World Hypertension Day: ಅಧಿಕ ರಕ್ತದೊತ್ತಡದ ನಿಯಂತ್ರಿಸಲು ಈ ರೀತಿ ಮಾಡಿ
ವಿಶ್ವ ಹೈಪರ್‌ಟೆನ್ಷನ್ ದಿನ: ಜಗತ್ತಿನಾದ್ಯಂತ ಪ್ರತೀ ವರ್ಷ ಲಕ್ಷಾಂತರ ಜನ ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್‌ಗೆ) ಒಳಗಾಗುತ್ತಾರೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೇ 17 ರಂದು ವಿಶ್ವ ಹೈಪರ್‌ಟೆನ್ಷನ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡು ಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ? ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಸಮಸ್ಯೆ ಹೆಚ್ಚಿನವರಲ್ಲಿ ಕಾಣಸಿಗುತ್ತಿದೆ. ಬದಲಾದ ಜೀವನಶೈಲಿ (Lifestyle) ಹಾಗೂ ಆಹಾರದ ಗುಣಮಟ್ಟದಲ್ಲಿ ಕೊರತೆಯಾಗುವುದರಿಂದ ನಮಗರಿವಿಲ್ಲದಂತೆ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದಲ್ಲಿಯೂ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗೆ ಕಾರಣವಾಗಬಹುದು ಹಾಗಾಗಿ ಅಧಿಕ ರಕ್ತದೊತ್ತಡದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಂಪರ್ಕ ಮಾಡಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಹೃದ್ರೋಗ (Heart disease), ಪಾರ್ಶ್ವವಾಯು ಹೀಗೆ ಅನೇಕ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಅದಕ್ಕಾಗಿಯೇ ವರ್ಲ್ಡ್ ಟೈಪರ್‌ಟೆನ್ಷನ್ ಲೀಗ್, ಅಧಿಕ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಪ್ರತಿವರ್ಷ ಮೇ 17 ರಂದು ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಹಾಗಾದರೆ ಯಾವ ರೀತಿಯ ಲಕ್ಷಣ ಕಂಡು ಬಂದರೆ ವೈದ್ಯರ ಸಂಪರ್ಕ ಮಾಡಬೇಕು? ಇದನ್ನು ತಡೆಯಲು ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಅಧಿಕ ರಕ್ತದೊತ್ತಡ ಲಕ್ಷಣಗಳೇನು?
ಅಪಧಮನಿಗಳ ಮೂಲಕ ರಕ್ತದ ಹರಿವು ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸ್ಥಿತಿಯನ್ನು ಅಧಿಕ ರಕ್ತದೊತ್ತಡದ ಎನ್ನಲಾಗುತ್ತದೆ. ಅಂದರೆ ರಕ್ತದ ಹರಿವು 140/90ಕ್ಕಿಂತ ಜಾಸ್ತಿ ಇದ್ದರೆ ಅಧಿಕ ರಕ್ತದೊತ್ತಡ ಎಂದು ಹೇಳಲಾಗುತ್ತದೆ. ಹಾಗಾಗಿ ವಿಪರೀತ ತಲೆನೋವು, ವಾಕರಿಕೆ, ವಾಂತಿ, ತಲೆತಿರುಗುವಿಕೆ ಹಾಗೂ ಉಸಿರಾಟದ ಸಮಸ್ಯೆ, ಗೊಂದಲ, ಆತಂಕ, ಎದೆಯಲ್ಲಿ ನೋವು ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆಯೇ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಿ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ ?
ಮುನ್ನೆಚ್ಚರಿಕೆ ಕ್ರಮಗಳು ಹೇಗಿರಬೇಕು?
- ಉಪ್ಪು ಸೇವನೆಯು ಮಿತವಾಗಿರಲಿ.
- ಹಣ್ಣು ಹಂಪಲು ಮತ್ತು ಸೊಪ್ಪು ತರಕಾರಿಗಳನ್ನು ಸೇವಿಸಿ.
- ತಂಬಾಕು, ಆಲ್ಕೊಹಾಲ್ ನಿಂದ ದೂರವಿರಿ.
- ಪ್ರತಿದಿನ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಆದರೆ ನಿಂತು ನೀರು ಕುಡಿಯಬೇಡಿ.
- ಹೆಚ್ಚು ಹೆಚ್ಚು ದ್ರವ ಪದಾರ್ಥಗಳನ್ನು ಸೇವನೆ ಮಾಡಿ.
- 2 ಕ್ಕಿಂತ ಹೆಚ್ಚು ಲೀ. ನೀರು ಕುಡಿಯುವುದನ್ನು ಮರೆಯಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








