ಕೊರೊನಾ ಶಾಶ್ವತವಾಗಿ ಮುಂದುವರೆಯುವುದಿಲ್ಲ, ಅದರ ಅಂತ್ಯ ಹತ್ತಿರದಲ್ಲೇ ಇದೆ: ತಜ್ಞರ ಹೇಳಿಕೆ

Dr Kutub Mahmood | Covid 19: ಕೊರೊನಾ ಎಂದೆಂದಿಗೂ ಇರುವುದಿಲ್ಲ. ಶೀಘ್ರವೇ ಅದರ ಅಂತ್ಯವಾಗಲಿದೆ ಎಂದು ವಾಷಿಂಗ್ಟನ್​ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ ಹೇಳಿದ್ದಾರೆ. ಮಾಸ್ಕ್ ಇಲ್ಲದೇ ಮೊದಲಿನಂತಾಗುವ ದಿನಗಳು ಹತ್ತಿರದಲ್ಲೇ ಇದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಿ ಕೆಲಸ ಮಾಡಲಿದೆ ಎಂದು ಡಾ.ಕುತುಬ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಶಾಶ್ವತವಾಗಿ ಮುಂದುವರೆಯುವುದಿಲ್ಲ, ಅದರ ಅಂತ್ಯ ಹತ್ತಿರದಲ್ಲೇ ಇದೆ: ತಜ್ಞರ ಹೇಳಿಕೆ
ಬಲದಲ್ಲಿ ಡಾ.ಕುತುಬ್ ಮಹಮೂದ್
Edited By:

Updated on: Jan 16, 2022 | 3:06 PM

ಲಸಿಕೆಯು (Vaccine) ಕೊರೊನಾ ವಿರುದ್ಧ ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಈ ಸಾಂಕ್ರಾಮಿಕ ರೋಗವು ಇನ್ನು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ ಎಂದಿ ವಾಷಿಂಗ್ಟನ್​ನ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ.ಕುತುಬ್ ಮಹಮೂದ್ (Dr Kutub Mahmood) ತಿಳಿಸಿದ್ದಾರೆ. ಸುದ್ದಿಸಂಸ್ಥೆ ಎಎನ್​ಐ ಜತೆ ಅವರು ಮಾತನಾಡಿ, ಕೊರೊನಾದ (Corona) ಅಂತ್ಯವು ಬಹಳ ಹತ್ತಿರದಲ್ಲಿದೆ ಎಂದಿದ್ದಾರೆ. ಭಾರತವು ಲಸಿಕಾ ಅಭಿಯಾನ ಆರಂಭಿಸಿ ಒಂದು ವರ್ಷ ಕಳೆದಿದ್ದು, 156 ಕೋಟಿ ಡೋಸ್ ಲಸಿಕೆ ನೀಡಿಕೆಯ ಮೈಲಿಗಲ್ಲನ್ನು ತಲುಪಿದೆ. ಇದರ ಬೆನ್ನಲ್ಲೇ ಕುತುಬ್ ಮಹಮೂದ್ ಅವರ ಹೇಳಿಕೆ ನೀಡಿದ್ದು, ಮಹತ್ವ ಪಡೆದಿದೆ. ‘‘ಈ ಸಾಂಕ್ರಾಮಿಕ ಶಾಶ್ವತವಾಗಿ ಮುಂದುವರೆಯುವುದಿಲ್ಲ. ಮತ್ತು ಅದರ ಅಂತ್ಯ ಹತ್ತಿರದಲ್ಲೇ ಇದೆ. ಇದು ಚೆಸ್ ಆಟದಂತೆ, ಆದರೆ ಇಲ್ಲಿ ವಿಜೇತರಿಲ್ಲ. ಪಂದ್ಯ ಡ್ರಾ ಆಗಲಿದೆ. ಅರ್ಥಾತ್ ವೈರಸ್ ಅಡಗಿಕೊಳ್ಳಲಿದೆ. ಪರೋಕ್ಷವಾಗಿ ನಾವು ಜಯ ಸಾಧಿಸಲಿದ್ದೇವೆ. ಶೀಘ್ರದಲ್ಲೇ ಎಲ್ಲರೂ ಮಾಸ್ಕ್ ಇಲ್ಲದೇ ಓಡಾಡುವ ದಿನಗಳು ಬರಲಿವೆ ಎಂದು ನಾನು ಭಾವಿಸುತ್ತೇನೆ’’ ಎಂದಿದ್ದಾರೆ ಕುತುಬ್ ಮಹಮೂದ್.

ಕೊರೊನಾ ವೈರಸ್​ಅನ್ನು ಚೆಸ್​ಗೆ ಹೋಲಿಸಿದ್ದನ್ನು ಅವರು ಮತ್ತಷ್ಟು ವಿವರಿಸಿದ್ದಾರೆ. ವೈರಸ್ ರೂಪಾಂತರಗಳನ್ನು ಹೊಂದಿ ಪ್ರಸರಣವಾಗಲು ನೋಡುತ್ತದೆ. ಈ ಮೂಲಕ ಶಾಶ್ವತವಾಗಿ ಇರಲು ಅದು ಪ್ರಯತ್ನಿಸುತ್ತಿದೆ. ಆದ್ದರಿಂದ ಇದು ಮನುಷ್ಯ ಹಾಗೂ ವೈರಸ್ ನಡುವಿನ ಚೆಸ್ ಆಟದಂತೆ. ಇದರಲ್ಲಿ ಮನುಷ್ಯನ ಸಣ್ಣ ನಡೆಗಳೆಂದರೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ. ವೈರಸ್ ವಿರುದ್ಧ ದೊಡ್ಡ ಅಸ್ತ್ರವೆಂದರೆ ಲಸಿಕೆ, ರೋಗನಿರೋಧಕ ಪ್ರತಿಕಾಯಗಳು’’ ಎಂದಿದ್ದಾರೆ ಡಾ.ಕುತುಬ್ ಮಹಮೂದ್.

ಭಾರತವು ವರ್ಷದೊಳಗೆ ಶೇ.60 ರಷ್ಟು ಲಸಿಕೆ ನೀಡಕೆ ಪೂರ್ತಿಗೊಳಿಸಿದ್ದಕ್ಕೆ ದೇಶವನ್ನು ಡಾ.ಕುತುಬ್ ಅಭಿನಂದಿಸಿದ್ದಾರೆ. ‘‘ಇದು ದೇಶದ ಮತ್ತು ಭಾರತದಲ್ಲಿನ ಲಸಿಕೆ ತಯಾರಕರ ದೊಡ್ಡ ಸಾಧನೆಯಾಗಿದೆ. ಭಾರತೀಯ ಲಸಿಕೆಗಳನ್ನು ಜಾಗತಿಕವಾಗಿ ಬಳಸಲಾಗುತ್ತದೆ. 12 ತಿಂಗಳುಗಳಲ್ಲಿ ನಾವು ಸುಮಾರು 60 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಅನ್ನು ಸಾಧಿಸಿದ್ದೇವೆ. ಇದು ಭಾರತ ಸರ್ಕಾರ, ಆರೋಗ್ಯ ಸಚಿವಾಲಯ ಮತ್ತು ಲಸಿಕೆ ತಯಾರಕರ ಒಂದು ದೊಡ್ಡ ಸಾಧನೆಯಾಗಿದೆ’’ ಎಂದು ವೈರಾಲಜಿಸ್ಟ್ ಆಗಿರುವ ಡಾ.ಕುತುಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ರೂಪಾಂತರ ಹೊಂದುವುದರಲ್ಲಿ ಆಶ್ಚರ್ಯವಿಲ್ಲ ಎಂದಿರುವ ಅವರು, ಲಸಿಕೆಯ ಮೂಲಕ ಅವನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ರೂಪಾಂತರವಲ್ಲದ ಮೂಲ ಸೋಂಕೇ ಮತ್ತೆ ಹರಡುತ್ತಿರುವ ಕುರಿತು ಉತ್ತರಿಸಿರುವ ಕುತುಬ್, ‘ಕೆಲವು ಸಂದರ್ಭಗಳಲ್ಲಿ ಮರು ಸೋಂಕು ಉಂಟಾಗುತ್ತದೆ. ಅದನ್ನು ಬೂಸ್ಟರ್​ ಡೋಸ್​ನಿಂದ ಎದುರಿಸಬಹುದು’ ಎಂದಿದ್ದಾರೆ.

ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್​ನ ಬೂಸ್ಟರ್ ಡೋಸ್ ಒಮಿಕ್ರಾನ್ ವಿರುದ್ಧ 90 ಪ್ರತಿಶತ ಪರಿಣಾಮಕಾರಿ ಎಂದು ಡಾ.ಕುತುಬ್ ಹೇಳಿದ್ದಾರೆ. ಅಲ್ಲದೇ ಅದು ತಯಾರಿಸಿರುವ ಮಕ್ಕಳ ಲಸಿಕೆ ಎರಡು ವರ್ಷದ ಮಕ್ಕಳಲ್ಲೂ ಪರಿಣಾಮಕಾರಿ ಎಂದಿದ್ದಾರೆ.​ ಕೊವ್ಯಾಕ್ಸಿನ್ ಪರಿಣಾಮಕಾರಿ ಲಸಿಕೆ ತಯಾರಿಸುತ್ತಿದ್ದು, ಭಾರತದಿಂದ ಭಾರತದಲ್ಲೇ ತಯಾರಿಸಲಾಗಿದೆ ಎಂದು ಡಾ.ಕುತುಬ್ ಹೇಳಿದ್ದಾರೆ.

ಇದನ್ನೂ ಓದಿ:

ಗದಗ ರಾಜೀವ್ ಗಾಂಧಿ ಆಯುರ್ವೇದ ಕಾಲೇಜಿನಲ್ಲಿ 30 ವಿದ್ಯಾರ್ಥಿಗಳಿಗೆ ಕೊರೊನಾ! ಹರಿಯಾಣದಿಂದ ಬಳ್ಳಾರಿಗೆ ಬಂದ ನೂರಾರು ವಿದ್ಯಾರ್ಥಿಗಳು

ರಾಜ್ಯದಲ್ಲಿ ನೂತನ ಸ್ಟಾರ್ಟ್ ಅಪ್ ಪಾಲಿಸಿ ತಂದಿದ್ದೇವೆ: ಸಚಿವ ಡಾ.ಅಶ್ವತ್ಥ್ ನಾರಾಯಣ