ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದ ಕೊವಿಡ್ ಸೋಂಕಿನ ಬಳಿಕ ‘ಡಿಸೀಸ್ ಎಕ್ಸ್’ ಎಂದು ಕರೆಯಲ್ಪಡುವ ನಿಗೂಢ ಮತ್ತು ಮಾರಣಾಂತಿಕ ಕಾಯಿಲೆಯ ಬಗ್ಗೆ ಮತ್ತೆ ಆತಂಕ ಸೃಷ್ಟಿಯಾಗಿದೆ. ಈ ಡಿಸೀಸ್ ಎಕ್ಸ್ ನಿಖರವಾಗಿ ಏನು? ಇದು ಕೊವಿಡ್ಗಿಂತಲೂ ಅಪಾಯಕಾರಿಯಾ? ಇದರ ಲಕ್ಷಣಗಳೇನು? ಈ ರೋಗ ಹೇಗೆ ಹರಡುತ್ತದೆ? ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.
ಡಿಸೀಸ್ ಎಕ್ಸ್ ಎಂಬುದು ವಿಶ್ವ ಆರೋಗ್ಯ ಸಂಸ್ಥೆ (WHO) 2016ರಲ್ಲಿ ಭವಿಷ್ಯದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಕಾಯಿಲೆಯನ್ನು ವಿವರಿಸಲು ಸೃಷ್ಟಿಸಿದ ಒಂದು ಪದವಾಗಿದೆ. ಇದು ಒಂದು ನಿರ್ದಿಷ್ಟ ರೋಗವಲ್ಲ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಅಜ್ಞಾತ ಅಥವಾ ಹೊಸದಾಗಿ ಹೊರಹೊಮ್ಮುತ್ತಿರುವ ಸಾಂಕ್ರಾಮಿಕ ಕಾಯಿಲೆಗೆ ಪ್ಲೇಸ್‌ಹೋಲ್ಡರ್ ಆಗಿದೆ.
ಇದನ್ನೂ ಓದಿ: ನಿಮ್ಮ ಲಿವರ್ ಆರೋಗ್ಯಕ್ಕೆ ಆಲ್ಕೋಹಾಲ್ಗಿಂತ ಹೆಚ್ಚು ಅಪಾಯಕಾರಿ ಆಹಾರಗಳಿವು
ಡಿಸೀಸ್ ಎಕ್ಸ್ ಎಂಬುದು ಅಮೂರ್ತ ಪರಿಕಲ್ಪನೆಯಂತೆ ಕಾಣಿಸಬಹುದು. ಆದರೆ, ಡಿಸೀಸ್ X ಯಾವುದೇ ಸಂಭಾವ್ಯ ಆರೋಗ್ಯ ಬಿಕ್ಕಟ್ಟುಗಳಿಗೆ ತಯಾರಿ ಮಾಡಲು ಕಾರ್ಯನಿರ್ವಹಿಸುತ್ತದೆ. ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿಯೂ ಈ ಪದವನ್ನು ಬಳಸಲಾಗಿತ್ತು. ಈ ವಾರ ದಾವೋಸ್‌ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಡಿಸೀಸ್ ಎಕ್ಸ್ ಕುರಿತು ಚರ್ಚೆ ನಡೆಯಲಿದೆ. ಮುಂಬರುವ ಸಾಂಕ್ರಾಮಿಕ ರೋಗವಾದ ಹೊಸ ‘ಡಿಸೀಸ್ ಎಕ್ಸ್’ ಕೊರೊನಾವೈರಸ್ ಸಾಂಕ್ರಾಮಿಕಕ್ಕಿಂತ 20 ಪಟ್ಟು ಹೆಚ್ಚು ಸಾವುಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು. ಈ ಬಾರಿಯ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು 2024ರ ಜನವರಿ 15-19ರವರೆಗೆ ದಾವೋಸ್‌ನಲ್ಲಿ ನಿಗದಿಪಡಿಸಲಾಗಿದೆ.
COVID-19ಗೆ ಹೋಲಿಸಿದರೆ ಡಿಸೀಸ್ X ಎಷ್ಟು ಮಾರಕವಾಗಿದೆ? ಎಂಬುದು ತಜ್ಞರಿಗೂ ಇನ್ನೂ ತಿಳಿದಿಲ್ಲ. ಡಿಸೀಸ್ X ಸಾಮಾನ್ಯ ಶೀತಕ್ಕಿಂತ ಕಡಿಮೆ ತೀವ್ರತೆಯಿಂದ ಹಿಡಿದು ಕೊವಿಡ್-19ಗಿಂತ ಹೆಚ್ಚು ಮಾರಣಾಂತಿಕವೂ ಆಗಿರಬಹುದು. ಡಿಸೀಸ್ ಎಕ್ಸ್ ಅನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಕಷ್ಟವಾಗಬಹುದು ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?
ಇಲ್ಲಿಯವರೆಗೆ, ಡಿಸೀಸ್ ಎಕ್ಸ್ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಅದು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವಲ್ಲ. ಅಜ್ಞಾತ ರೋಗಕಾರಕದಿಂದ ಉಂಟಾಗುವ ಭವಿಷ್ಯದ ಸಾಂಕ್ರಾಮಿಕದ ಸಂಭಾವ್ಯತೆಯು ಆತಂಕ ಪಡಲೇಬೇಕಾದ ಸಂಗತಿಯಾಗಿದೆ. ಈ ರೋಗದ ಸಾಧ್ಯತೆಗಳು ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ