CBSE ಕ್ಯಾಂಪಸ್‌ಗಳಲ್ಲಿ ‘ಶುಗರ್ ಬೋರ್ಡ್’ ಸ್ಥಾಪನೆ; ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮಕ್ಕಳಲ್ಲಿ ಹೆಚ್ಚುತ್ತಿರುವ ಟೈಪ್ 2 ಮಧುಮೇಹ, ಬೊಜ್ಜು ಮತ್ತು ಹಲ್ಲಿನ ಸಮಸ್ಯೆಗಳನ್ನು ಗಮನಿಸಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಎಲ್ಲಾ ಅಂಗಸಂಸ್ಥೆ ಶಾಲೆಗಳ ಕ್ಯಾಂಪಸ್‌ಗಳಲ್ಲಿ "ಸಕ್ಕರೆ ಮಂಡಳಿ"ಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ಮಕ್ಕಳಿಗೆ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಅರಿವು ಮೂಡಿಸಲು, ಆರೋಗ್ಯಕರ ಆಹಾರ ಆಯ್ಕೆಗಳನ್ನು ಉತ್ತೇಜಿಸಲು ಸಹಾಯಕವಾಗಲಿದೆ.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಕ್ರಮಕ್ಕೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಟೈಪ್ 2 ಮಧುಮೇಹ, ಬೊಜ್ಜು ಮತ್ತು ಹಲ್ಲಿನ ಸಮಸ್ಯೆಗಳಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಳವಳ ವ್ಯಕ್ತಪಡಿಸಿತ್ತು. ಇದೀಗ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ತನ್ನ ಎಲ್ಲಾ ಅಂಗಸಂಸ್ಥೆ ಶಾಲೆಗಳು ತಮ್ಮ ಕ್ಯಾಂಪಸ್‌ಗಳಲ್ಲಿ ಸಕ್ಕರೆ ಮಂಡಳಿ(Sugar Boards) ಗಳನ್ನು ಸ್ಥಾಪಿಸಲು ಅಧಿಸೂಚನೆ ಹೊರಡಿಸಿದೆ.
ಅತಿಯಾದ ಸಕ್ಕರೆ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುವುದಲ್ಲದೆ, ಬೊಜ್ಜು, ದಂತ ಸಮಸ್ಯೆಗಳು ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ, ಇದು ಅಂತಿಮವಾಗಿ ಮಕ್ಕಳ ದೀರ್ಘಕಾಲೀನ ಆರೋಗ್ಯ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಏನಿದು ಸಕ್ಕರೆ ಮಂಡಳಿ?
ಶಾಲೆ ತಮ್ಮ ಕ್ಯಾಂಪಸ್‌ಗಳಲ್ಲಿ “ಸಕ್ಕರೆ ಮಂಡಳಿ”ಯನ್ನು ಪರಿಚಯಿಸುತ್ತಿದ್ದು, ಇದು ಮಧುಮೇಹದ ಅಪಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಿದೆ. ಈ ಉಪಕ್ರಮದ ಜೊತೆಗೆ, ಮಕ್ಕಳಿಗಾಗಿ ಕಾರ್ಯಾಗಾರಗಳನ್ನು ಸಹ ನಡೆಸಲಾಗುವುದು. ಇಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಸಕ್ಕರೆ ಸೇವನೆಯಿಂದ ಯಾವ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸಕ್ಕರೆ ಭರಿತ ವಸ್ತುಗಳನ್ನು ಗುರುತಿಸಲು ಮತ್ತು ಜಂಕ್ ಫುಡ್ ಏನೆಂದು ಗುರುತಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: 65 ನೇ ವಯಸ್ಸಿನಲ್ಲಿ ಮೊಮ್ಮಗನೊಂದಿಗೆ 10 ನೇ ತರಗತಿ ಪರೀಕ್ಷೆ ಬರೆದು ಪಾಸ್ ಆದ ಅಜ್ಜಿ
ಜಾಗೃತಿ ವಿಚಾರ ಸಂಕಿರಣಗಳು:
ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದಾಗುವ ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಜಾಗೃತಿ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ನಡೆಸಲು CBSE ಮುಂದಾಗಿದ್ದು, ಜುಲೈ 15 ರೊಳಗೆ https://shorturl.at/E3kKc ಲಿಂಕ್ ಮೂಲಕ PDF ಸ್ವರೂಪದಲ್ಲಿ ಈ ಚಟುವಟಿಕೆಗಳ ಛಾಯಾಚಿತ್ರಗಳೊಂದಿಗೆ ಸಂಕ್ಷಿಪ್ತ ವರದಿಯನ್ನು ಸಲ್ಲಿಸುವಂತೆ CBSE ತನ್ನ ಎಲ್ಲಾ ಅಂಗಸಂಸ್ಥೆ ಶಾಲೆಗಳನ್ನು ಕೇಳಿದೆ. ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಮಾಹಿತಿಯುಕ್ತ ಆಹಾರ ಆಯ್ಕೆಗಳನ್ನು ಉತ್ತೇಜಿಸುವ ಮೂಲಕ ಮತ್ತು ಬಾಲ್ಯದಿಂದಲೇ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಶಾಲಾ ವಾತಾವರಣವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Sat, 17 May 25