
ದಪ್ಪವಾಗುವ ಭಯದಲ್ಲಿ ಕಡಿಮೆ ತಿನ್ನುವವರನ್ನು ನೀವು ನೋಡಿರಬಹುದು. ಆದರೂ ಕೂಡ ಅವರ ತೂಕ ಕಡಿಮೆಯಾಗುವುದಿಲ್ಲ ಬದಲಾಗಿ ಹೆಚ್ಚುತ್ತಲೇ ಇರುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವ ಆಸೆ ಇರುವವರು ಸಾಮಾನ್ಯವಾಗಿ ತಮ್ಮ ಆಹಾರದ ಮೇಲೆ ಹೆಚ್ಚಿನ ನಿಯಂತ್ರಣ ಇಟ್ಟುಕೊಂಡಿರುತ್ತಾರೆ. ಜೊತೆಗೆ ತುಂಬಾ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡುತ್ತಾರೆ, ಇಷ್ಟಾದರೂ ಕೂಡ ಅವರ ತೂಕ (Weight) ನಿಯಂತ್ರಣದಲ್ಲಿರುವುದಿಲ್ಲ. ಇಂತಹ ಸಮಸ್ಯೆ ಇದ್ದರೆ, ಅದನ್ನು ಎಂದಿಗೂ ಹಗುರವಾಗಿ ಪರಿಗಣಿಸಬೇಡಿ. ಇದು ದೇಹದಲ್ಲಿನ ಕೆಲವು ಕಾಯಿಲೆಗಳ ಲಕ್ಷಣವಾಗಿರಬಹುದು. ಅಷ್ಟೇ ಅಲ್ಲ, ಚಯಾಪಚಯ ಕ್ರಿಯೆಗೆ ನೇರವಾಗಿ ಸಂಬಂಧಿಸಿರಬಹುದು. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣಗಳೇನು, ಯಾಕೆ ಈ ರೀತಿಯ ಸಮಸ್ಯೆ ಉಂಟಾಗುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ರಾಜೀವ್ ಗಾಂಧಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಜೈನ್ ಅವರು ಹೇಳುವ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದರೂ ಕೂಡ ತೂಕ ಹೆಚ್ಚಾಗುವುದು ಅನೇಕರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಅದರಲ್ಲಿಯೂ 40 ವರ್ಷದ ನಂತರ ಈ ರೀತಿಯಾಗುವುದು ಹೆಚ್ಚಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಿಧಾನ ಚಯಾಪಚಯ ಕ್ರಿಯೆ. ಒಬ್ಬ ವ್ಯಕ್ತಿಯ ದೇಹವು ಕ್ಯಾಲೊರಿಗಳನ್ನು ಸುಡುವಾಗ ತೆಗೆದುಕೊಳ್ಳುವ ಸಮಯ ನಿಧಾನವಾಗುವುದರಿಂದ ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತದೆ. ಹಾಗಾಗಿ ಏನೆ ತಿಂದರೂ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ, ಇದು ಬೊಜ್ಜು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಡಾ. ಅಜಿತ್ ಹೇಳುವ ಪ್ರಕಾರ, ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿದರೂ ಕೂಡ ತೂಕ ಹೆಚ್ಚಾಗುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ಇಂತಹ ಸಮಸ್ಯೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ ಪಿಸಿಓಎಸ್, ಋತುಬಂಧ ಅಥವಾ ಗರ್ಭಧಾರಣೆಯ ನಂತರ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳಿಂದಾಗಿ ತೂಕ ಹೆಚ್ಚಾಗಬಹುದು. 40 ವರ್ಷದ ನಂತರ ಈ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗುತ್ತವೆ. ವಯಸ್ಸು ಹೆಚ್ಚಾದಂತೆ, ತೂಕ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ ಜ್ಯೂಸ್ ಕುಡಿಯಿರಿ, ನಿಮ್ಮ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ
ಸಾಮಾನ್ಯವಾಗಿ ಕೆಲವರು ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದಿಲ್ಲ. ಅಂದರೆ, ಅಗತ್ಯಕ್ಕಿಂತ ಕಡಿಮೆ ತಿನ್ನುತ್ತಾರೆ ಅಥವಾ ದೀರ್ಘಕಾಲದವರೆಗೆ ಹಸಿವಿನಿಂದ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ, ದೇಹ ಕೊಬ್ಬನ್ನು ಸುಡುವುದಿಲ್ಲ ಬದಲಾಗಿ ಅದನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ, ಹಾಗಾಗಿ ಈ ರೀತಿಯ ಅಭ್ಯಾಸಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ಸ್ಟೀರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿಯೂ ಕೂಡ ಈ ರೀತಿಯ ಸಮಸ್ಯೆ ಕಂಡುಬರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ