
ಬ್ರೊಕೊಲಿ (Broccoli) ತುಂಬಾ ಪೌಷ್ಟಿಕ ಆಹಾರ ಎಂಬುದು ತಿಳಿದ ವಿಚಾರ. ಅದಕ್ಕಾಗಿಯೇ ಇದನ್ನು ದಿನನಿತ್ಯದ ಆಹಾರದಲ್ಲಿ ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಇದು ಎಲ್ಲರಿಗೂ ಒಳ್ಳೆಯದಲ್ಲ ಎಂದು ಆರೋಗ್ಯ (Health) ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ವೈದ್ಯರ ಸಲಹೆ ಪಡೆಯದೆಯೇ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ. ಬ್ರೊಕೊಲಿ ಹೇರಳವಾಗಿರುವ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆಗಳಿರುವ ಮಹಿಳೆಯರು ಅಪ್ಪಿತಪ್ಪಿಯೂ ಇದನ್ನು ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಥೈರಾಯ್ಡ್ ಸಮಸ್ಯೆ ಇರುವ ಮಹಿಳೆಯರು (ಹೈಪೋಥೈರಾಯ್ಡಿಸಮ್) ಬ್ರೊಕೊಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು. ಇದರಲ್ಲಿ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಗಾಯ್ಟ್ರೋಜೆನ್‌ಗಳಿವೆ. ಆದ್ದರಿಂದ, ಥೈರಾಯ್ಡ್ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು.
ಜಠರಗರುಳಿನ ಅಸ್ವಸ್ಥತೆ (ಜೀರ್ಣಕ್ರಿಯೆ) ಇರುವ ಮಹಿಳೆಯರು ಸಹ ಬ್ರೊಕೊಲಿಯನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು. ಏಕೆಂದರೆ ಈ ಬ್ರೊಕೊಲಿಯಲ್ಲಿ ಫೈಬರ್ ಅಧಿಕವಾಗಿರುತ್ತದೆ. ಆದ್ದರಿಂದ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅನಿಲ, ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತದೆ.
ಮೂತ್ರಪಿಂಡದಲ್ಲಿ ಕಲ್ಲುಗಳಿರುವ ಮಹಿಳೆಯರು ಬ್ರೊಕೊಲಿಯನ್ನು ಸೇವನೆ ಮಾಡಬಾರದು. ಇದರಲ್ಲಿ ಆಕ್ಸಲೇಟ್‌ಗಳು ಇರುತ್ತವೆ, ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ. ಅಲ್ಲದೆ, ಕೆಲವು ಮಹಿಳೆಯರಿಗೆ ಬ್ರೊಕೊಲಿ ಮತ್ತು ಹೂಕೋಸು ಸೇರಿದಂತೆ ಆ ಕುಟುಂಬಕ್ಕೆ ಸೇರಿದ ತರಕಾರಿಗಳಿಂದ ಅಲರ್ಜಿ ಇರಬಹುದು, ಇದು ತುರಿಕೆ, ಊತ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಂಡು, ಕ್ಯಾನ್ಸರ್ ತಡೆಯಬೇಕೆಂದರೆ ಈ ಒಂದು ತರಕಾರಿಯನ್ನು ಸೇವನೆ ಮಾಡಿ
ಅದೇ ರೀತಿ, ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬ್ರೊಕೊಲಿಯನ್ನು ತಿನ್ನಬಾರದು. ಇದನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಗರ್ಭಿಣಿಯರಿಗೆ ಪ್ರಯೋಜನಕಾರಿ. ಇಲ್ಲವಾದಲ್ಲಿ ಇದನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ