ವಯಸ್ಸಾಗುತ್ತಾ ಹೋದ ಹಾಗೆ ದೇಹ ದುರ್ಬಲವಾಗುತ್ತಾ ಹೋಗುತ್ತದೆ. ಆದ್ದರಿಂದ ಹಿರಿಯರ ಆಹಾರ ಕ್ರಮದಲ್ಲಿ ಕೆಲವು ಪೋಷಕಾಂಶ ಭರಿತ ಆಹಾರವನ್ನು ಸೇರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ದೇಹವು ವಯಸ್ಸಾದಂತೆ, ಆಂತರಿಕ ವ್ಯವಸ್ಥೆಗಳು ಸಹ ವಯಸ್ಸಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ. ದುರ್ಬಲ ರೋಗನಿರೋಧಕ ಶಕ್ತಿ, ದುರ್ಬಲ ಮೂಳೆ ಆರೋಗ್ಯ, ಜೀರ್ಣಕಾರಿ ಸಮಸ್ಯೆಗಳು ಮತ್ತು ಇತರ ವಯೋಸಹಜ ಸಮಸ್ಯೆಗಳು ವಯಸ್ಸಾದ ಜನರು ಬಳಲುತ್ತಿರುವ ಅನೇಕ ಆರೋಗ್ಯ ಸಮಸ್ಯೆಗಳಾಗಿವೆ. ಆದ್ದರಿಂದ ವಯಸ್ಸಾಗುತ್ತಾ ಹೋದ ಹಾಗೆ ನಿಮ್ಮ ಆಹಾರ ಕ್ರಮ ಯಾವ ರೀತಿ ಇರಬೇಕು ಎಂದು ಮಂಗಳೂರಿನ ಹಿರಿಯ ಆಹಾರ ತಜ್ಞರಾದ ಅರುಣಾ ಮಲ್ಯ ಅವರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಆಹಾರ ಕ್ರಮದಲ್ಲಿ ಧಾನ್ಯಗಳನ್ನು ಸೇರಿಸಿ:
ಸಂಸ್ಕರಿಸಿದ ಆಹಾರಗಳ ಬದಲಾಗಿ ಸಂಪೂರ್ಣ ಧಾನ್ಯವನ್ನು ಆಯ್ಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಸಂಸ್ಕರಿಸಿದ ಆಹಾರಗಳು ಸಾಮಾನ್ಯವಾಗಿ ಮಲಬದ್ಧತೆಗೆ ಕಾರಣವಾಗುತ್ತವೆ ಏಕೆಂದರೆ ಅವುಗಳು ಫೈಬರ್ ಅಂಶದ ಕೊರತೆಯನ್ನು ಹೊಂದಿರುತ್ತವೆ. ಸಂಪೂರ್ಣ ಗೋಧಿ ಬ್ರೆಡ್‌ಗಳು, ಬಿಸ್ಕತ್ತುಗಳು, ಪಾಸ್ಟಾ, ಬಲವರ್ಧಿತ ಧಾನ್ಯಗಳು, ಗೋಧಿ, ರಾಗಿ, ಒಣ ಹಣ್ಣು ಅಥವಾ ಡ್ರೈಫ್ರೂಟ್ಸ್ ಸೇವಿಸಿ ಎಂದು ತಜ್ಞರು ಹೇಳುತ್ತಾರೆ.
ಪ್ರೋಟೀನ್ ಭರಿತ ಆಹಾರಗಳು:
ಕೋಳಿ ಮಾಂಸ, ಮೀನು, ಬೇಯಿಸಿದ ಬೀನ್ಸ್, ಮೊಟ್ಟೆಯ ಬಿಳಿಭಾಗ,ಪೀನಟ್ ಬಟರ್, ಬೀಜಗಳು ಮತ್ತು ಎಣ್ಣೆಕಾಳುಗಳನ್ನು ತಿನ್ನಲು ಪ್ರಯತ್ನಿಸಿ. ಈ ಆಹಾರಗಳು ವಯಸ್ಸಾಗುವಿಕೆ ಕಾಲದಲ್ಲಿ ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಾಯಕವಾಗಿದೆ.
ಕ್ಯಾಲ್ಸಿಯಂ ಭರಿತ ಆಹಾರಗಳು:
ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಲು ಕ್ಯಾಲ್ಸಿಯಂ ಅಗತ್ಯವಿದೆ. “ಕೆನೆರಹಿತ ಹಾಲು, ಮೊಸರು, ಚೀಸ್, ಸೋಯಾಮಿಲ್ಕ್, ತೋಫು, ಬಾದಾಮಿ, ಕೋಸುಗಡ್ಡೆ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿ. ದೇಹದಲ್ಲಿ ವಿಟಮಿನ್ ಡಿ ಹೆಚ್ಚಿಸಿಕೊಳ್ಳಲು ಬೆಳಗ್ಗಿನ ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಉತ್ತಮ ಅಭ್ಯಾಸ.
ಇದನ್ನೂ ಓದಿ: ಪ್ಲಾಸ್ಟಿಕ್ ಕಪ್ಗಳಂತೆ ಪೇಪರ್ ಕಪ್ಗಳು ಕೂಡ ಅಪಾಯಕಾರಿ, ಹೊಸ ಸಂಶೋಧನೆ ನೀಡಿದೆ ಎಚ್ಚರಿಕೆ
ಫೈಬರ್ನ ಉತ್ತಮ ಮೂಲ:
ಫೈಬರ್ ಮುಖ್ಯವಾಗಿ ತರಕಾರಿಗಳು, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿಂದ ಬರುತ್ತದೆ. ಕಚ್ಚಾ ಮತ್ತು ಬೇಯಿಸಿದ ತರಕಾರಿಗಳು, ವೆಜ್ ಸ್ಮೂಥಿಗಳು, ವೆಜ್ ಸೂಪ್‌ಗಳು, ತಾಜಾ ಹಣ್ಣುಗಳನ್ನು ಸೇರಿಸಲು ಪ್ರಯತ್ನಿಸಿ. ಆಹಾರದಲ್ಲಿ ವಿವಿಧ ಬಣ್ಣದ ತರಕಾರಿ ಮತ್ತು ಹಣ್ಣುಗಳನ್ನು ಬಳಸಲು ಪ್ರಯತ್ನಿಸಿ. ಮಲಬದ್ಧತೆಯನ್ನು ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಲನಶೀಲತೆಯ ಕೊರತೆ, ಅಸಮರ್ಪಕ ಕ್ಯಾಲೋರಿಗಳು ಮತ್ತು ಆಹಾರದಲ್ಲಿ ಫೈಬರ್ ಕೊರತೆ ಈ ಸಮಸ್ಯೆಗೆ ಕಾರಣವಾಗಿರಬಹುದು.
ದೇಹಕ್ಕೆ ಸಾಕಷ್ಟು ನೀರು ಅಗತ್ಯ:
ದಿನಕ್ಕೆ ಕನಿಷ್ಠ 2ಲೀಟರ್ ನೀರು ಕುಡಿಯಲು ಪ್ರಯತ್ನಿಸಿ. ಹಿರಿಯರು ಮಲಬದ್ಧತೆ, ನಿರ್ಜಲೀಕರಣ, ಮರುಕಳಿಸುವ ಮೂತ್ರನಾಳದ ಸೋಂಕು (UTI) ಗೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಾದಂತೆ ಬಾಯಾರಿಕೆ ಕಡಿಮೆಯಾಗುತ್ತದೆ. ಇದರಿಂದ ಕಡಿಮೆ ನೀರು ಕುಡಿಯುತ್ತಾರೆ ಮತ್ತು ಮೂತ್ರದ ಅಸಂಯಮದ ಭಯ ಯಾವಾಗಲೂ ಇರುತ್ತದೆ. ಆದರೆ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ನೀರು ತುಂಬಾ ಅಗತ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: