ದಿನಕ್ಕೊಂದು ಆವಕಾಡೊ, ವೈದ್ಯರನ್ನು ದೂರವಿಡುತ್ತದೆ -ಸಂಶೋಧನೆಯಲ್ಲಿ ಕುತೂಹಲಕರ ವಿಷಯ ಬಹಿರಂಗ

| Updated By: ಸಾಧು ಶ್ರೀನಾಥ್​

Updated on: Jul 31, 2024 | 4:14 PM

ದಕ್ಷಿಣ ಅಮೆರಿಕಾ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಾಗಿ ಬೆಳೆಯುವ ಆವಕಾಡೊ ಹಣ್ಣಿನಲ್ಲಿ 20ಕ್ಕೂ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿವೆ. ಇತರ ಯಾವುದೇ ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಈ ಹಣ್ಣು ಹೊಂದಿದೆ. ದುಬಾರಿ ಎಂಬ ಕಾರಣಕ್ಕೆ ಈ ಹಣ್ಣನ್ನು ಅಷ್ಟಾಗಿ ಖರೀದಿಸಲ್ಲ. ಆದರೆ ಈ ಹಣ್ಣಿನಲ್ಲಿ ಪೋಷಕಾಂಶಗಳ ಭಂಡಾರವೇ ಅಡಗಿದೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಅನೇಕ ವಿಚಾರಗಳು ಬಹಿರಂಗವಾಗಿವೆ.

ದಿನಕ್ಕೊಂದು ಆವಕಾಡೊ, ವೈದ್ಯರನ್ನು ದೂರವಿಡುತ್ತದೆ -ಸಂಶೋಧನೆಯಲ್ಲಿ ಕುತೂಹಲಕರ ವಿಷಯ ಬಹಿರಂಗ
ಆವಕಾಡೊ
Follow us on

ಸಾಮಾನ್ಯವಾಗಿ ಬಹುತೇಕ ಡಾಕ್ಟರ್​ಗಳು ಹೇಳೋದು ನಾವು ಊಟ ಮಾಡಲು ಕೂತಾಗ ನಮ್ಮ ತಟ್ಟೆ ಕಲರ್ ಫುಲ್ ಆಗಿ ಇರಬೇಕು ಅಂತ. ಅಂದರೆ ತಟ್ಟೆಯಲ್ಲಿ ಅನ್ನದ ಜೊತೆಗೆ ತರಕಾರಿ, ಹಣ್ಣು-ಹಂಪಲುಗಳನ್ನೂ ಸೇವಿಸಬೇಕು ಎಂದು. ಈ ರೀತಿ ಊಟ ಬ್ಯಾಲೆನ್ಸ್ ಆಗಿ ತಿನ್ನುವುದರಿಂದ ಆರೋಗ್ಯದ ಸಮಸ್ಯೆಗಳು ಕಾಡೊಲ್ಲ. ದೇಹ ಸದೃಢವಾಗಿ, ಬುದ್ದಿ ಚುರುಕಾಗಿ, ಉತ್ತಮ ಜೀವನಕ್ಕೆ ದಾರಿ ಆಗುತ್ತೆ. ಆದರೆ ಇತ್ತೀಚೆಗೆ ಬೆಣ್ಣೆ ಹಣ್ಣು ಎಂದು ಕರೆಯುವ ಆವಕಾಡೊ ಹಣ್ಣಿನ ಮೇಲೆ ಸಂಶೋಧನೆಗಳನ್ನು ನಡೆಸಲಾಗಿದ್ದು ಈ ಹಣ್ಣನ್ನು ಪ್ರತಿ ದಿನ ತಿಂದರೆ ಅನೇಕ ಪ್ರಯೋಜನಗಳಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

ಹಿಂದೆ ಒಂದು ಮಾತಿತ್ತು, ದಿನಕ್ಕೆ ಒಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ ಎಂದು. ಆದರೆ ಅದು ಈಗ ಬದಲಾಗಿದೆ. ದಿನಕ್ಕೆ ಒಂದು ಆವಕಾಡೊ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂದು. ಅಷ್ಟರ ಮಟ್ಟಿಗೆ ಈ ಹಣ್ಣಿನಲ್ಲಿ ಪೋಷಕಾಂಶಗಳಿವೆ ಎಂದು ಸಂಶೋಧನೆ ತಿಳಿಸಿದೆ. ಪ್ರತಿ ದಿನವೂ ಒಂದು ಆವಕಾಡೊವನ್ನು ತಿನ್ನುವುದರಿಂದ ಒಳ್ಳೆಯ ನಿದ್ರೆ ಮತ್ತು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆಯಂತೆ.

ಆವಕಾಡೊ ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುತ್ತೆ

ಅಮೆರಿಕಾದ ಚಿಕಾಗೋದಲ್ಲಿ ಇತ್ತೀಚೆಗೆ ನಡೆದ ನ್ಯೂಟ್ರಿಷನ್ 2024ರ ಸಮ್ಮೇಳನದಲ್ಲಿ ಅವಕಾಡೊ ಮೇಲೆ ನಡೆದ ಸಂಶೋಧನಾ ವರದಿಯನ್ನು ಪ್ರಸ್ತಾಪಿಸಲಾಯಿತು. ಈ ಸಂಶೋಧನೆಯ ಪ್ರಕಾರ ಆವಕಾಡೊ ಹಣ್ಣು “ದೇಹದ ತೂಕದ ಮೇಲೆ ಪ್ರತಿಕೂಲ ಪರಿಣಾಮ ಬೀರದೆ ಒಟ್ಟು ಕೊಲೆಸ್ಟ್ರಾಲ್ ಮತ್ತು LDL-C ಅನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು” ಎಂದು ತಿಳಿದುಬಂದಿದೆ.

ಆವಕಾಡೊ ಹಣ್ಣಿನ ಸೇವನೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಮಗೆ ಈ ಹಿಂದಿನ ಸಂಶೋಧನೆಯಲ್ಲಿ ತಿಳಿದುಬಂದಿದೆ” ಎಂದು ಈ ಅಧ್ಯಯನದಲ್ಲಿ ಭಾಗಿಯಾಗಿದ್ದ ಪೆನ್ ಸ್ಟೇಟ್ ಯೂನಿವರ್ಸಿಟಿ ಪೋಸ್ಟ್‌ಡಾಕ್ಟರಲ್ ವಿದ್ವಾಂಸ ಡಾ. ಜಾನ್ಹವಿ ಜೆ. ದಮಾನಿ ಅವರು ತಿಳಿಸಿದ್ದಾರೆ.

ಇನ್ನು ಪ್ರಸ್ತುತ ಅಧ್ಯಯನಕ್ಕಾಗಿ, ಸಂಶೋಧಕರ ತಂಡವು ಹ್ಯಾಬಿಚುಯಲ್ ಡಯಟ್ ಮತ್ತು ಆವಕಾಡೊ ಹಣ್ಣಿನ ಪ್ರಯೋಜನದ ವಿಶ್ಲೇಷಣೆಗಾಗಿ ಪ್ರಯೋಗವನ್ನು ನಡೆಸಿದರು. ಇದರಲ್ಲಿ ರ್ಯಾಂಡಮ್ ಆಗಿ ಚೂಸ್ ಮಾಡಲಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಭಾಗವಹಿಸಿದವರಿಗೆ 6 ​​ತಿಂಗಳವರೆಗೆ ದಿನಕ್ಕೆ ಒಂದು ಆವಕಾಡೊವನ್ನು ಸೇವಿಸಲು ಹೇಳಲಾಗಿತ್ತು. ಅಥವಾ ಅವರ ಪ್ರತಿ ದಿನದ ಡಯೆಟ್ ಫುಡ್ ಜೊತೆಗೆ ತಿಂಗಳಿಗೆ ಎರಡರಂತೆ ಆವಕಾಡೊ ಸೇವನೆಗೆ ತಿಳಿಸಲಾಗಿತ್ತು.

ಈ ಪ್ರಯೋಗದಿಂದ ಸಿಕ್ಕ ಫಲಿತಾಂಶದಲ್ಲಿ ಅವಕಾಡೊ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ತಿಳಿದುಬಂದಿದೆ. ಕಿಬ್ಬೊಟ್ಟೆಯ ಬೊಜ್ಜು ಹೊಂದಿರುವ ಜನರ ಹೃದಯದ ಆರೋಗ್ಯದ ಮೇಲೆ ಪ್ರತಿ ದಿನ ಆವಕಾಡೊ ಸೇವನೆಯ ಅಭ್ಯಾಸ ಉತ್ತಮ ಪರಿಣಾಮ ಬೀರಿದೆ ಎಂದು ತಿಳಿದು ಬಂದಿದೆ.

ಹೃದಯರಕ್ತನಾಳದ ಆರೋಗ್ಯಕ್ಕೆ ಹೆಸರುವಾಸಿಯಾಗಿರುವ ಅಮೇರಿಕನ್ ಹಾರ್ಟ್ ಅಸೋಸಿಯೇಶನ್‌ ಲೈಫ್ಸ್​ನ ಕೆಲವು ಮಾರ್ಗದರ್ಶನಗಳನ್ನು ಬಳಸಿಕೊಂಡು ಪ್ರಯೋಗ ನಡೆಸಿದ ತಂಡ ಹ್ಯಾಬಿಚುಯಲ್ ಡಯಟ್ ಮತ್ತು ಆವಕಾಡೊ ಟ್ರಯಲ್ (Habitual Diet and Avocado Trial) ನಿಂದ 969 ಜನರನ್ನು ಪ್ರಯೋಗಕ್ಕೆ ಬಳಪಡಿಸಿತ್ತು. ಅವರ ಮಾದರಿಯನ್ನು ಮೌಲ್ಯಮಾಪನ ಮಾಡಿ ಹೃದಯರಕ್ತನಾಳದ ಆರೋಗ್ಯ, ಆಹಾರದ ಗುಣಮಟ್ಟ, ರಕ್ತದಲ್ಲಿನ ಗ್ಲೂಕೋಸ್, ರಕ್ತದೊತ್ತಡ, BMI, ರಕ್ತದ ಲಿಪಿಡ್‌ಗಳು, ದೈಹಿಕ ಚಟುವಟಿಕೆ ಮತ್ತು ನಿದ್ರೆಯ ಆರೋಗ್ಯದ ಬಗ್ಗೆ ಟೆಸ್ಟ್ ಮಾಡಲಾಯಿತು.

ಉತ್ತಮ ನಿದ್ರೆ, ಆರೋಗ್ಯಕ್ಕೆ ಆವಕಾಡೊ ಬೆಸ್ಟ್

ಇನ್ನು ಪ್ರಯೋಗದ ಮೂಲಕ ತಿಳಿದದ್ದು, ತಮ್ಮ ಡಯೆಟ್ ಫುಡ್ ಬಿಟ್ಟು ಆವಕಾಡೊ ಸೇವನೆಯಿಂದ ದೂರವಿರುವವರಲ್ಲಿ ಹೃದಯರಕ್ತನಾಳದ ಆರೋಗ್ಯ ಸಮಸ್ಯೆಗಳು ಅಷ್ಟಾಗಿ ಸುಧಾರಿಸಿಲ್ಲ ಎಂದು. ಪ್ರತಿ ದಿನ ಆವಕಾಡೊಗಳನ್ನು ಸೇವಿಸುವ ಜನರಲ್ಲಿ ನಿದ್ರೆಯ ಸಮಸ್ಯೆ, ಆಹಾರದ ಗುಣಮಟ್ಟ ಮತ್ತು ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಸುಧಾರಣೆಯಾಗಿವೆ.

ಆವಕಾಡೊ ಪೋಷಕಾಂಶದ ಭಂಡಾರ

ಆವಕಾಡೊ ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ. ಇದರಲ್ಲಿ ಸುಮಾರು 75%ನಷ್ಟು ಕೊಬ್ಬಿನಾಂಶವಿದ್ದು, ಅದರಲ್ಲಿ ಮೋನೊಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಬಾಳೆಹಣ್ಣಿಗಿಂತ 60% ಹೆಚ್ಚು ಪೊಟ್ಯಾಸಿಯಮ್ ಇದೆ. ಈ ಹಣ್ಣುಗಳಲ್ಲಿ ಅಪಾರ ಪ್ರಮಾಣದಲ್ಲಿ B ಜೀವಸತ್ವ ಇರುವುದಲ್ಲದೆ E ಜೀವಸತ್ವ ಮತ್ತು K ಜೀವಸತ್ವವೂ ಹೇರಳವಾಗಿದೆ. ಈ ಹಣ್ಣಿನಲ್ಲಿ 234 ಕ್ಯಾಲೋರಿ, 21 ಗ್ರಾಂ ಕೊಬ್ಬು, 3.1 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 14.7 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು, 2.7 ಗ್ರಾಂ ಪಾಲಿ ಅನ್ ಸಾಚುರೇಟೆಡ್, 10 ಮಿ ಗ್ರಾಂ ಸೋಡಿಯಂ ಇದೆ. 12 ಗ್ರಾಂ ಕಾರ್ಬೋಹೈಡ್ರೇಟ್, 10 ಗ್ರಾಂ ಡಯಟ್ರಿ ಫೈಬರ್, 1 ಗ್ರಾಂ ಸಕ್ಕರೆ, 2.9 ಗ್ರಾಂ ಪ್ರೋಟೀನ್, ಡಿವಿಯ 14% ಪೊಟ್ಯಾಸಿಯಮ್, ಡಿವಿಯ 17% ವಿಟಮಿನ್ ಸಿ, ಡಿವಿಯ 20% ಫೋಲೇಟ್ ಇದೆ.

ಹೃದಯದ ಆರೋಗ್ಯ ಅಷ್ಟೇ ಅಲ್ಲ ಬಹಳಷ್ಟು ಪ್ರಯೋಜನಗಳಿವೆ

ಆವಕಾಡೊಗಳು ಕರಗಬಲ್ಲ ಮತ್ತು ಕರಗದ ಆಹಾರದ ಫೈಬರ್‌ನ ಉತ್ತಮ ಮೂಲಗಳು. ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಹಾಗೂ ಹೃದ್ರೋಗ ಮತ್ತು ಟೈಪ್ 2 ಮಧುಮೇಹ, ಕ್ಯಾನ್ಸರ್​ನಂತಹ ದೀರ್ಘಕಾಲದ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಕಾರಿಯಾಗಿದೆ. ಆವಕಾಡೊಗಳು ವಿಟಮಿನ್ ಕೆ, ಇ, ಸಿ ಮತ್ತು ಬಿ ವಿಟಮಿನ್‌ಗಳನ್ನು ಹೊಂದಿವೆ. ಇದು ರೋಗನಿರೋಧಕ ಕಾರ್ಯ, ಮೂಳೆ ಆರೋಗ್ಯ, ಚರ್ಮದ ಆರೋಗ್ಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆವಕಾಡೊ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಾಂಶ ಅಧಿಕವಾಗಿದೆ. ಹಾಗೂ ಆರೋಗ್ಯ ಕಾರಿ ಕೊಬ್ಬು ಕೂಡ ಇರುವ ಕಾರಣ ಇದು ಹೊಟ್ಟೆಯ ಉರಿಯೂತ ತಗ್ಗಿಸುವುದು ಮತ್ತು ಆರೋಗ್ಯಕಾರಿ ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಕಾರಿಯಾಗಿದೆ.

ಆವಕಾಡೊ ಬೀಜಗಳಲ್ಲೂ ಅಡಗಿದೆ ಫೋಷಕಾಂಶದ ಶಕ್ತಿ

ಮತ್ತೊಂದೆಡೆ ಆವಕಾಡೊ ಹಣ್ಣನ್ನು ತಿಂದು ಬೀಜವನ್ನು ಬಿಸಾಕಲಾಗುತ್ತೆ. ಆದರೆ ಈ ಬೀಜಗಳಲ್ಲೂ ಆರೋಗ್ಯ ಪ್ರಯೋಜನಗಳು ಅಡಗಿವೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಆವಕಾಡೊ ಬೀಜಗಳನ್ನು ಬಿಸಾಕಬೇಡಿ. ಈ ಬೀಜಗಳನ್ನು ತಿನ್ನುವುದರಿಂದ ಯಾವುದೇ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಹಣ್ಣಿನ ತಿರುಳಿಗಿಂತ ಈ ಬೀಜಗಳು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಇದರಲ್ಲೂ ಕೆಲವು ಪೋಷಕಾಂಶಗಳಿವೆ ಎಂದು ಅಧ್ಯಯನಗಳಲ್ಲಿ ತಿಳಿದು ಬಂದಿದೆ.

ಕ್ಯಾಲಿಫೋರ್ನಿಯಾ ಆವಕಾಡೊ ಆಯೋಗದ ಮಾಹಿತಿಯ ಪ್ರಕಾರ, ಆವಕಾಡೊ ಬೀಜಗಳಲ್ಲಿ ಆಂಟಿಆಕ್ಸಿಡೆಂಟ್‌, ಆಂಟಿನ್ಯೂಟ್ರಿಯೆಂಟ್‌ ಅಧಿಕವಾಗಿದೆ. ಅವು ಎರಡು ರೀತಿಯ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಫೀನಾಲಿಕ್ ಸಂಯುಕ್ತಗಳು ಮತ್ತು ಇನ್ನೊಂದು ಪ್ರೊಸೈನಿಡಿನ್​ಗಳು. ಇವೆಲ್ಲವೂ ಒಟ್ಟಾಗಿ ಆವಕಾಡೊಗಳ ಒಟ್ಟು ನಿರೋಧಕ ಗುಣಲಕ್ಷಣಗಳಲ್ಲಿ 38% ವರೆಗೆ ಕೊಡುಗೆ ನೀಡುತ್ತವೆ. ಅಧ್ಯಯನಗಳ ಪ್ರಕಾರ, ಆವಕಾಡೊ ಬೀಜದ ಪುಡಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಇನ್ನು ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ, ಮಲಬದ್ಧತೆ ಕಡಿಮೆ ಮಾಡುವುದು, ಕರುಳಿನ ಆರೋಗ್ಯವನ್ನು ಸುಧಾರಿಸುವ ಈ ಬೀಜಗಳು ನಿರ್ದಿಷ್ಟ ಪ್ರಮಾಣದ ವಿಷವನ್ನು ಹೊಂದಿವೆ. ಈ ಬೀಜಗಳಲ್ಲಿ ಶಿಲೀಂಧ್ರನಾಶಕ ಟಾಕ್ಸಿನ್ ಪರ್ಸಿನ್ ಎಂಬ ಅಂಶ ಇದೆ. ಆವಕಾಡೊ ಬೀಜಗಳನ್ನು ಅತಿಯಾಗಿ ಸೇವಿಸುವುದರಿಂದ ವಾಂತಿ, ವಾಕರಿಕೆ ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಅವಕಾಡೊ ಬೀಜ ಸೇವನೆ ಹೇಗೆ?

ಅವಕಾಡೊ ಹಣ್ಣನ್ನು ಜ್ಯೂಸ್, ಬ್ರೆಡ್​ ಟೋಸ್​ಗೆ ಜಾಮ್​ನಂತೆ, ಸಲಾಡ್ ಅಥವಾ ಅಡುಗೆಯಲ್ಲಿ ಬಳಸಿ ಸೇವಿಸಲಾಗುತ್ತೆ. ಆದರೆ ಅದರ ಬೀಜಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಅನೇಕರಿಗೆ ಇಳಿದಿಲ್ಲ.  ಬಹುತೇಕರು ತಮ್ಮದೇ ಶೈಲಿಯಲ್ಲಿ  ಈ  ಹಣ್ಣಿನ ಬೀಜಗಳನ್ನು ಸೇವಿಸುತ್ತಾರೆ.  ಬೀಜಗಳನ್ನು ಒಣಗಿಸಿ ಅದರಿಂದ ಎಣ್ಣೆಯನ್ನು ಹೊರತೆಗೆದು ಬಳಸಬಹುದು. ಅಥವಾ ಬೀಜವನ್ನು ಒಣಗಿಸಿ ಅಡುಗೆಗೆ ಬಳಸಬಹುದು. ಆವಕಾಡೊ ಬೀಜಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಇನ್ನು ಈ ಬೀಜಗಳಿಂದ ಆವಕಾಡೊ ಮರವನ್ನೂ ಬೆಳೆಸಬಹುದು. ಆದರೆ ಬಹುತೇಕರು ಅಪಾಯಕಾರಿ ಎಂದು ಬೀಜವನ್ನು ಬಳಸುವುದರಿಂದ ದೂರ ಉಳಿದಿದ್ದಾರೆ.

ಆವಕಾಡೊ ಗರ್ಭಿಣಿಯರಿಗೆ ಅಪಾಯಕಾರಿನಾ?

ಗರ್ಭಿಣಿಯರು ಹೆಚ್ಚು ಸೂಕ್ಷ್ಮ ಹಾಗೂ ಹೊಟ್ಟೆಯಲ್ಲಿ ಮಗು ಇರುತ್ತೆ ಅಪಾಯ ಎಂಬ ಕಾರಣಕ್ಕೆ ಒಂದಷ್ಟು ಪದಾರ್ಥಗಳನ್ನು ಗರ್ಭಿಣಿಯರಿಗೆ ನೀಡಲ್ಲ. ಆದರೆ ಆವಕಾಡೊಗಳು ಪೌಷ್ಟಿಕಾಂಶ-ಭರಿತ ಸಂಯೋಜನೆಯಿಂದಾಗಿ ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿ ಎಂದು ಡಾ ಉಮಾ ಅವರು ತಿಳಿಸಿದ್ದಾರೆ.

ಅವಕಾಡೊದಲ್ಲಿರುವ ಮೊನೊಸಾಚುರೇಟೆಡ್, ಆರೋಗ್ಯಕರ ಕೊಬ್ಬು ಭ್ರೂಣದ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿರುವ ವಿಟಮಿನ್‌ಗಳನ್ನು ತಾಯಿ ಆರೋಗ್ಯವಾಗಿಡಲು ಸಹಾಯಕವಾಗಿವೆ. ಬೆಳೆಯುತ್ತಿರುವ ಮಗುವಿನಲ್ಲಿ ನರ ಕೊಳವೆಯ ದೋಷಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಜೊತೆಗೆ ಗರ್ಭಾವಸ್ಥೆಯಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆಯನ್ನು ಸಹ ಇದು ತಡೆಯುತ್ತೆ ಎಂದರು.

ಆವಕಾಡೊ ಅತಿಯಾದ ಸೇವನೆ ಸಮಸ್ಯೆಗೂ ಕಾರಣ

ಲ್ಯಾಟೆಕ್ಸ್ ಅಲರ್ಜಿ ಇರುವವರು ಆವಕಾಡೊ ಸೇವನೆಯಿಂದ ಅಡ್ಡ ಪರಿಣಾಮಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಇದು ಬಾಯಿಯ ತುರಿಕೆ ಅಥವಾ ಊತಕ್ಕೆ ಕಾರಣವಾಗುತ್ತದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಆವಕಾಡೊ ಅತಿಯಾದ ಸೇವನೆಯು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ಬೇರೆ ಆಹಾರದಂತೆಯೇ, ಆವಕಾಡೊಗಳ ಅತಿಯಾದ ಸೇವನೆಯು ಆಹಾರದ ಸಮತೋಲನವನ್ನು ಅಡ್ಡಿಪಡಿಸುತ್ತದೆ ಎಂದು ತಿಳಿದು ಬಂದಿದೆ.

ಆವಕಾಡೊ ಪ್ರಾಣಿಗಳಿಗೆ ವಿಷಕಾರಿ?

ಕೆಲವು ತಜ್ಞರು ಹೇಳುವ ಪ್ರಕಾರ, ಬೆಕ್ಕು, ನಾಯಿ, ಕರು, ಆಡು, ಮೊಲ, ಇಲಿ, ಪಕ್ಷಿ, ಮೀನು ಮತ್ತು ಕುದುರೆ ಮೊದಲಾದ ಜೀವಿಗಳು ಆವಕಾಡೊ ಎಲೆ, ತೊಗಟೆ, ಸಿಪ್ಪೆ ಅಥವಾ ಬೀಜಗಳನ್ನು ತಿಂದರೆ ಅವುಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Wed, 31 July 24