Antibiotic Resistance: ಪ್ರತಿಕಾಯಗಳಿಗೆ ಪ್ರತಿರೋಧ; ಕೊವಿಡ್ ನಂತರ ಆರೋಗ್ಯಕ್ಕೆ ಎದುರಾಗಿದೆ ದೊಡ್ಡ ಸಮಸ್ಯೆ
Antibiotic Residues: ಔಷಧಿಗಳಿಗೆ ಅನುಮೋದನೆ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಇರುವ ಗೊಂದಲವು ಆಂಟಿಬಯೊಟಿಕ್ಗಳ ಬಳಕೆಯ ವಿಚಾರದಲ್ಲಿ ದೇಶಕ್ಕೆ ದೊಡ್ಡ ಸಮಸ್ಯೆ ತಂದೊಡ್ಡಿದೆ.
ಬೆಂಗಳೂರು: ಕೊವಿಡ್-19 ಪಿಡುಗು ದೇಶದಲ್ಲಿ ವ್ಯಾಪಿಸುವ ಮೊದಲು ಮತ್ತು ನಂತರ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾದ ಅಝಿಥ್ರೋಮೈಸಿನ್ (azithromycin) ಪ್ರತಿಕಾಯ (antibiotics – ಆಂಟಿಬಯೋಟಿಕ್) ಔಷಧಿಗೆ ಕೇಂದ್ರದ ಔಷಧ ನಿಯಂತ್ರಕರ ಅನುಮೋದನೆಯೇ ಸಿಕ್ಕಿರಲಿಲ್ಲ ಎಂಬ ಆಘಾತಕಾರಿ ಸಂಗತಿ ಇದೀಗ ಬಯಲಾಗಿದೆ. ಈ ಕುರಿತು ಆಗ್ನೇಯ ಏಷ್ಯಾದ ಆರೋಗ್ಯ ಪರಿಸ್ಥಿತಿ ಕುರಿತು ‘ಲ್ಯಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ‘ಪ್ರಾದೇಶಿಕ ಆರೋಗ್ಯ’ ವರದಿಯು ಸಂಚಲನ ಉಂಟು ಮಾಡಿದೆ. ಲ್ಯಾನ್ಸೆಟ್ನಲ್ಲಿ ಪ್ರಕಟವಾಗಿರುವ ಮಾಹಿತಿ ಆಧರಿಸಿ ‘ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿದೆ. ‘ಸಂಶೋಧಕರು ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ 2019ರಲ್ಲಿ (ಕೊವಿಡ್ಗೆ ಮೊದಲು) ಬಳಕೆಯಾದ ಆಂಟಿಬಯೋಟಿಕ್ಗಳ ಮಾಹಿತಿ ವಿಶ್ಲೇಷಿಸಿದರು. ಈ ವೇಳೆ ಬಹುತೇಕ ಔಷಧಿಗಳನ್ನು ಅಸಂಬದ್ಧ ರೀತಿಯಲ್ಲಿ ಬಳಸಿದ್ದು ಗಮನಕ್ಕೆ ಬಂದಿದೆ’ ಎಂದು ಲ್ಯಾನ್ಸೆಟ್ ವರದಿಯು ಉಲ್ಲೇಖಿಸಿದೆ.
ಭಾರತೀಯರಲ್ಲಿ ಇತ್ತೀಚಿಗೆ ಆಂಟಿಬಯೊಟಿಕ್ಗಳು ಸಮರ್ಪಕವಾಗಿ ಪರಿಣಾಮ ಬೀರುತ್ತಿಲ್ಲ. ಭಾರತೀಯರ ದೇಹಗಳಲ್ಲಿ ಪ್ರತಿಕಾಯಗಳಿಗೆ ಪ್ರತಿರೋಧ ಬೆಳೆದಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಬಹುದು ಎಂದು ಅಧ್ಯಯನವು ಹೇಳಿದೆ. ಭಾರತದಲ್ಲಿ ಅಝಿಥ್ರೋಮೈಸಿನ್ ಸೇರಿದಂತೆ ಹಲವು ರೀತಿಯ ಆಂಟಿಬಯೊಟಿಕ್ ಔಷಧಿಗಳು ಬಳಕೆಯಾಗುತ್ತಿವೆ. ಅಝಿಥ್ರೋಮೈಸಿನ್ನಂಥ ಔಷಧಿಯನ್ನು ಅತ್ಯಂತ ವಿವೇಚನೆಯಿಂದ ಬಳಸಬೇಕು. ಬ್ರಾಡ್-ಸ್ಪೆಕ್ಟ್ರಮ್ ಆಂಟಿಬಯೊಟಿಕ್ಸ್ (broad-spectrum antibiotics) ಎನ್ನಲಾಗುವ ಈ ಔಷಧಿಗಳನ್ನು ಶಿಫಾರಸು ಮಾಡುವ ಮೊದಲು ವೈದ್ಯರಿಗೆ ‘ಬಹುವಿಧ ಬ್ಯಾಕ್ಟಿರಿಯಾ ಸೋಂಕು ಅಥವಾ ರೋಗಿಯು ಪ್ರಾಣಾಪಾಯ ಸ್ಥಿತಿಯಲ್ಲಿರುವ ಬಗ್ಗೆ ಪ್ರಬಲವಾದ ಅನುಮಾನ ಅಥವಾ ಖಾತ್ರಿ ಇರಬೇಕು. ಅಂಥ ಸಂದರ್ಭದಲ್ಲಿ ಮಾತ್ರ ಬ್ರಾಡ್-ಸ್ಪೆಕ್ಟ್ರಮ್ ಆಂಟಿಬಯೊಟಿಕ್ಸ್ ಕೊಡಬೇಕು’ ಎಂದು ಅಧ್ಯಯನ ತಂಡದ ನಾಯಕತ್ವ ವಹಿಸಿದ್ದ ಡಾ ಮೊಹಮದ್ ಎಸ್.ಹಾಫಿ ಹೇಳಿದ್ದಾರೆ.
ಶ್ವಾಸಕೋಶದ ಮೇಲ್ಮಟ್ಟದಲ್ಲಿ ಕಂಡುಬರುವ ಉಸಿರಾಟ ಸಮಸ್ಯೆಗೆ (ಸೋಂಕು) ವೈರಸ್ಗಳು ಮುಖ್ಯ ಕಾರಣ. ಈ ಸಮಸ್ಯೆಗೂ ಅಝಿಥ್ರೋಮೈಸಿನ್ನಂಥ ಪ್ರಬಲ ಪ್ರತಿಕಾಯಗಳನ್ನು ಶಿಫಾರಸು ಮಾಡುವುದು ತಪ್ಪು. ಇದರಿಂದ ರೋಗಿಯ ದೇಹದಲ್ಲಿರುವ ಪ್ರತಿಕಾಯಗಳಿಗೆ ಸ್ಪಂದಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯು ತಿಳಿಸಿದೆ. ಈ ಅಧ್ಯಯನಕ್ಕೆ ದೆಹಲಿಯಲ್ಲಿರುವ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಂಶೋಧಕರು ಸಹ ನೆರವಾಗಿದ್ದಾರೆ.
ಒಂದು ದಿನಕ್ಕೆ ನಿರ್ದಿಷ್ಟವಾಗಿ ಎಷ್ಟು ಡೋಸ್ ಆಂಟಿಬಯೊಟಿಕ್ಸ್ ಕೊಡಬೇಕು ಎನ್ನುವ ನಿಯಮಗಳನ್ನು ಉಲ್ಲಂಘಿಸಿ ಸರಾಸರಿ ಶೇ 44ರಷ್ಟು ಔಷಧಗಳನ್ನು ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ 1,098 ಔಷಧ ಸೂತ್ರಗಳಿಂದ ತಯಾರಾದ 10,100 ವಿಶಿಷ್ಟ ಆಂಟಿಬಯೊಟಿಕ್ಸ್ ಔಷಧಿಗಳು (ಬ್ರಾಂಡ್) ಮಾರಾಟವಾಗುತ್ತಿವೆ. ಈ ಪೈಕಿ ಕೇವಲ ಶೇ 46 ರಷ್ಟು ಔಷಧಿಗಳಿಗೆ ಮಾತ್ರ (ಶೇ 19 ಔಷಧ ಸೂತ್ರಗಳು) ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (Central Drugs Standard Control Organisation – CDSCO) ಶಿಫಾರಸು ಮಾಡಿರುವ ಮಾನದಂಡಗಳಿಗೆ ಅನುಗುಣವಾಗಿವೆ. ಈ ಸಂಸ್ಥೆಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೆಲವು ರಾಜ್ಯಗಳಲ್ಲಿ ಲೈಸೆನ್ಸ್ ನೀಡಿಕೆಯಲ್ಲಿ ಇರುವ ಲೋಪಗಳನ್ನು ಬಳಸಿಕೊಳ್ಳುತ್ತಿರುವ ಕಂಪನಿಗಳು ಕೇಂದ್ರದ ನಿಯಂತ್ರಕರ ಕಣ್ತಪ್ಪಿಸಿ ಅನುಮೋದನೆ ಪಡೆದುಕೊಳ್ಳುತ್ತಿವೆ ಎಂದು ‘ಲ್ಯಾನ್ಸೆಟ್’ ವರದಿಯು ಎಚ್ಚರಿಸಿದೆ.
ಔಷಧಿಗಳಿಗೆ ಅನುಮೋದನೆ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಇರುವ ಗೊಂದಲವು ಆಂಟಿಬಯೊಟಿಕ್ಗಳ ಬಳಕೆಯ ವಿಚಾರದಲ್ಲಿ ದೇಶಕ್ಕೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಶೀಘ್ರದಲ್ಲಿ ಈ ಬಗ್ಗೆ ಗಮನ ಹರಿಸದಿದ್ದರೆ ಭಾರತೀಯರ ದೇಹಗಳು ಆಂಟಿಬಯೊಟಿಕ್ಗಳು ಉಗ್ರ ಪ್ರತಿರೋಧ ಬೆಳೆಸಿಕೊಂಡು, ದೇಶಕ್ಕೆ ದೊಡ್ಡ ಸಮಸ್ಯೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಂಟಿಬಯೋಟಿಕ್ಗಳ ವಿವೇಚನಾ ರಹಿತ ಬಳಕೆಯ ಬಗ್ಗೆಯೂ ಲ್ಯಾನ್ಸೆಟ್ ಅಧ್ಯಯನ ವರದಿಯು ಗಮನ ಸೆಳೆದಿದೆ. ಜನವಸತಿಯ ಪರಿಸರದಲ್ಲಿ ಎಲ್ಲೆಂದರಲ್ಲಿ ಆಂಟಿಬಯೊಟಿಕ್ಗಳ ಉಳಿಕೆ (residues) ಕಂಡುಬರುತ್ತಿದೆ. ಜಲಮೂಲಗಳು, ಹಾಲು, ಮೀನು ಮತ್ತು ಇತರ ಆಹಾರ ಉತ್ಪನ್ನಗಳಲ್ಲಿ ಆಂಟಿಬಯೊಟಿಕ್ಗಳ ಉಳಿಕೆ ಕಂಡುಬಂದಿವೆ. ಇದರ ಬಗ್ಗೆಯೂ ಶೀಘ್ರ ಗಮನಹರಿಸಬೇಕಿದೆ ಎಂದು ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾಗಿರುವ ಡಾ ಆರ್ ಅರವಿಂದ್ ಎಚ್ಚರಿಸಿದ್ದಾರೆ.
Published On - 11:26 am, Wed, 7 September 22