ಶರವೇಗದಲ್ಲಿ ಮುನ್ನುಗ್ಗುತ್ತಿರುವ ಆಧುನೀಕರಣ ಮತ್ತು ತಂತ್ರಜ್ಞಾನದಲ್ಲಿ ಮಹತ್ತರವಾದ ಬದಲಾವಣೆಗಳು ಆಗುತ್ತಿವೆ. ಆಫ್ಟರ್ ಕೋವಿಡ್ ಎರಾ ಅನ್ನುವಂತೆ ಕೊರೊನಾ ನಂತರ ಈ ಬದಲಾವಣೆಗಳು ಮತ್ತಷ್ಟು ಹೆಚ್ಚುತ್ತಿವೆ. ಆದರೆ ಇದು ಅಭಿವೃದ್ಧಿ ತರುವುದರ ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನೂ ತಂದೊಡುತ್ತಿದೆ. ಇಂದಿನ ಯುಗದಲ್ಲಿ ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಇದಕ್ಕೆ ತುತ್ತಾಗುತ್ತಿರುವುದು ಮತ್ತಷ್ಟು ಆತಂಕಕಾರಿಯಾಗಿದೆ.
ಈ ಕೊರೊನೋತ್ತರ ಕಾಲದಲ್ಲಿ ಚಿಕ್ಕ ಚಿಕ್ಕ ಮಕ್ಕಳು, ಯುವಕರು ಅಥವಾ ಹಿರಿಯರೂ ಸೇರಿದಂತೆ ಎಲ್ಲರೂ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಮತ್ತು ಟ್ಯಾಬ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಜೋತುಬಿದ್ದಿದ್ದಾರೆ. ಇವುಗಳನ್ನು ಗಂಟೆಗಟ್ಟಲೆ ಬಳಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಕುತ್ತಿಗೆ ನೋವಿನ ಸಮಸ್ಯೆಗಳು ವಿಶೇಷವಾಗಿ ಕಾಡತೊಡಗಿವೆ. ಈ ಎಲೆಕ್ಟ್ರಾನಿಕ್ ಸಾಧನಗಳ ಸಮ್ಮುಖದಲ್ಲಿ ನೀವು ಹೆಚ್ಚು ತಲೆ ಬಾಗಿದಷ್ಟೂ ನಿಮ್ಮ ಕುತ್ತಿಗೆ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಎಂದು ಎಚ್ಚರಿಸಿವೆ ಅಧ್ಯಯನಗಳು. ಈ ಕಾರಣದಿಂದಾಗಿ, ಕುತ್ತಿಗೆಯಲ್ಲಿ ಕಶೇರುಖಂಡಗಳ ನಡುವಿನ ಡಿಸ್ಕ್ ಗಳು ಮತ್ತು ಅಲ್ಲಿನ ಸಣ್ಣ ಕೀಲುಗಳು ತ್ವರಿತವಾಗಿ ಕ್ಷೀಣಿಸುತ್ತವೆ. ಇದರಿಂದ ಕುತ್ತಿಗೆ ನೋವು ಉಲ್ಬಣಗೊಳ್ಳುತ್ತದೆ.
ಏನ್ಮಾಡಬೇಕು?
ಕೆಲವರು ಸೌಮ್ಯವಾದ ನೋವನ್ನು ಅನುಭವಿಸಿದರೆ ಇನ್ನು ಕೆಲವರು ಒಳಗೆ ಏನೋ ನೋಯುತ್ತಿರುವಂತೆ ತೀವ್ರವಾದ ನೋವಿನ ಸೂಚನೆಗಳನ್ನು ಹೊಂದಿರುತ್ತಾರೆ. ಹಿಂದೆ ವಯಸ್ಸಾದವರಿಗೆ ಮಾತ್ರ ಕುತ್ತಿಗೆ ನೋವು ಬರುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಎಲ್ಲರೂ ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ.
ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗೆ ಮಣೆ ಹಾಕದೆ, ಕುತ್ತಿಗೆ ನೋವನ್ನು ತಡೆಯುವುದು ಉತ್ತಮ ಎನ್ನುತ್ತಾರೆ ತಜ್ಞರು. ಕುತ್ತಿಗೆಯನ್ನು ತುಂಬಾ ಕೆಳಕ್ಕೆ ಬಗ್ಗಿಸದಂತೆ ಎಚ್ಚರಿಕೆ ವಹಿಸಬೇಕು. ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಬೇಕು. 10-15 ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸಿ. ಫೋನ್ ಅನ್ನು ಮೇಜಿನ ಮೇಲಿರುವ ಮೊಬೈಲ್ ಸ್ಟ್ಯಾಂಡ್‌ಗೆ ಜೋಡಿಸಿ ಬಳಸಬಹುದು. ಈ ಮುನ್ನೆಚ್ಚರಿಕೆಗಳು ಕುತ್ತಿಗೆ ನೋವಿನ ಅಪಾಯವನ್ನು ಕಡಿಮೆ ಮಾಡಬಹುದು.
Also read in Telugu Click here