
ಡೀಹೈಡ್ರೇಷನ್ ಅಥವಾ ನಿರ್ಜಲೀಕರಣ (Dehydration) ಎಂದರೆ ದೇಹದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆಯಾಗುವಂತದ್ದು. ದೇಹಕ್ಕೆ ಅಗತ್ಯವಿರುವಷ್ಟು ನೀರು ಮತ್ತು ದ್ರವಗಳು ಸಿಗದಿದ್ದಾಗ ಈ ರೀತಿಯಾಗುತ್ತದೆ. ಆಗ ದೇಹ ತನ್ನ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯು ಚಿಕ್ಕ ಮಕ್ಕಳಲ್ಲಿ ಬೇಗನೆ ಕಂಡುಬರುತ್ತದೆ. ಏಕೆಂದರೆ ಅವರ ದೇಹದಲ್ಲಿ ವಯಸ್ಕರಿಗಿಂತ ವೇಗವಾಗಿ ನೀರು ಕಡಿಮೆಯಾಗುತ್ತದೆ. ಹೆಚ್ಚಿನ ತಾಪಮಾನ, ಅತಿಯಾದ ಬೆವರು, ವಾಂತಿ ಅಥವಾ ಅತಿಸಾರದಿಂದಾಗಿ ನಿರ್ಜಲೀಕರಣದಂತಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುವುದು ತಿಳಿಯುವುದಿಲ್ಲ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕೂಡ ಕುಡಿಯುವುದಿಲ್ಲ. ಹಾಗಾಗಿ ಶೀತ ಹವಾಮಾನ ಅಥವಾ ಋತುಮಾನದ ಬದಲಾವಣೆಗಳ ಸಮಯದಲ್ಲಿ ಮಕ್ಕಳಲ್ಲಿ ನಿರ್ಜಲೀಕರಣದ ಅಪಾಯವು ಹೆಚ್ಚಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ಮಕ್ಕಳಲ್ಲಿ ಬಾಯಾರಿಕೆ ಕಡಿಮೆಯಾಗುವುದರಿಂದ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದನ್ನು ಯಾವ ರೀತಿ ಕಂಡುಹಿಡಿಯಬಹುದು? ಮಕ್ಕಳಲ್ಲಿ ದೇಹ ನಿರ್ಜಲೀಕರಣಗೊಂಡಾಗ ಯಾವ ರೀತಿ ಲಕ್ಷಣಗಳು ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಿಕ್ಕ ಮಕ್ಕಳಲ್ಲಿ ನಿರ್ಜಲೀಕರಣಕ್ಕೆ ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ಅದು ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವೈರಲ್ ಜ್ವರ, ಅತಿಸಾರ, ವಾಂತಿ ಮತ್ತು ಅತಿಯಾದ ಶಾಖದಿಂದ ಉಂಟಾಗುವ ಆಯಾಸವು ನಿರ್ಜಲೀಕರಣಕ್ಕೆ ಪ್ರಮುಖ ಕಾರಣಗಳಾಗಿವೆ. ಮಾತ್ರವಲ್ಲ, ನೀರಿನ ಕೊರತೆಯು ಮೂತ್ರಪಿಂಡಗಳು ಮತ್ತು ಹೃದಯದ ಮೇಲೆ ಒತ್ತಡ, ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ದೇಹದಲ್ಲಿ ಲವಣಗಳು ಮತ್ತು ಖನಿಜಗಳ ಅಸಮತೋಲನ ಉಂಟಾಗುತ್ತದೆ, ಇದು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ, ಇದು ತಲೆತಿರುಗುವಿಕೆ, ತ್ವರಿತ ಹೃದಯ ಬಡಿತ ಮತ್ತು ಒಣ ಚರ್ಮದಂತಹ ಗಂಭೀರ ಸ್ಥಿತಿಗಳಿಗೂ ಕಾರಣವಾಗಬಹುದು. ಹಾಗಾಗಿ ಮಕ್ಕಳಲ್ಲಿ ಕಂಡುಬರುವ ನಿರ್ಜಲೀಕರಣ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು.
ದೆಹಲಿಯ ಏಮ್ಸ್‌ನ ಮಕ್ಕಳ ತಜ್ಞ ಡಾ. ರಾಕೇಶ್ ಬಾಗ್ರಿ ಅವರು ಹೇಳುವ ಪ್ರಕಾರ, ಚಿಕ್ಕ ಮಕ್ಕಳಲ್ಲಿ ನಿರ್ಜಲೀಕರಣದ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಮಗುವು ಸಾಕಷ್ಟು ನೀರು ಕುಡಿಯದಿದ್ದರೆ ಅಥವಾ ಮೂತ್ರವನ್ನು ಕಡಿಮೆ ಮಾಡುತ್ತಿದ್ದರೆ, ಅದು ನೀರಿನ ಕೊರತೆಯ ಮೊದಲ ಲಕ್ಷಣವಾಗಿದೆ. ಹೆಚ್ಚುವರಿಯಾಗಿ, ಒಣ ಬಾಯಿ ಮತ್ತು ತುಟಿಗಳು, ಗುಳಿಬಿದ್ದ ಕಣ್ಣುಗಳು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗುವುದು ಸಹ ನಿರ್ಜಲೀಕರಣದ ಲಕ್ಷಣಗಳಾಗಿವೆ. ಆಯಾಸ, ಕಿರಿಕಿರಿ, ಹಸಿವು ಕಡಿಮೆಯಾಗುವುದು ಅಥವಾ ಕಡಿಮೆ ತಿನ್ನುವುದು ಸಹ ನಿರ್ಜಲೀಕರಣ ಸಮಸ್ಯೆಯ ಸಾಮಾನ್ಯ ಲಕ್ಷಣಗಳಾಗಿವೆ.
ತೀವ್ರ ನಿರ್ಜಲೀಕರಣವಾಗಿದ್ದಲ್ಲಿ, ಮಗುವಿನಲ್ಲಿ ಆಲಸ್ಯ, ಪ್ರಜ್ಞಾಹೀನತೆ ಅಥವಾ ತಲೆತಿರುಗಿದ ಅನುಭವ ಆಗಬಹುದು. ಕೆಲವೊಮ್ಮೆ, ವಾಂತಿ ಅಥವಾ ಅತಿಸಾರದಿಂದಾಗಿ, ದೇಹದಲ್ಲಿರುವ ನೀರಿನಾಂಶ ಬೇಗನೆ ಕಡಿಮೆಯಾಗಬಹುದು. ಅಂತಹ ಸಂದರ್ಭಗಳಲ್ಲಿ ಲಕ್ಷಣಗಳು ತಕ್ಷಣವೇ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪೋಷಕರು ಸಾಧ್ಯವಾದಷ್ಟು ಮಕ್ಕಳ ಮೇಲೆ ಗಮನ ಕೊಡಬೇಕು ಮತ್ತು ಮಗು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ಸಮಯಕ್ಕೆ ಸರಿಯಾಗಿ ನೀರು ಮತ್ತು ಲಘು ಆಹಾರವನ್ನು ನೀಡಬೇಕು.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ಈ ರೀತಿ ಸಮಸ್ಯೆಗಳು ಕಂಡುಬರುವುದಕ್ಕೆ ನಿಂತು ನೀರು ಕುಡಿಯುವ ಅಭ್ಯಾಸವೇ ಕಾರಣ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ