
ಸಾಮಾನ್ಯವಾಗಿ ಐ ಡ್ರಾಪ್ (Eye Drop) ಬಗ್ಗೆ ನೀವು ಕೇಳಿರಬಹುದು. ಕಣ್ಣಿನಲ್ಲಿ (Eye) ಕಂಡು ಬರುವ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಉಪಯೋಗ ಮಾಡಲಾಗುತ್ತದೆ. ಆದರೆ ಅನೇಕ ಬಾರಿ, ವೈದ್ಯರು ನೀಡುವ ಕಣ್ಣಿಗೆ ಬಿಡುವ ಹನಿ ಅಥವಾ ಐ ಡ್ರಾಪ್ ಗಳನ್ನು ಯಾವ ರೀತಿ ಉಪಯೋಗ ಮಾಡಬೇಕು ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಜೊತೆಗೆ ಅವುಗಳನ್ನು ಹೇಗೆ ಹಾಕಬೇಕೆಂದು ಕೂಡ ಯೋಚಿಸುವುದಿಲ್ಲ. ಕಣ್ಣುಗಳಿಗೆ ಎರಡು ಹನಿ ಹಾಕಿದರೆ ಸಾಕು ಎಂದು ನಮಗೆ ನಾವೇ ಅಂದುಕೊಂಡಿರುತ್ತೇವೆ. ಇದು ನಾವು ಮಾಡುವ ದೊಡ್ಡ ತಪ್ಪು ಎಂದರೆ ನೀವು ನಂಬುತ್ತೀರಾ? ಹೌದು. ಹೆಚ್ಚಿನ ಜನರಿಗೆ ಕಣ್ಣಿಗೆ ಬಿಡುವಂತಹ ಈ ಹನಿಗಳನ್ನು ಎಷ್ಟು ಹಾಕಬೇಕು, ಯಾವ ರೀತಿ ಉಪಯೋಗ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಆದರೆ ಕಣ್ಣಿನ ಶಸ್ತ್ರಚಿಕಿತ್ಸಕ ಡಾ. ಭಾನು ಹಂತ ಹಂತದ ವಿಧಾನವನ್ನು ವಿವರಿಸಿದ್ದು ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ.
ಕೈ ತೊಳೆದು ಐ ಡ್ರಾಪ್ ಹಾಕಿ: ಹೆಚ್ಚಿನ ಜನರು ಕೈ ತೊಳೆಯದೆಯೇ ಐ ಡ್ರಾಪ್ ಹಾಕಲು ಹೋಗುತ್ತಾರೆ. ಆದರೆ ಇದು ಸರಿಯಲ್ಲ. ಐ ಡ್ರಾಪ್ ಹಾಕುವಾಗ ನಮ್ಮ ಕೈಗಳು ಕಣ್ಣುಗಳನ್ನು ಸ್ಪರ್ಶಿಸಬೇಕಾಗುತ್ತದೆ ಆ ಸಮಯದಲ್ಲಿ ಕೈಗಳಲ್ಲಿರುವ ಸೋಂಕು ಕಣ್ಣುಗಳಿಗೆ ಹೋಗುವ ಅಪಾಯವಿದೆ ಮಾತ್ರವಲ್ಲ ಕೆಲವರಲ್ಲಿ ಇದು, ಕಣ್ಣುಗಳ ಉರಿಗೂ ಕಾರಣವಾಗಬಹುದು ಜೊತೆಗೆ ಕಣ್ಣುಗಳಿಗೆ ಹಾನಿಯಾಗುವಂತಹ ಅಪಾಯ ಹೆಚ್ಚಾಗಿರಬಹುದು. ನಮ್ಮ ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಐ ಡ್ರಾಪ್ ಹಾಕುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯುವುದು ಬಹಳ ಅವಶ್ಯಕ.
ಒಂದಕ್ಕಿಂತ ಹೆಚ್ಚು ಹನಿ ಹಾಕಬೇಡಿ: ಡಾ. ಭಾನು ಅವರು ಹೇಳುವ ಪ್ರಕಾರ, ಯಾವಾಗಲೂ ಕಣ್ಣಿಗೆ ಐ ಡ್ರಾಪ್ ಹಾಕುವಾಗ ಒಂದೇ ಹನಿ ಹಾಕಬೇಕು. ನೀವು ಒಂದಕ್ಕಿಂತ ಹೆಚ್ಚು ಹನಿ ಹಾಕಿದರೆ, ಅದು ಪ್ರಯೋಜನಕಾರಿಯಾಗಿರುವುದಿಲ್ಲ. ಜೊತೆಗೆ ನಿಮ್ಮ ವೈದ್ಯರು ಎರಡೂ ಕಣ್ಣುಗಳಿಗೆ ಐ ಡ್ರಾಪ್ ಹಾಕಲು ಹೇಳಿದ್ದರೆ ನೀವು ಒಂದು ಕಣ್ಣಿಗೆ ಹಾಕಿದ ನಂತರ ಮತ್ತೊಂದು ಕಣ್ಣಿಗೆ ಹಾಕಬೇಕು. ಯಾವುದೇ ಕಾರಣಕ್ಕೂ ಒಟ್ಟಿಗೆ ಎರಡು ಕಣ್ಣುಗಳಿಗೆ ಒಮ್ಮೆಲೇ ಹಾಕಬಾರದು. ಇದು ಒಳ್ಳೆಯದಲ್ಲ.
ಇದನ್ನೂ ಓದಿ: ಕಣ್ಣಿಗೆ ಧೂಳು, ಕಸ ಬಿದ್ದರೆ ಉಜ್ಜಲು ಹೋಗಬೇಡಿ, ಅದರ ಬದಲು ಹೀಗೆ ಮಾಡಿ
ಕಣ್ಣಿಗೆ ಐ ಡ್ರಾಪ್ ಹಾಕಿ ಒಂದು ನಿಮಿಷ ಕಣ್ಣು ಮುಚ್ಚಿ: ಸಾಮಾನ್ಯವಾಗಿ ಕಣ್ಣಿಗೆ ಐ ಡ್ರಾಪ್ ಹಾಕುವಾಗ ಮೊದಲು ಮೇಲಕ್ಕೆ ನೋಡಿ ಕೈಯಿಂದ ಕೆಳಗಿನ ಕಣ್ಣುರೆಪ್ಪೆಯನ್ನು ಕೆಳಗೆ ಎಳೆದು ನಂತರ ನಿಧಾನವಾಗಿ ಐ ಡ್ರಾಪ್ ಗಳನ್ನು ನಿಮ್ಮ ಕಣ್ಣಿಗೆ ಹಾಕಿ. ಬಳಿಕ ಡಾ. ಭಾನು ಅವರು ಹೇಳುವಂತೆ ಕನಿಷ್ಠ ಒಂದು ನಿಮಿಷ ಕಣ್ಣು ಮುಚ್ಚಿಡಿ. ಈ ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ವಿಧಾನಗಳು ನಿಮಗೆ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ