
ಒಡೆದ ತುಟಿ ಕಿರಿಕಿರಿ ಉಂಟು ಮಾಡುವುದು ಸಹಜ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಒಣಗಿದ ಮತ್ತು ಬಿರುಕುಬಿಟ್ಟ ತುಟಿಯ ನೋವು ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬಂದಿರುತ್ತದೆ. ಇದು ತುಟಿ ಕೆಂಪಾಗುವುದು, ಊತ, ಕೆರೆತ, ಉರಿ ಮತ್ತು ಚುಚ್ಚಿದಂತಹ ಸಂವೇದನೆಯನ್ನು ಒಳಗೊಂಡಿರುತ್ತದೆ. ಜೊತೆಗೆ ಒಣ ತುಟಿಗಳಿಂದ ಕೆಲವೊಮ್ಮೆ ರಕ್ತವೂ ಕೂಡ ಸುರಿಯುವ ಅಪಾಯವಿರುತ್ತದೆ. ಇಂತಹ ಸಮಯದಲ್ಲಿ ಇವುಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದರಿಂದ ನೋವು, ತುರಿಕೆ ಹೆಚ್ಚಾಗಬಹುದು. ಹಾಗಾದರೆ ನಮ್ಮ ತುಟಿ ಒಡೆಯಲು ಪ್ರಮುಖ ಕಾರಣವೇನು? ಇದನ್ನು ತಡೆಯುವುದು ಹೇಗೆ? ಇದಕ್ಕೆ ಪರಿಹಾರವೇನು? ಇಲ್ಲಿದೆ ಮಾಹಿತಿ.
ಎಣ್ಣೆ ಗ್ರಂಥಿಗಳ ಕೊರತೆಯಿಂದಾಗಿ ತುಟಿಗಳು ಸುಲಭವಾಗಿ ಒಣಗುತ್ತವೆ. ಅಲ್ಲದೆ ಚಳಿ ಮತ್ತು ಒಣಗಿದ ಹವಾಮಾನದಿಂದ ತುಟಿ ಒಡೆಯುತ್ತದೆ. ಜೊತೆಗೆ ಸೂರ್ಯನ ಬಿಸಿಲಿಗೆ ಮುಖವನ್ನು ಹೆಚ್ಚಾಗಿ ಒಡ್ಡಿಕೊಳ್ಳುವುದು, ಥೈರಾಯ್ಡ್ ಅಸಮತೋಲನ, ಚರ್ಮದ ಅಲರ್ಜಿ ಅಥವಾ ವಿಟಮಿನ್ ಬಿ ಕಾಂಪ್ಲೆಕ್ಸ್ ನ ಕೊರತೆಯಂತಹ ಚಯಾಪಚಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಜೊತೆಗೆ ನಿಮಗೆ ತುಟಿಯನ್ನು ನಾಲಿಗೆಯಿಂದ ಪದೇ ಪದೇ ಸ್ಪರ್ಶಿಸುವ, ಕಚ್ಚುವ ಅಭ್ಯಾಸಗಳಿಂದಲೂ ತುಟಿ ಒಡೆದಂತಹ ಸಮಸ್ಯೆ ಬರಬಹುದು. ನೀವು ಬಳಸುವ ಕಾಸ್ಮೆಟಿಕ್ಸ್ ಗಳು, ಅಥವಾ ಸೇವನೆ ಮಾಡುವ ಆಹಾರಗಳಿಂದಲೂ ಉಂಟಾಗಬಹುದು.
ಇದನ್ನೂ ಓದಿ: ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ
ಸಾಮಾನ್ಯವಾಗಿ ತುಟಿ ಒಡೆಯುವುದನ್ನು ತಡೆಯಲು ಅಥವಾ ಒಣಗಿದ ಅನುಭವ ಆಗದಿರಲು ನಿಮ್ಮ ತುಟಿಯನ್ನು ತೇವಾಂಶದಿಂದಿರುವಂತೆ ನೋಡಿಕೊಳ್ಳಿ. ಆಯಿಂಟ್ ಮೆಂಟ್ ಗಳಿಗೆ ಬದಲಾಗಿ ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯನ್ನು ಬಳಕೆ ಮಾಡಬಹುದು. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಮಾಯಿಶ್ಚರೈಸರ್ ಹಚ್ಚುವುದು ಒಳ್ಳೆಯದು. ಅದರಂತೆ ನೀವು ಪರಿಮಳ ರಹಿತ ಎಮೋಲಿಯೆಂಟ್ ಗಳಿಂದ ನಿಮ್ಮ ತುಟಿಯನ್ನು ತೇವವಾಗಿಡಬಹುದು. ಅದಲ್ಲದೆ ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಎಣ್ಣೆ ಅಥವಾ ಲಿಪ್ ಬಾಮ್ ಬಳಸುವುದನ್ನು ಮರೆಯಬೇಡಿ. ಇದೆಲ್ಲದರ ಜೊತೆಗೆ ತುಟಿ ಆದಷ್ಟು ತೇವದಿಂದಿರುವಂತೆ ನೋಡಿಕೊಳ್ಳಿ, ಹೆಚ್ಚಾಗಿ ನೀರು ಕುಡಿಯಿರಿ. ಇದರಿಂದ ತುಟಿ ಚೆಂದವಾಗಿರುವುದಲ್ಲದೆ ಆರೋಗ್ಯದಿಂದ ಕೂಡಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ