AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ: ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ತಜ್ಞರ ಕರೆ

ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇದನ್ನು ತಡೆಗಟ್ಟುವುದು ನಮ್ಮ ಕೈಯಲ್ಲಿಯೇ ಇದೆ. ಏಕಂದರೆ ಇವು ಹೆಚ್ಚಾಗುವುದಕ್ಕೆ ಮುಖ್ಯ ಕಾರಣ ನಾವು ರೂಢಿಸಿಕೊಂಡು ಬಂದಿರುವಂತಹ ಜಡ ಅಭ್ಯಾಸಗಳು, ಅನಾರೋಗ್ಯಕರ ಆಹಾರ ಪದ್ಧತಿ, ಹೆಚ್ಚುತ್ತಿರುವ ಬೊಜ್ಜು ಮತ್ತು ಅಧಿಕ ಮದ್ಯ ಸೇವನೆ ಸೇರಿದಂತೆ ನಾನಾ ರೀತಿಯ ಕ್ರಮಗಳಿಂದ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ. ಹಾಗಾದರೆ ಇದನ್ನು ತಡೆಗಟ್ಟಲು ಏನು ಮಾಡಬೇಕು? ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಅಧಿಕ ರಕ್ತದೊತ್ತಡ ಪ್ರಕರಣ: ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ತಜ್ಞರ ಕರೆ
ಅಧಿಕ ರಕ್ತದೊತ್ತಡImage Credit source: Getty Images
TV9 Web
| Updated By: ಪ್ರೀತಿ ಭಟ್​, ಗುಣವಂತೆ|

Updated on: May 17, 2025 | 7:26 PM

Share

ಬೆಂಗಳೂರು, ಮೇ 17, 2025: ಭಾರತದಾದ್ಯಂತ ಸಾಂಕ್ರಾಮಿಕವಲ್ಲದ ಕಾಯಿಲೆಗಳು (ಎನ್‌ಸಿಡಿಗಳು) ಸಾವಿಗೆ ಪ್ರಮುಖ ಕಾರಣವಾಗುತ್ತಿದ್ದು, ಕರ್ನಾಟಕವೂ (Karnataka) ಇದಕ್ಕೆ ಹೊರತಾಗಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ ಎಫ್‌ಎಚ್‌ಎಸ್-5, 2019–21)ಯು ದಕ್ಷಿಣ ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಧಿಕ ರಕ್ತದೊತ್ತಡ ಪ್ರಕರಣಗಳು ಕಂಡುಬರುತ್ತಿದೆ ಎಂದು ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ, ಒಟ್ಟಾರೆ ಅಧಿಕ ರಕ್ತದೊತ್ತಡ (High Blood Pressure) ಇರುವವರು 27.2%ಗೆ ತಲುಪಿದೆ, ಅದು ಪುರುಷರಲ್ಲಿ 28.6% ಮತ್ತು ಮಹಿಳೆಯರಲ್ಲಿ 26% ಕಾಣಿಸಿಕೊಂಡಿದೆ. ಈ ರೀತಿ ಬೆಳೆಯುತ್ತಿರುವುದಕ್ಕೆ ನಾವು ರೂಢಿಸಿಕೊಂಡಿರುವಂತಹ ಜಡ ಅಭ್ಯಾಸಗಳು, ಅನಾರೋಗ್ಯಕರ ಆಹಾರ ಪದ್ಧತಿ, ಹೆಚ್ಚುತ್ತಿರುವ ಬೊಜ್ಜು (Obesity) ಮತ್ತು ಅಧಿಕ ಮದ್ಯ ಸೇವನೆ ಸೇರಿದಂತೆ ನಾನಾ ರೀತಿಯ ಕ್ರಮಗಳು ಕಾರಣವಾಗಿದೆ.

ಅಧಿಕ ರಕ್ತದೊತ್ತಡ ಒಂದು ರೀತಿಯ ಸೈಲೆಂಟ್ ಕಿಲ್ಲರ್

ಜಾಗತಿಕ ಮಟ್ಟದಲ್ಲಿ, ಅಧಿಕ ರಕ್ತದೊತ್ತಡವು ಪ್ರತಿ 4 ಪುರುಷರಲ್ಲಿ ಒಬ್ಬರು ಮತ್ತು ಪ್ರತಿ 5 ಮಹಿಳೆಯರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಈ ಪರಿಸ್ಥಿತಿ ವಿಶೇಷವಾಗಿ ಆತಂಕಕಾರಿಯಾಗಿದೆ, ಅಧಿಕ ರಕ್ತದೊತ್ತಡ ಹೊಂದಿರುವ 90%ಗಿಂತ ಹೆಚ್ಚಿನ ವಯಸ್ಕರು ರೋಗ ಪತ್ತೆಗೆ ಮುಂದಾಗದೆ, ಚಿಕಿತ್ಸೆ ಪಡೆಯದೆ ಅಥವಾ ಅಸಮರ್ಪಕ ಚಿಕಿತ್ಸೆಯಿಂದ ಉಳಿದಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅಧಿಕ ರಕ್ತದೊತ್ತಡವನ್ನು “ಸೈಲೆಂಟ್ ಕಿಲ್ಲರ್” ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಹೃದಯ ರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದ್ದು, ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ.

ರಕ್ತದೊತ್ತಡ ಕಡಿಮೆ ಮಾಡಲು ವೈದ್ಯರ ಸಲಹೆ

ಫಿಸಿಶಿಯನ್ಸ್ ಕಮಿಟಿ ಫಾರ್ ರೆಸ್ಪಾನ್ಸಿಬಲ್ ಮೆಡಿಸಿನ್ (ಪಿಸಿಆರ್‌ಎಂ)ನ ಪೌಷ್ಟಿಕಾಂಶ ತಜ್ಞ ಡಾ. ಜೀಶನ್ ಅಲಿ ಅವರು ಹೇಳುವ ಪ್ರಕಾರ, “ಅಧಿಕ ರಕ್ತದೊತ್ತಡವು ಜೀವನದ ಶಾಶ್ವತ ಭಾಗವಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರಳ, ಸ್ಥಿರವಾದ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು ಜೊತೆಗೆ ಅದನ್ನು ನಿಯಂತ್ರಣಕ್ಕೂ ತರಬಹುದು. ಅಲ್ಲದೆ ನಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಸೊಪ್ಪುಗಳ ಸೇವನೆಯನ್ನು ಕೂಡ ಮಾಡಬೇಕು. ಈ ರೀತಿ ಜೀವನಶೈಲಿಯಲ್ಲಿ ಮಾಡಿಕೊಳ್ಳುವಂತಹ ಮಾರ್ಪಾಡುಗಳು, ವಿಶೇಷವಾಗಿ ಸಸ್ಯ ಆಧಾರಿತ ಆಹಾರಗಳ ಸೇವನೆ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಎಂದು ಸಂಶೋಧನೆಗಳು ಕೂಡ ಹೇಳುತ್ತಿವೆ. ರೋಗಿಗಳು ಸಸ್ಯ- ಸಮೃದ್ಧ ಆಹಾರ ಅಳವಡಿಸಿಕೊಂಡಾಗ ಅಂದರೆ ಮಸೂರ, ಬೀನ್ಸ್, ಅಮರಂಥ್ ಸೊಪ್ಪು, ನುಗ್ಗೆಕಾಯಿ ಸೊಪ್ಪು (ಮೊರಿಂಗಾ), ಸೋರೆಕಾಯಿ ಮತ್ತು ಮೆಂತ್ಯಗಳಂತಹ ಕೈಗೆಟುಕುವ ಬೆಲೆಗೆ ಸಿಗುವ ಪದಾರ್ಥಗಳಿಗೆ ಒತ್ತು ನೀಡಿದಾಗ, ರಕ್ತದೊತ್ತಡ ಇಳಿಸುವುದು ಮಾತ್ರವಲ್ಲದೆ ದೇಹದಲ್ಲಿ ಶಕ್ತಿ ಹೆಚ್ಚಳ, ನಿದ್ರೆ ಮತ್ತು ದೀರ್ಘಕಾಲೀನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಾಣಬಹುದಾಗಿದೆ. ಅದಲ್ಲದೆ ಅರಿಶಿನ, ಜೀರಿಗೆ, ಕೊತ್ತಂಬರಿ ಮತ್ತು ಕರಿಬೇವಿನ ಎಲೆಗಳಂತಹ ಸುವಾಸನೆಯುಕ್ತ ಮಸಾಲೆಗಳನ್ನು ಬಳಸುವುದರಿಂದ, ಉಪ್ಪು ಮತ್ತು ಎಣ್ಣೆಯನ್ನು ಕಡಿಮೆ ಮಾಡುವುದರಿಂದ ಊಟದ ರುಚಿ ಕಡಿಮೆಯಾಗದೆಯೇ, ಹೃದಯ ಸ್ನೇಹಿಯಾಗಿ ಆರೋಗ್ಯಕ್ಕೂ ಹಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಕಣ್ಣಿಗೂ ಕ್ಯಾನ್ಸರ್ ಬರುತ್ತಾ? ಹೇಗಿರುತ್ತೆ ಇದರ ಲಕ್ಷಣ
Image
ರಾತ್ರಿ ನೆನಸಿಟ್ಟ ಚಿಯಾ ಬೀಜಗಳ ನೀರು ಕುಡಿದರೆ ಏನಾಗುತ್ತೆ ನೋಡಿ
Image
ಬೋಳುತಲೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದು ಇದೆ ಕಾರಣಕ್ಕೆ
Image
ಇದ್ದಕ್ಕಿದ್ದಂತೆ ಬಿಪಿ ಹೆಚ್ಚಾಗಲು ಈ ತಪ್ಪುಗಳೇ ಕಾರಣ

ಆರೋಗ್ಯಕರ ಆಹಾರಗಳ ಸೇವನೆ

ಡಾ. ಅಲಿ ಹೇಳುವ ಪ್ರಕಾರ, “ನಿಮ್ಮ ರಕ್ತದೊತ್ತಡ ಕಡಿಮೆ ಮಾಡಲು ಮನೆಯಲ್ಲಿಯೇ, ವೈದ್ಯರ ಮಾರ್ಗದರ್ಶನ ಪಡೆದುಕೊಂಡು ಹಣ್ಣು, ತರಕಾರಿ, ಧಾನ್ಯ, ದ್ವಿದಳ ಧಾನ್ಯ, ಬೀಜ ಮತ್ತು ಸೊಪ್ಪು ಮತ್ತಿತರ ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ ಇದು ರಕ್ತದೊತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಕರ್ನಾಟಕದ ಪ್ರಮುಖ ಆಹಾರಗಳಾದ ಸೊಪ್ಪಿನ ಸಾರು (ಗ್ರೀನ್ಸ್ ಕರಿ), ಕೋಸಂಬರಿ (ಲೆಂಟಿಲ್ ಸಲಾಡ್) ಮತ್ತು ತರಕಾರಿ ಸಾರುಗಳಲ್ಲಿ ಪೊಟ್ಯಾಸಿಯಮ್- ಭರಿತ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿರುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಸಂಸ್ಕರಿಸಿದ ತಿಂಡಿಗಳು, ಹುರಿದ ಆಹಾರಗಳು, ಕೆಂಪು ಮಾಂಸ ಮತ್ತು ಹೆಚ್ಚಿನ ಸೋಡಿಯಂ ಬೆರೆಸಿದ ಉಪ್ಪಿನಕಾಯಿಗಳನ್ನು ಕಡಿಮೆ ಮಾಡುವುದರ ಜತೆಗೆ, ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಅದರಲ್ಲಿಯೂ ವಿಶೇಷವಾಗಿ ಔಷಧಿ ತೆಗೆದುಕೊಳ್ಳುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಸೇವನೆ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಅಧಿಕ ರಕ್ತದೊತ್ತಡದ ನಿಯಂತ್ರಿಸಲು ಈ ರೀತಿ ಮಾಡಿ

ಆಹಾರ ಪಥ್ಯೆಯ ಜತೆಗೆ ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ನಿಯಮಿತ ರಕ್ತದೊತ್ತಡ ಮೇಲ್ವಿಚಾರಣೆಯು ಪರಿಣಾಮಕಾರಿ ಅಧಿಕ ರಕ್ತದೊತ್ತಡ ನಿರ್ವಹಣೆ ಮಾಡಲು ಅಗತ್ಯವಿರುವ ಅಂಶಗಳಾಗಿವೆ. ಅದರಲ್ಲಿಯೂ ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಆರಂಭಿಕ ಪತ್ತೆ, ಆರೋಗ್ಯಕರ ಜೀವನ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ