ಬೆಂಗಳೂರು: ಮತ್ತೆ ತಲೆ ಎತ್ತಿದ ಪ್ಲಾಸ್ಟಿಕ್ ಫುಡ್ ಪೇಪರ್, ಆಹಾರದ ಜೊತೆ ಕ್ಯಾನ್ಸರ್ ಕಾರಕ ಉಚಿತ
The Karnataka Food Safety Department: ಇತ್ತೀಚೆಗೆ ನಾವು ತಿನ್ನುವ ಆಹಾರದಲ್ಲಿ ಗುಣಮಟ್ಟವೇ ಇಲ್ಲ. ಜೊತೆಗೆ ಕ್ಯಾನ್ಸರ್ ಕಾರಕ ಬಣ್ಣಗಳ ಬಳಕೆ. ಇವುಗಳೆಲ್ಲದರ ನಡುವೆ ಈಗ ಅಪಾಯಕಾರಿ ಪ್ಲಾಸ್ಟಿಕ್ ಕೂಡಾ ಮತ್ತೆ ಸೇರಿಕೊಳ್ಳತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವಡೆ ನಿಷೇಧದ ನಡುವೆಯೂ ತಿಂಡಿ, ಆಹಾರ ನೀಡಲು ಪ್ಲಾಸ್ಟಿಕ್ ಬಳಕೆ ಮುಂದುವರೆದಿದ್ದು ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಅಸಲಿ ಸತ್ಯ ಬಯಲಾಗಿದೆ.

ಬೆಂಗಳೂರು, ಜುಲೈ 22: ಆಹಾರ ಇಲಾಖೆ (Health Department) ಆಸುರಕ್ಷಿತ ಆಹಾರಗಳ ವಿರುದ್ಧ ಸಮರ ಸಾರಿದೆ. ಕಳಪೆ ಹಾಗೂ ರಾಸಾಯನಿಕ ಬಳಕೆಯ ಆಹಾರಕ್ಕೆ ಕಡಿವಾಣ ಹಾಕಿದೆ. ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ (Plastic) ಬಳಸದಂತೆ ಈಗಾಗಲೇ ಎಚ್ಚರಿಕೆ ನೀಡಿದೆ. ಆಹಾರ ಪದಾರ್ಥಗಳನ್ನು ನೀಡಲು ತೆಳ್ಳನೆಯ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ಆರೋಗ್ಯ ಇಲಾಖೆ ನಿಷೇಧಿಸಿದೆ. ಬೆಂಗಳೂರಿನಲ್ಲಿ (Bengaluru) ಆಹಾರ ಇಲಾಖೆಯ ಸೂಚನೆಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎಂದು ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಆಹಾರದ ಜೊತೆ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಉಚಿತ!
ಕೆಲ ತಿಂಗಳ ಹಿಂದೆಯಷ್ಟೇ ಆಹಾರ ಇಲಾಖೆ, ಇಡ್ಲಿ ತಯಾರಿಗೆ ಮತ್ತು ಆಹಾರ ವಿತರಣೆಗೆ ಪ್ಲಾಸ್ಟಿಕ್ ಕವರ್ ಬಳಸುವುದನ್ನು ನಿಷೇಧಿಸಿತ್ತು. ಪ್ಲಾಸ್ಟಿಕ್ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವ ಬಗ್ಗೆ ಮತ್ತು ಅದರಿಂದಾಗುವ ಹಾನಿಗಳ ಬಗ್ಗೆ ಟಿವಿ9 ಸರಣಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆಹಾರ ಇಲಾಖೆ ಕಠಿಣ ಕ್ರಮ ಕೈಗೊಂಡಿತ್ತು. ನಂತರದಲ್ಲಿ ಆಹಾರ ತಿಂಡಿ ಪಾರ್ಸೆಲ್ ನೀಡಲು ಪ್ಲಾಸ್ಟಿಕ್ ಬಳಕೆ ಮಾಡುವ ಹೋಟೆಲ್ಗಳ ಮೇಲೆ ದಾಳಿ ಮಾಡಿ ಆಹಾರ ಇಲಾಖೆ ಅಧಿಕಾರಿಗಳು ನೋಟಿಸ್ ಕೂಡಾ ನೀಡಿದ್ದರು. ಆದ್ರೆ ಈಗ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಎಲ್ಲಡೆ ಮತ್ತೆ ಪ್ಲಾಸ್ಟಿಕ್ ಬಳಕೆ ಮತ್ತೆ ತಲೆ ಎತ್ತಿದೆ.
‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಉಲ್ಲಂಘನೆ

ರಾಜಧಾನಿಯಲ್ಲಿ ಬಹುತೇಕ ಬೀದಿಬದಿ ಹೋಟೆಲ್ಗಳಲ್ಲಿ ಆಹಾರ ನೀಡಲು ಪ್ಲಾಸ್ಟಿಕ್ ಪೇಪರ್ ಬಳಕೆ ಮಾಡಲಾಗುತ್ತಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಜಯನಗರ, ಶಾಂತಿನಗರ, ಮಲ್ಲೇಶ್ವರಂ ಅನೇಕ ಕಡೆ ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದ್ದು, ಆಹಾರ ಪದಾರ್ಥಗಳ ನೀಡುವಲ್ಲಿ ಹಾಗೂ ಪಾರ್ಸೆಲ್ಗೆ ಪ್ಲಾಸ್ಟಿಕ್ ನೀಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ‘ಇನ್ಮುಂದೆ ಮಾಡಲ್ಲ’ ಎಂದು ನುಣುಚಿಕೊಂಡು ಬಿಡುತ್ತಾರೆ.
ಕ್ಯಾನ್ಸರ್ ಕಾರಕ ಅಂಶ ದೇಹ ಸೇರುವ ಭೀತಿ
ತೆಳುವಾದ ಪ್ಲಾಸ್ಟಿಕ್ ಪೇಪರಗಳು ಆಹಾರದ ಬಿಸಿಗೆ ಕರಗುತ್ತವೆ. ಬಿಸಿಯಾದ ಆಹಾರ ತಿಂಡಿಗಳ ಜೊತೆ ಬಳಸುವುದರಿಂದ ಕ್ಯಾನ್ಸರ್ ಕಾರಕ ಅಂಶ ದೇಹ ಸೇರುತ್ತದೆ. ಈ ಬಗ್ಗೆ ತಜ್ಞರು ಎಚ್ಚರಿಸಿದರೂ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದರೂ ಆಹಾರ ಇಲಾಖೆ ಮೌನವಾಗಿದೆ.
ಬಿಸಿಯಾದ ಆಹಾರಗಳ ಜೊತೆ ಪ್ಲಾಸ್ಟಿಕ್ ಬಳಕೆ ಒಳ್ಳೆಯದಲ್ಲ. ಮೈಕ್ರೋ ಪ್ಲಾಸ್ಟಿಕ್ ಆಹಾರದ ಜೊತೆ ಸೇರಿದರೆ ನಾನಾ ಆರೋಗ್ಯದ ಸಮಸ್ಯೆ ಬರುತ್ತದೆ ಎಂದು ಆಹಾರ ತಜ್ಞರಾದ ಡಾ ಕೀರ್ತಿ ಹಿರಿಸಾವೆ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹೆಚ್ಚಾಯ್ತು ಡೆಂಗ್ಯೂ, ಮನೆ ಬಳಿ ಸ್ವಚ್ಛತೆ ಕಾಪಾಡದಿದ್ದರೆ ಬೀಳಲಿದೆ ಭಾರೀ ಮೊತ್ತದ ದಂಡ
ಒಟ್ಟಿನಲ್ಲಿ ನಗರದ ಅನೇಕ ಕಡೆಗಳಲ್ಲಿ ಆಹಾರ ತಯಾರಕರು ಮುನ್ನೆಚ್ಚರಿಕೆ ಕ್ರಮ ವಹಿಸದೆ, ಮತ್ತೆ ಪ್ಲಾಸ್ಟಿಕ್ ಬಳಕೆಗೆ ಮುಂದಾಗಿದ್ದು ಕ್ಯಾನ್ಸರ್ಗೆ ಅಹ್ವಾನ ನೀಡುತ್ತಾ ಇದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಗಮನ ಹರಿಸಬೇಕಿದೆ. ಅಪಾಯಕಾರಿ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Tue, 22 July 25