಿಗಾಲದಲ್ಲಿ, ಜನರು ವ್ಯಾಯಾಮ, ವಾಕಿಂಗ್ ಅಥವಾ ಇನ್ನಿತರ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತಾರೆ ಮತ್ತು ಕ್ಯಾಲೋರಿ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುತ್ತಾರೆ. ಈ ರೀತಿ ದೈಹಿಕ ಚಟುವಟಿಕೆ ಕಡಿಮೆಯಾದಾಗ ತೂಕ ಹೆಚ್ಚಾಗುತ್ತದೆ, ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕೂಡ ಹೆಚ್ಚಾಗುತ್ತದೆ. ಇವೆಲ್ಲವೂ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ಖಾನಲ್ ಹೇಳುತ್ತಾರೆ. ಅದಕ್ಕಾಗಿ ದಿನಕ್ಕೆ 30 ನಿಮಿಷಗಳ ಕಾಲ ಚುರುಕಾದ ನಡಿಗೆ ಅಥವಾ ಇನ್ನಿತರ ಚಟುವಟಿಕೆ ಮಾಡುವದರಿಂದ ಪಾರ್ಶ್ವವಾಯು ಅಪಾಯ 25% ವರೆಗೆ ಕಡಿಮೆಯಾಗುತ್ತದೆ ಎಂದು ಅಮೇರಿಕನ್ ಸ್ಟ್ರೋಕ್ ಅಸೋಸಿಯೇಷನ್ ತಿಳಿಸಿದೆ.
ನಿರ್ಜಲೀಕರಣ ಸಮಸ್ಯೆ
ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಕಡಿಮೆಯಾಗುತ್ತದೆ ಹೀಗಾಗಿ ಜನರು ನೀರನ್ನು ಕೂಡ ಕಡಿಮೆ ಕುಡಿಯುತ್ತಾರೆ ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದರಿಂದ ರಕ್ತ ಕೂಡ ಹೆಪ್ಪುಗಟ್ಟುತ್ತದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ ಅಧ್ಯಯನದಲ್ಲಿ ತಿಳಿಸಿರುವ ಮಾಹಿತಿ ಅನುಸಾರ ನಿರ್ಜಲೀಕರಣವು ರಕ್ತದ ಸಾಂದ್ರತೆ ಮತ್ತು ಪ್ಲೇಟ್‌ಲೆಟ್ ಒಟ್ಟುಗೂಡಿಸುವುದನ್ನು ಹೆಚ್ಚಿಸುತ್ತದೆ, ಇವೆರಡೂ ಕೂಡ ಪಾರ್ಶ್ವವಾಯು ಉಂಟಾಗುವುದಕ್ಕೆ ಪ್ರಮುಖ ಕಾರಣಗಳಾಗಿವೆ.
ಇದನ್ನೂ ಓದಿ: ವಿಚ್ಛೇದಿತ ಪೋಷಕರ ಮಕ್ಕಳಿಗೆ ಪಾರ್ಶ್ವವಾಯು ಅಪಾಯ ಹೆಚ್ಚು
ಶೀತ ವಾತಾವರಣದಲ್ಲಿ ಅತಿಯಾದ ಪರಿಶ್ರಮ
ಚಳಿಗಾಲದಲ್ಲಿ ಏನು ಮಾಡದೆಯೂ ಇರಬಾರದು ಹಾಗಂತ ಹೆಚ್ಚು ಶ್ರಮದಾಯಕ ಕೆಲಸಗಳನ್ನು ಕೂಡ ಮಾಡಬಾರದು. ಏಕೆಂದರೆ ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಈ ರೀತಿ ಶೀತ ವಾತಾವರಣದಲ್ಲಿ ಹೆಚ್ಚಿನ ದೈಹಿಕ ಪರಿಶ್ರಮವು ಹೃದಯರಕ್ತನಾಳದ ಒತ್ತಡಕ್ಕೆ ಕಾರಣವಾಗಬಹುದು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ಖಾನಲ್ ಎಚ್ಚರಿಸಿದ್ದಾರೆ.
ಕಾಲೋಚಿತ ಸೋಂಕುಗಳು ಮತ್ತು ಉರಿಯೂತ
ಚಳಿಗಾಲ ಬರುತ್ತಾ ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ತರುತ್ತದೆ. ಈ ರೀತಿ ಸೋಂಕಿನಿಂದ ಉಂಟಾಗುವ ಉರಿಯೂತವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ಇನ್ನಷ್ಟು ಹದಗೆಡಿಸುತ್ತದೆ, ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ನ್ಯೂರಾಲಜಿ ಜರ್ನಲ್ (2022) ನಲ್ಲಿ ಪ್ರಕಟವಾದ ಸಂಶೋಧನೆಯು ಉಸಿರಾಟದ ಸೋಂಕುಗಳು ಸೋಂಕಿನ ಮೊದಲ ಮೂರು ದಿನಗಳಲ್ಲಿ ಪಾರ್ಶ್ವವಾಯು ಅಪಾಯದಲ್ಲಿ ಮೂರು ಪಟ್ಟು ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂಬುದನ್ನು ತಿಳಿಸಿದೆ.
ಚಳಿಗಾಲದಲ್ಲಿ ಪಾರ್ಶ್ವವಾಯು ಅಪಾಯವನ್ನು ತಡೆಯಲು ಏನು ಮಾಡಬೇಕು?
ಬೆಚ್ಚಗಿರಿ: ರಕ್ತನಾಳಗಳ ಸಂಕೋಚನವನ್ನು ತಡೆಗಟ್ಟಲು ಆದಷ್ಟು ಬೆಚ್ಚಗಿರಿ. ದಪ್ಪ ದಪ್ಪ ಬಟ್ಟೆಗಳನ್ನು ಧರಿಸಿ, ತಾಪಮಾನವನ್ನು ಸ್ಥಿರವಾಗಿರಿಸಿಕೊಳ್ಳಿ.
ಸಕ್ರಿಯರಾಗಿರಿ: ಒಳಾಂಗಣ ವ್ಯಾಯಾಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ; ಅತಿಯಾದ ಒತ್ತಡವನ್ನು ತಪ್ಪಿಸಿ.
ಹೈಡ್ರೇಟೆಡ್ ಆಗಿರಿ: ನಿಮಗೆ ಬಾಯಾರಿಕೆಯಾಗದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ.
ಅನಾರೋಗ್ಯಗಳನ್ನು ನಿರ್ವಹಿಸಿ: ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಿ.
ಮದ್ಯಪಾನ, ಧೂಮಪಾನ ಮಾಡುವುದನ್ನು ತಪ್ಪಿಸಿ: ಮದ್ಯಪಾನವು ರಕ್ತನಾಳಗಳನ್ನು ತಾತ್ಕಾಲಿಕವಾಗಿ ಹಿಗ್ಗಿಸುತ್ತದೆ ಹೃದಯ ಬಡಿತದ ಏರುಪೇರಿಗೆ ಕಾರಣವಾಗುತ್ತದೆ; ಧೂಮಪಾನವು ರಕ್ತ ನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ಜ್ವರ ಲಸಿಕೆ ಪಡೆಯಿರಿ: ವ್ಯಾಕ್ಸಿನೇಷನ್ ಉಸಿರಾಟದ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತನಾಳಗಳ ಉರಿಯೂತವನ್ನು ತಡೆಗಟ್ಟುವ ಮೂಲಕ ಪರೋಕ್ಷವಾಗಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಶೀತ ಮತ್ತು ಬಿಸಿಲಿನ ತೀವ್ರತೆ ಎರಡೂ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು, ಆದರೆ ಶೀತ ವಾತಾವರಣದ ಪರಿಣಾಮವು ಹೆಚ್ಚು ಕಾಲ ಇರುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಕಡಿಮೆ ತಾಪಮಾನಇಸ್ಕೆಮಿಕ್ ಪಾರ್ಶ್ವವಾಯುವಿಗೆ ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ರಕ್ತಸ್ರಾವದ ಘಟನೆಗಳು ಮತ್ತು ನಾಳೀಯ ಉರಿಯೂತಕ್ಕೂ ಸಂಬಂಧಿಸಿದೆ. ಹಾಗಾಗಿ ನೀವು ದೇಹದ ಸಮತೋಲನ ಕಳೆದುಕೊಳ್ಳುವುದು, ಮುಖದ ದೌರ್ಬಲ್ಯ, ತೋಳು ಅಥವಾ ಕಾಲುಗಳ ಮರಗಟ್ಟುವಿಕೆ, ಅಥವಾ ಶೀತ ವಾತಾವರಣದಲ್ಲಿ ಮಾತು ಅಸ್ಪಷ್ಟವಾಗುತ್ತಿದ್ದರೆ, ತಕ್ಷಣದ ಆರೈಕೆಗಾಗಿ ಹತ್ತಿರದ ಆಸ್ಪತ್ರೆಗೆ ಹೋಗಿ, ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




