AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ ಒಂದು ತಪ್ಪು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳಬಹುದು

ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವ ಅಭ್ಯಾಸ ಇರುವವರು ತಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಸಹ ಗಂಭೀರ ಸೋಂಕಿಗೆ ಕಾರಣವಾಗಬಹುದು. ಅಲ್ಲದೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಅಪಾಯಕಾರಿ ಪರಾವಲಂಬಿಗಳು (Parasites) ಕಣ್ಣಿಗೆ ಪ್ರವೇಶಿಸಿ ದೃಷ್ಟಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಮತ್ತು ಕಣ್ಣಿನ ಆರೋಗ್ಯ ಕಾಪಾಡಲು ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ ಒಂದು ತಪ್ಪು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳಬಹುದು
Eye Infection AlertImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 30, 2026 | 6:01 PM

Share

ಮುಖ್ಯಾಂಶಗಳು

  • ಕಣ್ಣಿನ ಆರೋಗ್ಯ ಕಾಪಾಡಲು ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಪಾಲಿಸಬೇಕಾದ ಪ್ರಮುಖ ನಿಯಮಗಳು
  • ಕಣ್ಣಿನ ಕಾರ್ನಿಯಾ ಹಾನಿಯಾಗದಿರಲು ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು ತಿಳಿಯಬೇಕಾದ ಸಂಗತಿಗಳು
  • ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ಈ ಕೆಲಸ ಮಾಡಬೇಡಿ! ವೈದ್ಯರ ಗಂಭೀರ ಎಚ್ಚರಿಕೆ

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಅಮೂಲ್ಯ ಅಂಗಗಳಲ್ಲಿ ಒಂದಾಗಿವೆ. ಆದ್ದರಿಂದ ಅವುಗಳ ಆರೈಕೆಯಲ್ಲಿ ಸ್ವಲ್ಪ ನಿರ್ಲಕ್ಷ್ಯವೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಕಾಂಟ್ಯಾಕ್ಟ್ ಲೆನ್ಸ್ (Contact Lens) ಬಳಸುವವರು ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಅಪಾಯಕಾರಿ ಪರಾವಲಂಬಿಗಳು (Parasites) ಕಣ್ಣಿಗೆ ಪ್ರವೇಶಿಸಿ ದೃಷ್ಟಿಗೆ ಶಾಶ್ವತ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

ಇತ್ತೀಚೆಗೆ ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಕುದುರೆ ಲಾಯವನ್ನು ಸ್ವಚ್ಛಗೊಳಿಸುವ ವೇಳೆ ಮಣ್ಣು ಮತ್ತು ಕೊಳಕು ನೀರು ಕಣ್ಣಿಗೆ ಬಿದ್ದಿದ್ದರಿಂದ ಅವರು ಮುಖವನ್ನು ಚೆನ್ನಾಗಿ ತೊಳೆದರು. ಆದರೆ ಕಾಂಟ್ಯಾಕ್ಟ್ ಲೆನ್ಸ್ ತೆಗೆದಿರಲಿಲ್ಲ. ಕೆಲವು ದಿನಗಳ ಬಳಿಕ ಕಣ್ಣಿನಲ್ಲಿ ತೀವ್ರ ನೋವು, ಕೆಂಪಾಗುವುದು ಹಾಗೂ ಮಸುಕಾದ ದೃಷ್ಟಿ ಕಾಣಿಸಿಕೊಂಡಿತು. ವೈದ್ಯಕೀಯ ಪರೀಕ್ಷೆಯಲ್ಲಿ ಅಕಂಥಾಮೋಬಾ ಅಥವಾ ಅಕಾಂತಮೀಬಾ (Acanthamoeba) ಎಂಬ ಅಪಾಯಕಾರಿ ಪರಾವಲಂಬಿಯಿಂದ ಅಕಾಂತಮೀಬಾ ಕೆರಟೈಟಿಸ್ (Acanthamoeba Keratitis) ಸೋಂಕು ತಗುಲಿರುವುದು ಪತ್ತೆಯಾಯಿತು. ಸೋಂಕಿನಿಂದ ಕಣ್ಣಿನ ಕಾರ್ನಿಯಾ ಹಾನಿಗೊಳಗಾಗಿದ್ದು, ಭವಿಷ್ಯದಲ್ಲಿ ಕಾರ್ನಿಯಾ ಟ್ರಾನ್ಸ್‌ಪ್ಲಾಂಟ್ ಅಗತ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಅಕಾಂತಮೀಬಾ ಎಂದರೇನು?

ಸೂಕ್ಷ್ಮ ಪರಾವಲಂಬಿಯಾಗಿದ್ದು, ಇದು ಮಣ್ಣು, ಧೂಳು, ಕೆರೆ ಮತ್ತು ನದಿ ನೀರು, ಕೊಳಕು ನೀರು, ಟ್ಯಾಪ್ ನೀರು, ಈಜುಕೊಳದ ನೀರಿನಲ್ಲಿ ಕಂಡುಬರುತ್ತದೆ. ಇದು ಕಣ್ಣಿನ ಕಾರ್ನಿಯಾಗೆ ತಗುಲಿದರೆ Acanthamoeba Keratitis ಎಂಬ ಗಂಭೀರ ಸೋಂಕು ಉಂಟಾಗಬಹುದು. ಈ ಸೋಂಕು ಹೆಚ್ಚಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಲ್ಲಿ ಕಂಡುಬರುತ್ತದೆ.

ಈ ಸೋಂಕಿನ ಪ್ರಮುಖ ಲಕ್ಷಣಗಳು

  • ಕಣ್ಣು ಕೆಂಪಾಗುವುದು
  • ತೀವ್ರ ಕಣ್ಣಿನ ನೋವು
  • ಮಸುಕಾದ ದೃಷ್ಟಿ
  • ಬೆಳಕನ್ನು ನೋಡಲು ಕಷ್ಟವಾಗುವುದು
  • ಕಣ್ಣಿನಿಂದ ನೀರು ಹರಿಯುವುದು
  • ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತೆ ಅನುಭವ
  • ಕಾಂಟ್ಯಾಕ್ಟ್ ಲೆನ್ಸ್ ಧರಿಸಲು ತೊಂದರೆ

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಬೇಕು.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • ಲೆನ್ಸ್ ಹಾಕುವ ಮೊದಲು ಮತ್ತು ತೆಗೆಯುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ.
  • ಲೆನ್ಸ್ ಧರಿಸಿ ಈಜುವುದು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಿ.
  • ಮಣ್ಣು ಅಥವಾ ಕೊಳಕು ನೀರು ಕಣ್ಣಿಗೆ ತಗುಲಿದರೆ ತಕ್ಷಣ ಲೆನ್ಸ್ ತೆಗೆದು ವೈದ್ಯರನ್ನು ಸಂಪರ್ಕಿಸಿ.
  • ಲೆನ್ಸ್‌ಗಳನ್ನು ಯಾವಾಗಲೂ ಶಿಫಾರಸು ಮಾಡಿದ ಕ್ಲೀನಿಂಗ್ ಸೊಲ್ಯೂಷನ್‌ನಲ್ಲೇ ಇಡಿ.
  • ಹಳೆಯ ಸೊಲ್ಯೂಷನ್ ಅನ್ನು ಮರುಬಳಕೆ ಮಾಡಬೇಡಿ.
  • ಲೆನ್ಸ್ ಕೇಸ್ ಅನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಿ.
  • ಅವಧಿ ಮೀರಿದ ಲೆನ್ಸ್ ಬಳಸಬೇಡಿ.
  • ರಾತ್ರಿ ಮಲಗುವಾಗ (ವೈದ್ಯರ ಸಲಹೆ ಇಲ್ಲದಿದ್ದರೆ) ಲೆನ್ಸ್ ಧರಿಸಬೇಡಿ.

ಇದನ್ನೂ ಓದಿ: ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ

ಯಾರಿಗೆ ಸೋಂಕಿನ ಅಪಾಯ ಹೆಚ್ಚು?

  • ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು
  • ಈಜುಕೊಳದಲ್ಲಿ ಲೆನ್ಸ್ ಧರಿಸುವವರು
  • ಕೊಳಕು ನೀರಿನಲ್ಲಿ ಕೆಲಸ ಮಾಡುವವರು
  • ಲೆನ್ಸ್ ಸ್ವಚ್ಛತೆಯನ್ನು ನಿರ್ಲಕ್ಷಿಸುವವರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು

ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ

  • ಕಣ್ಣಿನ ಆರೋಗ್ಯ ಕಾಪಾಡಲು ಕ್ಯಾರೆಟ್
  • ಪಾಲಕ್ ಹಾಗೂ ಹಸಿರು ಸೊಪ್ಪುಗಳು
  • ಮೊಟ್ಟೆ
  • ಮೀನು (ಒಮೆಗಾ-3)
  • ಬಾದಾಮಿ
  • ಕಿತ್ತಳೆ, ನಿಂಬೆಹಣ್ಣು
  • ವಿಟಮಿನ್ A, C ಮತ್ತು E ಸಮೃದ್ಧ ಆಹಾರಗಳು

ಕಣ್ಣಿನ ಸೋಂಕು ತಡೆಯಲು ಹೆಚ್ಚುವರಿ ಸಲಹೆಗಳು

  • ಇತರರ ಕಾಂಟ್ಯಾಕ್ಟ್ ಲೆನ್ಸ್ ಬಳಸಬೇಡಿ.
  • ಕಣ್ಣಿಗೆ ಧೂಳು ಬಿದ್ದರೆ ಉಜ್ಜಬೇಡಿ.
  • ಕಣ್ಣಿನ ಮೇಕಪ್ ಅನ್ನು ಸಮಯಕ್ಕೆ ತೆಗೆದುಹಾಕಿ.
  • ಕಣ್ಣಿನ ಡ್ರಾಪ್ಸ್ ಅನ್ನು ವೈದ್ಯರ ಸಲಹೆಯಂತೆ ಮಾತ್ರ ಬಳಸಿ.
  • ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ.

ಗಮನಿಸಿ: ಕಾಂಟ್ಯಾಕ್ಟ್ ಲೆನ್ಸ್ ಸರಿಯಾದ ರೀತಿಯಲ್ಲಿ ಬಳಸಿದರೆ ಸಾಮಾನ್ಯವಾಗಿ ಸುರಕ್ಷಿತವಾಗಿರುತ್ತವೆ. ಆದರೆ ಸ್ವಚ್ಛತೆಯ ನಿಯಮಗಳನ್ನು ಪಾಲಿಸದಿದ್ದರೆ ಗಂಭೀರ ಕಣ್ಣಿನ ಸೋಂಕು ಹಾಗೂ ದೃಷ್ಟಿ ಕಳೆದುಕೊಳ್ಳುವ ಅಪಾಯ ಉಂಟಾಗಬಹುದು. ಕಣ್ಣಿನ ಯಾವುದೇ ಅಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us