
ಒಗ್ಗರಣೆ ಸೊಪ್ಪು ನಮ್ಮ ಅಡುಗೆ ಮನೆಯಲ್ಲಿರುವ ಪ್ರಮುಖ ಪದಾರ್ಥಗಳಲ್ಲಿ ಒಂದು. ಸಾಂಬಾರ್, ಪಲ್ಯ, ಚಟ್ನಿ ಸೇರಿದಂತೆ ಹಲವು ಖಾದ್ಯಗಳಿಗೆ ಇದರ ಬಳಕೆ ಸಾಮಾನ್ಯ. ಇದರಿಂದ ಒಗ್ಗರಣೆ ಬೀಳದಿದ್ದರೆ ಆ ಡಿಶ್ ಕಂಪ್ಲೀಟ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಮಾತ್ರವಲ್ಲ ಇದು ಹೇರಳವಾದ ಪೋಷಕಾಂಶಗಳು ಮತ್ತು ಸಸ್ಯ ಸಂಯುಕ್ತಗಳನ್ನು ಹೊಂದಿರುವುದರಿಂದ ಸಾಮಾನ್ಯ ಆಹಾರದ ಭಾಗವಾಗಿ ಇದನ್ನು ಬಳಸಬಹುದು. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದ ಮಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿದಿನ ಸೇವಿಸುವುದು ಸೂಕ್ತ ಎಂದು ಅರ್ಥವಲ್ಲ. ವಿಶೇಷವಾಗಿ ಕೆಲವು ಆರೋಗ್ಯ ಸಮಸ್ಯೆ ಇರುವವರು ಒಗ್ಗರಣೆ ಸೊಪ್ಪನ್ನು ಔಷಧಿಯಂತೆ, ಕಷಾಯ ಅಥವಾ ಪುಡಿ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ ಮತ್ತು ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ
ಸಾಮಾನ್ಯವಾಗಿ ಕಿಡ್ನಿ ಸಂಬಂಧಿಸಿದ ಕಾಯಿಲೆ ಅಥವಾ ಕೆಲವು ರೀತಿಯ ಕಿಡ್ನಿ ಕಲ್ಲಿನ ಸಮಸ್ಯೆ ಇರುವವರು ಆಹಾರದಲ್ಲಿನ ಪೊಟ್ಯಾಸಿಯಂ ಸೇರಿದಂತೆ ಕೆಲವು ಖನಿಜಗಳ ಪ್ರಮಾಣದ ಬಗ್ಗೆ ವೈದ್ಯರ ಸಲಹೆ ಪಡೆಯಬೇಕಾಗಬಹುದು. ಆದ್ದರಿಂದ ಒಗ್ಗರಣೆ ಸೊಪ್ಪಿನ ರಸ ಅಥವಾ ಪುಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸುವುದು ಉತ್ತಮ.
ಒಗ್ಗರಣೆ ಸೊಪ್ಪು ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು ಎಂಬ ಮಾಹಿತಿಗಳಿವೆ. ಈಗಾಗಲೇ ಕಡಿಮೆ ಬಿಪಿ ಇರುವವರು ಅಥವಾ ಬಿಪಿ ಕಡಿಮೆ ಮಾಡುವ ಔಷಧ ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ತಲೆತಿರುಗುವಿಕೆ, ದೌರ್ಬಲ್ಯ ಅಥವಾ ಮಸುಕಾದ ದೃಷ್ಟಿಯಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.
ಇದನ್ನೂ ಓದಿ: ಮೆಂತೆ ಸೊಪ್ಪು ತಿನ್ನುವುದರಿಂದ ಶುಗರ್ ಕಂಟ್ರೋಲ್ ಆಗುತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಾಹಿತಿ
ಒಗ್ಗರಣೆ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ಸುಲಿನ್ ಅಥವಾ ಮಧುಮೇಹದ ಔಷಧಗಳನ್ನು ತೆಗೆದುಕೊಳ್ಳುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ರಸ ಅಥವಾ ಪುಡಿ ರೂಪದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರಬಹುದು ಹಾಗಾಗಿ ಈ ಬಗ್ಗೆ ಎಚ್ಚರಿಕೆ ಅಗತ್ಯ. ಆದರೆ ಇದರರ್ಥ ಮಧುಮೇಹ ಇರುವವರು ಒಗ್ಗರಣೆ ಸೊಪ್ಪನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದಲ್ಲ. ಸಾಮಾನ್ಯ ಅಡುಗೆಯಲ್ಲಿ ಬಳಸುವ ಪ್ರಮಾಣದಲ್ಲಿ ಎಚ್ಚರವಹಿಸಬೇಕು ಅಷ್ಟೇ.
ವಾರ್ಫರಿನ್‌ನಂತಹ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುವ ಔಷಧಗಳನ್ನು ಸೇವಿಸುವವರು ಆಹಾರದಲ್ಲಿನ ವಿಟಮಿನ್ ಕೆ ಪ್ರಮಾಣದಲ್ಲಿ ಆಗುವ ಬದಲಾವಣೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸುವುದು ಮುಖ್ಯ. ಒಗ್ಗರಣೆ ಸೊಪ್ಪನ್ನು ಔಷಧಿಯಂತೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಕೆಲವರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಚ್ಚಾ ಒಗ್ಗರಣೆ ಸೊಪ್ಪು ಅಥವಾ ಅದರ ರಸ ಸೇವಿಸುವುದರಿಂದ ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು. ಎದೆಉರಿ, ವಾಕರಿಕೆ, ಗ್ಯಾಸ್ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಂಡುಬಂದರೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದನ್ನು ನಿಲ್ಲಿಸಿ ತಜ್ಞರ ಸಲಹೆ ಪಡೆಯಿರಿ.
ಗರ್ಭಾವಸ್ಥೆಯಲ್ಲಿ ಸಾಮಾನ್ಯ ಅಡುಗೆಯಲ್ಲಿ ಬಳಸುವ ಸ್ವಲ್ಪ ಪ್ರಮಾಣದ ಒಗ್ಗರಣೆ ಸೊಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ರಸ ಅಥವಾ ಕಷಾಯ ಸೇವಿಸುವುದನ್ನು ಒಂದೇ ರೀತಿಯಾಗಿ ನೋಡಬಾರದು. ಗರ್ಭಿಣಿಯರು ಯಾವುದೇ ಸೊಪ್ಪು ಅಥವಾ ಗಿಡಮೂಲಿಕೆಯನ್ನು ಔಷಧಿಯಂತೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.
ಮುಖ್ಯವಾಗಿ: ಒಗ್ಗರಣೆ ಸೊಪ್ಪು ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ಯಾವುದೇ ನೈಸರ್ಗಿಕ ಆಹಾರವನ್ನು ಔಷಧಿಗೆ ಪರ್ಯಾಯವಾಗಿ ಬಳಸಬಾರದು. ವೈದ್ಯರು ಸೂಚಿಸಿರುವ ಮಧುಮೇಹ, ಬಿಪಿ ಅಥವಾ ಇತರ ಔಷಧಗಳನ್ನು ನಿಲ್ಲಿಸಬೇಡಿ ಅಥವಾ ಪ್ರಮಾಣ ಬದಲಿಸಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ