ಕಣ್ಣಿಗೆ ಕಸ ಬಿದ್ದರೆ ತಕ್ಷಣ ಕಣ್ಣನ್ನು ಉಜ್ಜಬೇಡಿ, ಈ ಕೆಲಸ ಮೊದ್ಲು ಮಾಡಿ
ವಾಹನದಲ್ಲಿ ಚಲಿಸುವಾಗ ಅಥವಾ ಹೀಗೆ ಸುಮ್ಮನೆ ಕುಳಿತುಕೊಂಡಾಗ ಗಾಳಿಗೆ ಏಕಾಏಕಿ ಧೂಳಿನ ಕಣಗಳು ಕಣ್ಣಿನ ಒಳಗೆ ಸೇರಿಕೊಳ್ಳುತ್ತವೆ. ಆ ತಕ್ಷಣವೇ ಹೆಚ್ಚಿನವರು ಕಣ್ಣನ್ನು ಜೋರಾಗಿ ಉಜ್ಜಿಕೊಳ್ಳುತ್ತಾರೆ. ಹೀಗೆ ಮಾಡಿದರೆ ಧೂಳಿನ ಕಣಗಳು ಅಥವಾ ಕಸವು ಕಣ್ಣಿನಲ್ಲೇ ಹರಡಿಕೊಂಡು ಕಣ್ಣು ಕೆಂಪಾಗುತ್ತದೆ. ಕೆಲವರು ಆ ತಕ್ಷಣವೇ ನೀರು ಚಿಮುಕಿಸುತ್ತಾರೆ, ಆದರೆ ಕಣ್ಣಿಗೆ ಕಸಬಿದ್ದ ತಕ್ಷಣ ಈ ಕೆಲವು ಸಲಹೆ ಪಾಲಿಸುವುದು ಒಳ್ಳೆಯದು. ಹಾಗಾದ್ರೆ ಕಣ್ಣಿಗೆ ಧೂಳಿನ ಕಣಗಳು ಬಿದ್ದರೆ ತಕ್ಷಣವೇ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಕಣ್ಣು (Eyes ) ಬಹಳ ಸೂಕ್ಷ್ಮವಾದ ಅಂಗ. ಒಂದು ಸಣ್ಣ ಧೂಳಿನ ಕಣಗಳು ಕಣ್ಣೊಳಗೆ ಸೇರಿಕೊಂಡರೆ ಚುಚ್ಚುವಂತಹ ಅನುಭವವಾಗುತ್ತದೆ. ಕಣ್ಣಿನಲ್ಲಿ ಉರಿ, ವಿಪರೀತ ನೋವು, ಅಸಹನೆಯುಂಟಾಗುತ್ತದೆ. ಕೆಲವೊಮ್ಮೆ ಕಸ ಬಿದ್ದ ತಕ್ಷಣ ಅತಿಯಾದ ಉಜ್ಜುವಿಕೆಯಿಂದಾಗಿ ಕಣ್ಣು ಕೆಂಪಾಗಿ ವೈದ್ಯರನ್ನು ಭೇಟಿಯಾಗಲೇಬೇಕಾಗುತ್ತದೆ. ಆದರೆ ಹೆಚ್ಚಿನವರು ಕಣ್ಣಿಗೆ ಕಸ ಅಥವಾ ಧೂಳಿನ ಕಣ (Dust) ಬಿದ್ದಾಗ ಅದನ್ನು ಹೊರ ತೆಗೆಯಲು ಕಣ್ಣನ್ನು ಸ್ವಚ್ಛ ನೀರಿನಿಂದ ತೊಳೆಯುತ್ತಾರೆ, ಕೆಲವೊಮ್ಮೆ ಏನೇ ಮಾಡಿದರೂ ಧೂಳಿನ ಕಣಗಳು ಹೋಗುವುದೇ ಇಲ್ಲ. ಈ ಸಮಸ್ಯೆ ನಿವಾರಣೆಗೆ ಕೆಲವು ಟಿಪ್ಸ್ ಇಲ್ಲಿದೆ.
ಕಣ್ಣಿಗೆ ಬಿದ್ದ ಕಸ ಹೊರ ತೆಗೆಯಲು ಇಲ್ಲಿದೆ ಟಿಪ್ಸ್
- ಕಣ್ಣಿನಲ್ಲಿ ಕಸ ಬಿದ್ದಾಗ ಅದನ್ನು ತೆಗೆಯಲು ಕಣ್ಣಿಗೆ ನೀರು ಚುಮುಕಿಸಿ, ಬಿರುಸಿನಿಂದ ನೀರು ಚುಮುಕಿಸಿದರೆ ಕಣ್ಣೊಳಗಿರುವ ಧೂಳಿನ ಕಣ ಅಥವಾ ಕಸ ಹೊರಗೆ ಬರುತ್ತದೆ.
- ಧೂಳಿನ ಕಣ ದೊಡ್ಡದಾಗಿದ್ದರೆ ನಲ್ಲಿಯ ನೀರು ನಿಧಾನವಾಗಿ ತೆರೆದ ಕಣ್ಣುಗಳ ಮೂಲಕ ಹರಿಯುವಂತೆ ಮಾಡಬೇಕು. ಹೀಗೆ ಮಾಡಿದರೆ ಕಣ್ಣಿನೊಳಗೆ ಇರುವ ಕಸವು ಹೊರಗೆ ಬರುತ್ತದೆ.
- ಕಣ್ಣಿನಲ್ಲಿ ಕಸ ಬಿದ್ದರೆ ಪಟಪಟನೇ ಕಣ್ಣು ಮಿಟುಕಿಸುವುದರಿಂದ ಸಣ್ಣ ಧೂಳಿನ ಕಣಗಳು ಅಥವಾ ಕಸವಿದ್ದರೆ ಹೊರಗೆ ಬರುತ್ತದೆ.
- ದೊಡ್ಡ ಧೂಳಿನ ಕಣಗಳಿದ್ದರೆ ಕಣ್ಣನ್ನು ಮಿಟುಕಿಸಿದ ತಕ್ಷಣವೇ ಕಣ್ರೆಪ್ಪೆಯ ಅಡಿಗೆ ತೂರಿಬಿಡುತ್ತದೆ. ಇಲ್ಲವಾದರೆ ಕಣ್ಣಿಗೆ ಕೆಳಭಾಗದಲ್ಲಿ ಬಂದು ನಿಲ್ಲುತ್ತದೆ. ಹೀಗಾದಾಗ ಕಣ್ಣಿನ ರೆಪ್ಪೆಯನ್ನು ಅಗಲಿಸಿ, ತೆಳುವಾದ ಹತ್ತಿ ಬಟ್ಟೆಯಿಂದ ಕಸ ಅಥವಾ ಧೂಳಿನ ಕಣವನ್ನು ಹೊರಗೆ ತೆಗೆಯಿರಿ.
- ಒಂದು ಲೋಟ ನೀರಿಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು, ಈ ಸಕ್ಕರೆ ನೀರಿನಿಂದ ಕಣ್ಣು ತೊಳೆಯುವುದರಿಂದ ಕಣ್ಣಿನಲ್ಲಿರುವ ಕಸ ಹೊರಗೆ ಬರುತ್ತದೆ.
- ಮನೆಯಲ್ಲಿ ದನದ ತುಪ್ಪವಿದ್ದರೆ ಬಿಸಿ ಮಾಡಿ ಅದನ್ನು ಸೋಸಿಕೊಂಡು ಒಂದೆರಡು ಹನಿ ತುಪ್ಪವನ್ನು ಕಣ್ಣಿಗೆ ಬಿಡಿ. ಹೀಗೆ ಮಾಡಿದ್ರೆ ಕಣ್ಣಿನಲ್ಲಿರುವ ಕಸ ಹೊರಗೆ ಬರುತ್ತದೆ.
- ಕಣ್ಣಿಗೆ ಒಂದೆರಡು ಚಮಚ ಹರಳೆಣ್ಣೆ ಹಾಕಿ, ಹೀಗೆ ಮಾಡಿದ್ರೆ ಕಸ ಹೊರಗೆ ಬರುವುದಲ್ಲದೇ ಕಣ್ಣು ಸ್ವಚ್ಛವಾಗುತ್ತದೆ.
ಸೂಚನೆ : ಈ ಸಲಹೆಗಳು ಸೇರಿದಂತೆ ವಿಷಯಗಳು ಮಾಹಿತಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸೂಕ್ತ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸುವುದು ಉತ್ತಮ .
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ