
ಪ್ರತಿನಿತ್ಯ ಆರೋಗ್ಯಕರ ಆಹಾರ ಸೇವಿಸುವುದು ಮಾತ್ರವಲ್ಲ, ಚೆನ್ನಾಗಿ ನಿದ್ರೆ (Sleep) ಮಾಡುವುದು ಕೂಡ ವ್ಯಕ್ತಿ ಆರೋಗ್ಯವಾಗಿರುವುದಕ್ಕೆ ಮುಖ್ಯವಾಗುತ್ತದೆ. ಆದರೆ ಪ್ರಸ್ತುತ ಸಮಯದಲ್ಲಿ, ಅನೇಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿದ್ರಾಹೀನತೆಯೂ ಒಂದು. ಒಬ್ಬ ವ್ಯಕ್ತಿ ನಿರ್ದಿಷ್ಟ ಸಮಯಕ್ಕಿಂತ ಕಡಿಮೆ ಗಂಟೆಗಳ ಕಾಲ ನಿದ್ರೆ ಮಾಡಿದರೆ, ವಿವಿಧ ಆರೋಗ್ಯ (Health) ಸಮಸ್ಯೆಗಳು ಉದ್ಭವಿಸಬಹುದು. ಈ ರೀತಿ ಸಮಸ್ಯೆ ಉದ್ಭವ ಆಗುವುದಕ್ಕೆ ನಿಮ್ಮ ಆಹಾರ ಪದ್ಧತಿಯೂ ಕಾರಣವಾಗಬಹುದು. ಆದ್ದರಿಂದ, ಕಣ್ಣತುಂಬಾ ಒಳ್ಳೆಯ ನಿದ್ರೆ ಮಾಡಬೇಕು ಅಂದ್ರೆ ಮಲಗುವ ಮೊದಲು ಕೆಲವು ಆಹಾರಗಳಿಂದ ದೂರವಿರಿ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಆ ಆಹಾರಗಳು ಯಾವುವು? ಯಾಕೆ ಮಲಗುವ ಮೊದಲು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
ಕೊಬ್ಬು ಮತ್ತು ಪ್ರೋಟೀನ್‌ಗಳು ಮಾಂಸಾಹಾರದಲ್ಲಿ ಹೇರಳವಾಗಿರುತ್ತದೆ. ಇದು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ರಾತ್ರಿ ಸಮಯದಲ್ಲಿ ಅಪ್ಪಿತಪ್ಪಿಯೂ ಮಾಂಸಾಹಾರಗಳ ಸೇವನೆ ಮಾಡಬೇಡಿ. ಎಷ್ಟೇ ಇಷ್ಟವಾದ ಆಹಾರವಾಗಿದ್ದರೂ ಅವುಗಳಿಂದ ದೂರವಿರುವುದು ಉತ್ತಮ.
ಯಾವುದೇ ಸಮಯವಾಗಿರಲಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ರಾತ್ರಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತಷ್ಟು ಕಷ್ಟಕರವಾಗಬಹುದು. ಇದು ಆಮ್ಲೀಯತೆಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಈ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಡಾ. ಸೌರಭ್ ಸೇಥಿ
ಊಟದ ನಂತರ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರುತ್ತದೆ. ಆದರೆ, ಕಾಫಿಯಲ್ಲಿ ಹೆಚ್ಚಿನ ಕೆಫೀನ್ ಅಂಶ ಇರುವುದರಿಂದ ಇದು ನಿದ್ರಾಹೀನತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಸಂಜೆ ನಂತರ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಕೆಲವರು ರಾತ್ರಿ ಊಟ ಮಾಡಿದ ನಂತರ ಚಹಾ ಕುಡಿಯುತ್ತಾರೆ. ಕಾಫಿಯಂತೆಯೇ, ಚಹಾ ಎಲೆಗಳಲ್ಲಿಯೂ ಕೆಫೀನ್ ಅಂಶವಿರುತ್ತದೆ. ಹಾಗಾಗಿ ಮಲಗುವ ಮುನ್ನ ಚಹಾ ಸೇವಿಸುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರಬಹುದು.
ಜಂಕ್ ಫುಡ್ ನಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಇರುತ್ತದೆ. ಇಂತಹ ಆಹಾರಗಳು ಬೇಗನೆ ಜೀರ್ಣವಾಗುವುದಿಲ್ಲ. ಹಾಗಾಗಿ ರಾತ್ರಿ ಸಮಯದಲ್ಲಿ ಜಂಕ್ ಫುಡ್ ತಿನ್ನುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ಮಾತ್ರವಲ್ಲ ಈ ರೀತಿಯ ಆಹಾರಗಳು ಇತರ ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ