ಕೊರೊನಾ ಎರಡನೇ ಅಲೆಯು ತನ್ನ ಆರ್ಭಟವನ್ನು ಮೆರೆಯುತ್ತಿದೆ. ಹೀಗಿರುವಾಗ ವೈರಸ್ನ ಹರಡುವಿಕೆಯನ್ನು ತಡೆಯುವ ಬಗ್ಗೆ ಕೆಲ ಜನರು ಖಚಿತವಲ್ಲದ ಮಾಹಿತಿಗಳನ್ನು ಹಂಚುತ್ತಿದ್ದಾರೆ. ಕೊರೊನಾ ವೈರಸ್ನ್ನು ಗುಣಪಡಿಸುವುದರ ಕುರಿತಾಗಿ ಉಚಿತ ಸಲಹೆಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಹೆಚ್ಚು ವೈರಲ್ ಅದಂತಹ ಒಂದು ಸಲಹೆಯೆಂದರೆ, ಹಸಿ ಈರುಳ್ಳಿಯ ಜೊತೆ ಕಲ್ಲು ಉಪ್ಪನ್ನು ಬೆರೆಸಿ ಸೇವಿಸಿದರೆ ಕೊರೊನಾ ವೈರಸ್ಅನ್ನು 15ನೇ ನಿಮಿಷಗಳಲ್ಲಿ ಗುಣಪಡಿಸಬಹುದು ಎಂಬುದು. ಇದು ನಿಜವೇ? ಇಲ್ಲಿದೆ ಮಾಹಿತಿ.
ಈ ಉಚಿತ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಕೂಡಾ ಈ ಬಗ್ಗೆ ಹೆಚ್ಚು ಒಲವು ತೋರಿಸಿದಂತೆ ಅನಿಸುತ್ತಿದೆ. ಈ ಕುರಿತಂತೆ ವಿಶ್ವಾಸ್ ನ್ಯೂಸ್ ಸುದ್ದಿ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ವೆಬ್ಸೈಟ್ ವಿವರವಾದ ಸಂಶೋಧನೆಯನ್ನು ನಡೆಸಿದ್ದಾರೆ. ಆದರೆ ಈ ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಸಂದೇಶಕ್ಕೆ ಸಂಬಂಧಿಸಿದಂತೆ ವೈರಲ್ ಸುದ್ದಿ ನಿಜ ಎಂಬ ಮಾಹಿತಿ ಸಿಗಲಿಲ್ಲ. ನಂತರ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ.ನಿಖಿಲ್ ಮೋದಿಯವರನ್ನು ಸಂಪರ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ಸುದ್ದಿ ನಕಲಿ ಎಂದು ಹೇಳಿದ ಅವರು, ಹಸಿ ಈರುಳ್ಳಿಯನ್ನು ಕಲ್ಲು ಉಪ್ಪಿನೊಂದಿಗೆ ಸೇವಿಸಿದರೆ ಕೊರೊನಾ ವೈರಸ್ನಿಂದ 15 ನಿಮಿಷಗಳಲ್ಲಿ ಮುಕ್ತರಾಗಬಹುದು ಎಂಬುದನ್ನು ನಿರಾಕರಿಸಿದ್ದಾರೆ.
ಇದಲ್ಲದೇ ಅಮೆರಿಕದ ಒಂದು ಸಂಸ್ಥೆಯ ಪ್ರಕಾರ, ಈರುಳ್ಳಿ ವಿಷಕಾರಿ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಎಂದು ಹೇಳುವ ಯಾವುದೇ ಪುರಾವೆಗಳು ಅಥವಾ ಅಧ್ಯಯನಗಳು ಇಲ್ಲ ಎಂಬ ಮಾಹಿತಿ ಇದೆ. ಕೊರೊನಾ ವೈರಸ್ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಜೊತೆಗೆ ಒಳ ಬರುತ್ತಿದ್ದಂತೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದಾಗಿದೆ.
ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್
(Covid Prevention Fact Check Can onion with salt help cure Coronavirus Disease here is the truth)
Published On - 6:50 am, Fri, 23 April 21