ಅಲಾರಾಂ ಇಟ್ಟು ಮಲಗುವ ಅಭ್ಯಾಸ ನಿಮಗೂ ಇದ್ಯಾ? ಇದ್ರಿಂದ ಎಷ್ಟೆಲ್ಲಾ ಅಪಾಯ ಇದೆ ನೋಡಿ

ಬೇಗ ಎದ್ದೇಳಬೇಕು ಎಂದು ಅಲಾರಾಂ ಇಟ್ಟುಕೊಳ್ಳುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದ. ಆದರೆ ಈ ರೀತಿಯ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರಬಹುದು ಎಂದರೆ ನೀವು ನಂಬುತ್ತೀರಾ? ಹೌದು. ಗಾಢ ನಿದ್ದೆಯಲ್ಲಿದ್ದಾಗ ಅಲಾರಾಂ ಶಬ್ದಕ್ಕೆ ಎಚ್ಚರಗೊಳ್ಳುವುದು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾದರೆ ಪ್ರತಿನಿತ್ಯ ಅಲಾರಾಂ ಶಬ್ದಕ್ಕೆ ಏಳುವುದರಿಂದ ಏನಾಗುತ್ತದೆ ತಿಳಿದುಕೊಳ್ಳಿ.

ಅಲಾರಾಂ ಇಟ್ಟು ಮಲಗುವ ಅಭ್ಯಾಸ ನಿಮಗೂ ಇದ್ಯಾ? ಇದ್ರಿಂದ ಎಷ್ಟೆಲ್ಲಾ ಅಪಾಯ ಇದೆ ನೋಡಿ
ಬೆಳಗ್ಗಿನ ಅಲಾರಾಂ
Image Credit source: Getty Images

Updated on: May 21, 2025 | 4:15 PM

ಬೆಳಗ್ಗೆ (Morning) ಬೇಗ ನಿದ್ದೆಯಿಂದ ಏಳಬೇಕು, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳಬೇಕು ಎಂದು ಮೊಬೈಲ್‌ನಲ್ಲಿಯೋ ಅಥವಾ ಚಿಕ್ಕ ಪುಟ್ಟ ಗಡಿಯಾರಗಳಲ್ಲಿಯೋ ಅಲಾರಾಂ (Alarm) ಇಟ್ಟುಕೊಂಡು ಮಲಗುವುದು ಇಂದು ಬಹುತೇಕರ ಅಭ್ಯಾಸ. ಆದರೆ ಹೀಗೆ ಪ್ರತಿನಿತ್ಯ ಅಲಾರಾಂ ಇಟ್ಟುಕೊಂಡು ಮಲಗುವುದು ನಿಮ್ಮ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರಬಹುದು ಎಂದರೆ ನೀವದನ್ನ ನಂಬಲೇ ಬೇಕು. ಹೌದು. ಗಾಢ ನಿದ್ದಯಲ್ಲಿರುವ ವ್ಯಕ್ತಿಯನ್ನ ಅಲಾರಾಂ ಶಬ್ದ ಏಕಾಏಕಿ ಎಚ್ಚರಗೊಳಿಸುವುದರಿಂದ ಮಾನವನ ದೇಹ ವ್ಯತಿರಿಕ್ತವಾಗಿ ವರ್ತಿಸಲಿದೆ. ಜೊತೆಗೆ ಈ ವೇಳೆ ತುರ್ತಾಗಿ ಮೆದುಳು ತನ್ನ ಕಾರ್ಯ ಆರಂಭಿಸುವುದರಿಂದ ರಕ್ತದ ಒತ್ತಡ (high blood pressure) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಅಲಾರಾಂ ತರಬಹುದು ಅಪಾಯ!

ವರ್ಜೀನಿಯಾ ಯೂನಿವರ್ಸಿಟಿಯ ಅಧ್ಯನದ ವರದಿ ಪ್ರಕಾರ ಪ್ರತಿನಿತ್ಯ ಅಲಾರಾಂ ಇಟ್ಟುಕೊಂಡು ಬೆಳಗ್ಗೆ ಎದ್ದೇಳುವ ಶೇಕಡಾ 74ರಷ್ಟು ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದಾರಂತೆ. ಆದೆ ಅಲಾರಾಂ ಇಲ್ಲದೆ ಸಹಜವಾಗಿಯೇ ನಿದ್ದೆಯಿಂದ ಎದ್ದೇಳುವವರಲ್ಲಿ ರಕ್ತದ ಒತ್ತಡದಂತಹ ಸಮಸ್ಯೆಗಳು ಕಡಿಮೆ ಎಂದು ಇದೇ ಯೂನಿವರ್ಸಿಟಿಯ ಅಧ್ಯಯನ ವರದಿ ಹೇಳಿದೆ. ಅಲಾರಾಂನ ಶಬ್ದಕ್ಕೆ ಏಕಾಏಕಿ ಎಚ್ಚರಗೊಳ್ಳುವಾಗ ದೇಹ ಅಡೆರೆನೈಲ್‌ನಂತಹ ಸ್ಟ್ರೆಸ್ ಹಾರ್ಮೋನ್‌ಗಳನ್ನ ರಿಲೀಸ್ ಮಾಡಲಿದ್ದು, ಇವು ಹೃದಯದ ಬಡಿತ ಹೆಚ್ಚಳಕ್ಕೆ ಕಾರಣವಾಗಲಿದೆ. ತಾತ್ಕಾಲಿಕವಾಗಿ ರಕ್ತದ ಒತ್ತಡ ಹೆಚ್ಚಿಸಲಿದೆ. ಇದನ್ನು ಸಾಮಾನ್ಯವಾಗಿ ಮಾರ್ನಿಂಗ್ ಹೈಪರ್‌ಟೆನ್ಶನ್ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ತಾತ್ಕಾಲಿಕ ರಕ್ತದ ಒತ್ತಡ ಅಷ್ಟೊಂದು ಅಪಾಯಕಾರಿ ಅಲ್ಲ ಎಂದು ಪರಿಗಣಿಸಲ್ಪಟ್ಟರೂ ಪ್ರತಿದಿನ ಇದು ಪುನರಾವರ್ತನೆಯಾದರೆ ಅಪಾಯದ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಅಧ್ಯಯನದ ಪ್ರಕಾರ ಬೆಳಗ್ಗಿನ ವೇಳೆಯ ಅಧಿಕ ರಕ್ತದ ಒತ್ತಡ ಹೃದಯಾಘಾತ, ಸ್ಟ್ರೋಕ್ ಗೆ ಕಾರಣವಾಗಬಹುದು. ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೂ ಗಂಭೀರ ಆರೋಗ್ಯ ಸಮಸ್ಯೆ ತರಬಲ್ಲದು.

ಇದನ್ನೂ ಓದಿ
ಕಣ್ಣಿಗೂ ಕ್ಯಾನ್ಸರ್ ಬರುತ್ತಾ? ಹೇಗಿರುತ್ತೆ ಇದರ ಲಕ್ಷಣ
ರಾತ್ರಿ ನೆನಸಿಟ್ಟ ಚಿಯಾ ಬೀಜಗಳ ನೀರು ಕುಡಿದರೆ ಏನಾಗುತ್ತೆ ನೋಡಿ
ಬೋಳುತಲೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದು ಇದೆ ಕಾರಣಕ್ಕೆ
ಇದ್ದಕ್ಕಿದ್ದಂತೆ ಬಿಪಿ ಹೆಚ್ಚಾಗಲು ಈ ತಪ್ಪುಗಳೇ ಕಾರಣ

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ: ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ತಜ್ಞರ ಕರೆ

ಅಪಾಯ ತಪ್ಪಿಸಲು ಏನು ಮಾಡಬಹುದು?

ಪ್ರತಿನಿತ್ಯ ಸಾಧ್ಯವಾದಷ್ಟು ಬೇಗ ಮಲಗಿ ಬೇಗ ನಿದ್ದೆಯಿಂದ ಎದ್ದೇಳಲು ಪ್ರಯತ್ನಿಸಿ. ಆಗ ಅಲಾರಾಂನ ಅವಶ್ಯಕತೆಯೇ ಬರುವುದಿಲ್ಲ. 7- 8 ಗಂಟೆ ನಿದ್ದೆ ದಿನಕ್ಕೆ ಅಗತ್ಯವಿದ್ದು, ಇದು ನಿಮ್ಮ ದೇಹದಲ್ಲಿನ ರಕ್ತದ ಒತ್ತಡದ ಮೇಲೂ ಪರಿಣಾಮ ಬೀರಲಿದೆ. ಇನ್ನು ಅಲಾರಾಂ ಇಟ್ಟುಕೊಂಡೇ ಮಲಗಬೇಕಾದ ಅನಿವಾರ್ಯತೆ ಇದ್ದಲ್ಲಿ ಸಾಧ್ಯವಾದಷ್ಟು ಮೃದುವಾಗಿರುವ ಶಬ್ದವನ್ನ ಆಯ್ದುಕೊಳ್ಳಿ. ಜೊತೆಗೆ ಉತ್ತಮವಾದ ಬೆಳಕು ಬರುವ ಸ್ಥಳದಲ್ಲಿ ಮಲಗುವುದರಿಂದ ಬೆಳಗಿನ ಸೂರ್ಯನ ಕಿರಣಗಳು ನಿಮ್ಮನ್ನ ಎಚ್ಚರಗೊಳಿಸಲಿವೆ. ಹೀಗಾಗಿ ಆಗ ಅಲಾರಾಂನ ಅವಶ್ಯಕತೆಯೇ ಬರುವುದಿಲ್ಲ. ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯದಲ್ಲಿ ಎದ್ದೇಳುವುದೂ ಉತ್ತಮ ನಿದ್ರೆಗೆ ನಿಮಗೆ ಸಹಕಾರಿಯಾಗಲಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ