ಇತ್ತೀಚಿನ ವರ್ಷಗಳಲ್ಲಿ, ದಂಪತಿ ಹೆಚ್ಚು ವಯಸ್ಸಾದ ನಂತರ ಮಗುವನ್ನು ಪಡೆಯಲು ಯೋಜಿಸುತ್ತಿದ್ದು ಈ ಪ್ರವೃತ್ತಿ ಮುಂದುವರಿಯುತ್ತಿದ್ದಂತೆ, ಒಂದು ಪ್ರಮುಖ ಪ್ರಶ್ನೆ ಉದ್ಭವಿಸಿದೆ. ಒಂದು ವಯಸ್ಸು ಮೀರಿದ ನಂತರ ಪೋಷಕರಾದರೆ ನಿಮ್ಮ ಮಗುವಿಗೆ ಕ್ಯಾನ್ಸರ್ ಬರುವ ಅಪಾಯವಿದೆಯೇ? ಈ ವಿಷಯ ಬಹಳ ಚರ್ಚೆಗೆ ಕಾರಣವಾಗಿದ್ದು ಕೆಲವು ಅಧ್ಯಯನಗಳ ಪ್ರಕಾರ, ಪೋಷಕರ ವಯಸ್ಸು ಮತ್ತು ಹುಟ್ಟುವ ಮಕ್ಕಳಲ್ಲಿ ಕ್ಯಾನ್ಸರ್ ಅಪಾಯ ಎರಡಕ್ಕೂ ಸಂಭಾವ್ಯ ಸಂಬಂಧವಿದೆ ಎಂಬುದು ತಿಳಿದು ಬಂದಿದೆ.
ಬಾಲ್ಯದ ಕ್ಯಾನ್ಸರ್ (Childhood cancer) ಎಂದರೆ ಹುಟ್ಟಿನಿಂದ ಹದಿಹರೆಯದವರೆಗಿನ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್ ಆಗಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಕ್ಯಾನ್ಸರ್ ಕಂಡು ಬರುವುದು ಕಡಿಮೆಯಾಗಿದ್ದರೂ ಈ ಬಗ್ಗೆ ತಿಳಿಯುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಇದು ಅನೇಕ ದೇಶಗಳಲ್ಲಿ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ. ಆದರೆ ಬಾಲ್ಯದ ಕ್ಯಾನ್ಸರ್ಗಳು ವಯಸ್ಕರಲ್ಲಿ ಸಂಭವಿಸುವ ಕ್ಯಾನ್ಸರ್ಗಳಿಗಿಂತ ಭಿನ್ನವಾಗಿರುತ್ತದೆ.
ಗರ್ಭಧಾರಣೆಯ ಸಮಯದಲ್ಲಿ ಪೋಷಕರ ವಯಸ್ಸು ಹೆಚ್ಚಾಗಿದ್ದರೆ (ಅಂದರೆ 40 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು) ಮಕ್ಕಳಲ್ಲಿ ಕೆಲವು ರೀತಿಯ ಕ್ಯಾನ್ಸರ್ ಅಪಾಯದೊಂದಿಗೆ ಸಂಬಂಧ ಹೊಂದಿರಬಹುದು ಎಂದು ಸಂಶೋಧನೆ ಹೇಳಿದೆ. ವಯಸ್ಸಾದ ಪೋಷಕರಿಗೆ ಜನಿಸಿದ ಮಕ್ಕಳಲ್ಲಿ ಬಾಲ್ಯದ ಲ್ಯುಕೇಮಿಯಾ, ಮೆದುಳಿನ ಗೆಡ್ಡೆಗಳು ಮತ್ತು ರೆಟಿನೊಬ್ಲಾಸ್ಟೋಮಾದ ಹೆಚ್ಚಿನ ಅಪಾಯವಿರಬಹುದು. ಒಟ್ಟಾರೆಯಾಗಿ ಹುಟ್ಟುವ ಮಕ್ಕಳಲ್ಲಿ ಕ್ಯಾನ್ಸರ್ ಅಪಾಯವು ಕಡಿಮೆ ಇದ್ದರೂ, ಈ ಬಗ್ಗೆ ಯುವಜನತೆ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ಡಾ. ಸುನೀತಾ ಲೋಕ್ವಾನಿ ಅವರ ಪ್ರಕಾರ, ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ, ಏಕೆಂದರೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಪರಿಣಾಮಕಾರಿಯಾದ ಔಷಧಗಳನ್ನು ನೀಡಬಹುದು. ಕ್ಯಾನ್ಸರ್ ರೋಗಲಕ್ಷಣಗಳು ವ್ಯಕ್ತಿ ಮತ್ತು ಸ್ಥಳಗಳಿಗೆ ಅನುಗುಣವಾಗಿ ಬದಲಾಗಬಹುದು, ಆದರೆ ಗಮನಿಸಬೇಕಾದ ಕೆಲವು ಸಾಮಾನ್ಯ ಚಿಹ್ನೆಗಳು ಇಲ್ಲಿವೆ.
ನಿರಂತರ ನೋವು: ತಲೆನೋವು ಅಥವಾ ಬೆನ್ನು ಹೀಗೆ ದೇಹದಲ್ಲಿ ನಿರಂತರ ನೋವು ಕಂಡು ಬರುತ್ತದೆ.
ಊತ: ಹೊಟ್ಟೆ, ಕುತ್ತಿಗೆ ಅಥವಾ ಇತರ ಪ್ರದೇಶಗಳಲ್ಲಿ ಗಮನಾರ್ಹವಾಗಿ ಊತ ಕಂಡುಬರುತ್ತದೆ.
ಆಗಾಗ ಸೋಂಕುಗಳು ಕಂಡು ಬರುವುದು: ಔಷಧ ನೀಡಲು ಕಷ್ಟಕರವಾದಂತಹ, ತೀವ್ರವಾದ ಸೋಂಕು ಕಂಡು ಬರುತ್ತದೆ.
ಜಜ್ಜಿದಗಾಯ ಅಥವಾ ರಕ್ತಸ್ರಾವ: ದೇಹದಲ್ಲಿ ಜಜ್ಜುಗಾಯ, ರಕ್ತಸ್ರಾವ, ಅಥವಾ ಚರ್ಮದ ಮೇಲೆ ಸಣ್ಣದಾದ ಕೆಂಪು ಅಥವಾ ನೇರಳೆ ಬಣ್ಣದ ಕಲೆಗಳು ಕಂಡುಬರುವುದು.
ಅತಿಯಾಗಿ ಜ್ವರ ಬರುವುದು: ಸಾಮಾನ್ಯ ಔಷಧಗಳಿಗೆ ಸ್ಪಂದಿಸದೇ ನಿರಂತರ ಜ್ವರ ಕಂಡು ಬರುವುದು.
ಆಯಾಸ: ದೀರ್ಘಕಾಲದ ವರೆಗೆ ದಣಿವು ಅಥವಾ ದೌರ್ಬಲ್ಯ, ಕಂಡುಬರುತ್ತದೆ. ವಿಶೇಷವಾಗಿ ಇದು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಔಷಧಿಗಳ ಕುರಿತು ಸಲಹೆ ನೀಡುವ ನಿಮ್ಮ ಗೆಳೆಯನಿಗೆ ಫಾರ್ಮಾಸಿಸ್ಟ್ ದಿನದ ಶುಭಾಶಯ ತಿಳಿಸಿ
ವಯಸ್ಸಾದ ಮೇಲೆ ಮಕ್ಕಳು ಬೇಕು ಎಂದು ಸಿದ್ಧತೆ ಮಾಡಿಕೊಳ್ಳುವ ಪೋಷಕರು ತಮ್ಮ ಮಗುವಿನ ಕ್ಯಾನ್ಸರ್ ಅಪಾಯದ ಬಗ್ಗೆ ಕಾಳಜಿ ವಹಿಸುವುದರಿಂದ, ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡಬಹುದು. ಗರ್ಭಧಾರಣೆಯ ಮೊದಲು ಮತ್ತು ನಂತರದ ಸಮಯದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದಲ್ಲದೆ ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತ ವ್ಯಾಯಾಮದಲ್ಲಿ ತೊಡಗುವುದು ಅವಶ್ಯವಾಗಿದೆ. ಅದಲ್ಲದೆ ನಿಯಮಿತ ಪ್ರಸವಪೂರ್ವ ಆರೈಕೆ ಸಹ ಒಳ್ಳೆಯದು, ಏಕೆಂದರೆ ಅವು ಅಪಾಯದ ಅಂಶಗಳನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆ.
ಮಕ್ಕಳಲ್ಲಿ ಕ್ಯಾನ್ಸರ್ನ ಒಟ್ಟಾರೆ ಅಪಾಯವು ಕಡಿಮೆ ಇದ್ದು ಈ ಅಪಾಯವು ತುಲನಾತ್ಮಕವಾಗಿ ಕಡಿಮೆ ಇರುತ್ತದೆ ಎಂಬುದನ್ನು ನೆನಪಿನಲ್ಲಿಡುವುದು ಅತ್ಯಗತ್ಯ. ಆದರೆ ಇದು ಹೆಚ್ಚಾಗದಂತೆ ನೋಡಿಕೊಳ್ಳಲು ಸಾಧ್ಯವಾದಷ್ಟು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಮಗುವಿಗೆ ಆರೋಗ್ಯಕರ ಜೀವನ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ